ಬೆಂಗಳೂರು :  ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ರಚನೆ ಹಾಗೂ ಸಮನ್ವಯ ಸಮಿತಿಯ ಮೊದಲ ಸಭೆಗೂ ಮೊದಲೇ ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದ್ದ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ರದ್ದುಗೊಳಿಸಿರುವುದು ಕಾಂಗ್ರೆಸ್‌ ಪಾಳೆಯದಲ್ಲಿ ತೀವ್ರ ಅಸಮಾಧಾನ ಸೃಷ್ಟಿಸಿದೆ.

ಸಮನ್ವಯ ಸಮಿತಿ ಸಭೆ ನಡೆಯುವ ಮೊದಲೇ ಏಕಾಏಕಿ ಹಾಲಿ ನಿಗಮ-ಮಂಡಳಿಗಳ ಅಧ್ಯಕ್ಷರು, ಸದಸ್ಯರ ಅಧಿಕಾರ ಮೊಟಕು ಗೊಳಿಸಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆದೇಶಿಸಿದ್ದಾರೆ.

ಕಳೆದ ಹನ್ನೊಂದು ತಿಂಗಳ ಹಿಂದೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಹಂತದಲ್ಲಿ 80 ಮಂದಿ ನಿಗಮ-ಮಂಡಳಿ ಅಧ್ಯಕ್ಷರು ಹಾಗೂ 20ಕ್ಕೂ ಹೆಚ್ಚು ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿದ್ದರು. ಈ ವೇಳೆ ಮುಂದಿನ ಆದೇಶದವರೆಗೂ ಅವರ ಅಧಿಕಾರಾವಧಿ ಮುಂದುವರೆಯುವುದಾಗಿ ನೇಮಕಾತಿ ಆದೇಶದಲ್ಲಿ ಸೂಚಿಸಲಾಗಿತ್ತು. ಆದರೆ, ಸೋಮವಾರ ಏಕಾಏಕಿ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರ ಹುದ್ದೆ ತೆರವುಗೊಳಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.