ಇದು ಸಿಎಂ ಸಿದ್ದರಾಮಯ್ಯನವರ ನೇರ ಮೇಲುಸ್ತುವಾರಿಯಲ್ಲಿ ನಡೆಯುವ ಚುನಾವಣಾ ಪ್ರಚಾರವಾಗಿದೆ. ಈ 3 ಕಂಪನಿಗಳ ಕಾರ್ಯನಿರ್ವಹಣೆಗೂ ಕೆಪಿಸಿಸಿ ಚಟುವಟಿಕೆಗೂ ಯಾವುದೇ ಸಂಬಂಧವಿರುವುದಿಲ್ಲ. ಸಿಎಂ ವೈಯಕ್ತಿಕವಾಗಿ ರೂಪಿಸಿರುವ ಚುನಾವಣಾ ತಂತ್ರವಾಗಿದೆ.
ಬೆಂಗಳೂರು(ಅ. 11): ಸತತ ಎರಡು ಬಾರಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಪಣ ತೊಟ್ಟಿರುವ ಕಾಂಗ್ರೆಸ್ ಪಕ್ಷ ಇದೀಗ ತನ್ನ ಚುನಾವಣಾ ಅಭಿಯಾನಕ್ಕೆ ಹೈಟೆಕ್ ಸ್ಪರ್ಶ ನೀಡಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಕಾಂಗ್ರೆಸ್ ಪಕ್ಷವು ಕಾರ್ಪೊರೇಟ್ ಶೈಲಿಯಲ್ಲಿ ಚುನಾವಣಾ ರಣತಂತ್ರ ರೂಪಿಸಿದೆ. ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಕಾರ್ಯಕರ್ತರಿಗಿಂತ ಮುಂಚೆಯೇ 3 ಖಾಸಗಿ ಸಂಸ್ಥೆಗಳು ಕಾಂಗ್ರೆಸ್ ಪರವಾಗಿ ಅಖಾಡಕ್ಕೆ ಇಳಿದಿವೆ. ಚುನಾವಣೆಯಲ್ಲಿ ಕಾರ್ಪೊರೇಟ್ ಕಂಪನಿಗಳಿಗೇನು ಕೆಲಸ? ಬ್ಯಾನರ್, ಕಟೌಟ್ ಕಟ್ಟಿಸಲಾಗುತ್ತಿದೆಯೇ? ಅಲ್ಲ, ಕಾಂಗ್ರೆಸ್'ನಿಂದ ಪಕ್ಕಾ ಹೈಟೆಕ್ ಅಭಿಯಾನ ನಡೆಯುತ್ತಿದೆ.
ಕಂಪನಿಗಳ ಕೆಲಸವೇನು?
ಜೆಎಂಡಬ್ಲ್ಯೂ, ಆರಿಯನ್ ಮತ್ತು ಗುಜರಾತ್'ನದ್ದೊಂದು ಕಂಪನಿ ಹೀಗೆ ಮೂರು ಸಂಸ್ಥೆಗಳು ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರಕ್ಕಿಳಿದಿವೆ. ಈ ಮೂರೂ ಕಂಪನಿಗಳು ಬೇರೆ ಬೇರೆ ಸ್ತರಗಳಲ್ಲಿ ಕೆಲಸ ನಿರ್ವಹಿಸಲಿವೆ.
* ಒಂದು ಕಂಪನಿಯು ಕ್ರಿಯೇಟಿವಿಟಿ ಮತ್ತು ಪ್ರಚಾರ ತಂತ್ರಗಳನ್ನು ನಿರ್ವಹಿಸುತ್ತದೆ
* ಎರಡನೇ ಕಂಪನಿಯು ಜನರ ನಾಡಿಮಿಡಿತಗಳನ್ನು ಅರಿತು ಯೋಜನೆ ರೂಪಿಸಲು ಸಲಹೆ ನೀಡುತ್ತದೆ
* ಮೂರನೇ ಕಂಪನಿಯು ಸರಕಾರದ ಜನಪ್ರಿಯ ಯೋಜನೆಗಳನ್ನು ಗುರುತಿಸಿ ಅದನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡುತ್ತದೆ.
ಈ ಮೂರು ಕಂಪನಿಗಳ ಪೈಕಿ ಒಂದಾದ ಗುಜರಾತ್'ನ ಕಂಪನಿಯು ಗುಜರಾತ್'ನಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ ಅನುಭವ ಹೊಂದಿದೆ.
ಸಿದ್ದರಾಮಯ್ಯನವರದ್ದೇ ಮಾಸ್ಟರ್'ಪ್ಲಾನ್:
ಇದು ಸಿಎಂ ಸಿದ್ದರಾಮಯ್ಯನವರ ನೇರ ಮೇಲುಸ್ತುವಾರಿಯಲ್ಲಿ ನಡೆಯುವ ಚುನಾವಣಾ ಪ್ರಚಾರವಾಗಿದೆ. ಈ 3 ಕಂಪನಿಗಳ ಕಾರ್ಯನಿರ್ವಹಣೆಗೂ ಕೆಪಿಸಿಸಿ ಚಟುವಟಿಕೆಗೂ ಯಾವುದೇ ಸಂಬಂಧವಿರುವುದಿಲ್ಲ. ಸಿಎಂ ವೈಯಕ್ತಿಕವಾಗಿ ರೂಪಿಸಿರುವ ಚುನಾವಣಾ ತಂತ್ರವಾಗಿದೆ. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ವಾರ್ತಾ ಇಲಾಖೆ ನಿರ್ದೇಶಕ ಡಾ. ಸಿಎಸ್ ಹರ್ಷ ಅವರ ಉಸ್ತುವಾರಿಯಲ್ಲಿ ಈ ಖಾಸಗಿ ಸಂಸ್ಥೆಗಳು ಚುನಾವಣಾ ಪ್ರಚಾರ ಮಾಡಲಿವೆ.
