Asianet Suvarna News Asianet Suvarna News

ಡಿಕೆಶಿ ಬೆನ್ನಲ್ಲೇ ಮತ್ತೆ ಇಬ್ಬರು ಮಾಜಿ ಸಚಿವರಿಗೆ ಜೈಲು ಭೀತಿ?

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನಕ್ಕೊಳಗಾಗಿದ್ದು ಇದರ ಬೆನ್ನಲ್ಲೇ ಮತ್ತಿಬ್ಬರು ಕಾಂಗ್ರೆಸ್‌ನ ಮಾಜಿ ಸಚಿವರಿಗೆ ಬಂಧನ ಭೀತಿ ಎದುರಾಗಿದೆ. ವಿನಯ್ ಕುಲಕರ್ಣಿ ಆರೋಪಿಯಾಗಿರುವ ಯೋಗೀಶ್‌ಗೌಡ ಕೊಲೆ ಪ್ರಕರಣ ಸಿಬಿಐ ತನಿಖೆಗೆ ಒಳಪಡಲಿದೆ. ಹಾಗೆಯೇ ವಿದೇಶದಲ್ಲಿ ಜಾರ್ಜ್ ಅಕ್ರಮ ಆಸ್ತಿ ಮಾಡಿದ್ದಾರೆಂದು ಇಡಿಗೆ ದೂರು ನೀಡಲಾಗಿದೆ.

Karnataka congress Leaders KJ George and Vinay Kulkarni May Arrest In Old Case
Author
Bangalore, First Published Sep 7, 2019, 7:48 AM IST

ಕಾಂಗ್ರೆಸ್‌ನ ವಿನಯ್‌ಕುಲಕರ್ಣಿ, ಜಾರ್ಜ್ ವಿರುದ್ಧ ತನಿಖೆ

1) ವಿದೇಶದಲ್ಲಿ ಅಕ್ರಮ ಆಸ್ತಿ: ಜಾರ್ಜ್ ವಿರುದ್ಧ ಇಡಿಗೆ ದೂರು ಸಲ್ಲಿಕೆ

ಮಾಜಿ ಸಚಿವ ಕೆ.ಜೆ.ಜಾರ್ಜ್ ಮತ್ತವರ ಕುಟುಂಬದ ಸದಸ್ಯರು ವಿದೇಶದಲ್ಲಿ ಆಸ್ತಿ ಹೊಂದಿರುವ ಬಗ್ಗೆ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಯಾವುದೇ ಮಾಹಿತಿ ನೀಡದ ಕಾರಣ ಅವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ಜಾರಿ ನಿರ್ದೇಶನಾ ಲಯಕ್ಕೆ (ಇ.ಡಿ.) ದೂರು ನೀಡಿದೆ

ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಸಿ.ಎನ್. ದೀಪಕ್ ಶುಕ್ರವಾರ ಇ.ಡಿ. ಕಚೇರಿಗೆ ತೆರಳಿ ದೂರು ಸಲ್ಲಿಸಿದರು. ಕೆ.ಜೆ. ಜಾರ್ಜ್ ಅವರು ತಮ್ಮ ಹೆಸರು ಸೇರಿದಂತೆ ಪತ್ನಿ, ಮಗಳು, ಅಳಿಯನ ಹೆಸರಲ್ಲಿ ಅಮೆರಿಕದ ನ್ಯೂಯಾರ್ಕ್ ಹಾಗೂ ಆಸ್ಟ್ರೇಲಿಯಾದಲ್ಲಿ ಆಸ್ತಿ ಹೊಂದಿದ್ದಾರೆ. ಈ ಬಗ್ಗೆ ದಾಖಲೆ ಮತ್ತು ವಿವರಗಳನ್ನು ಇ.ಡಿ. ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ೨೦೧೪-೧೫ರಲ್ಲಿ ಲೋಕಾಯುಕ್ತರಿಗೆ ನೀಡಿರುವ ಆಸ್ತಿ ವಿವರದಲ್ಲಿ ಎರಡು ಆಸ್ತಿ ವಿವರ ಮಾತ್ರ ಉಲ್ಲೇಖ ಮಾಡಲಾಗಿದೆ.

ಹೂಡಿರುವ ಹಣದ ಮಾಹಿತಿ ಹೊರತುಪಡಿಸಿದರೆ ಬೇರೆ ವಿವರಗಳನ್ನು ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. 2008, 2013 ಮತ್ತು 2018ರ ಚುನಾವಣಾ ಪ್ರಮಾಣ ಪತ್ರದಲ್ಲಿ ಕೆ.ಜೆ.ಜಾರ್ಜ್ ಸಮರ್ಪಕವಾದ ಆಸ್ತಿಯ ವಿವರ ನೀಡಿಲ್ಲ. ಆಸ್ತಿಯ ಮೇಲೆ ಹೂಡಿಕೆ ಮಾಡಿದ್ದರೂ ಚುನಾ ವಣಾ ಪ್ರಮಾಣ ಪತ್ರದಲ್ಲಿ ವಿವರಣೆ ನೀಡಿಲ್ಲ. ವಿದೇಶ ದಲ್ಲಿ ಭಾರೀ ಪ್ರಮಾಣದಲ್ಲಿ ಆಸ್ತಿ ಗಳಿಕೆ ಮಾಡಲು ಮಗಳಿ ಗಾಗಲಿ, ಅಳಿಯನಿಗಾಗಲಿ ಸರಿಯಾದ ಆದಾಯ ಇಲ್ಲ. ಶೆಲ್ ಕಂಪನಿ, ಬ್ಯಾಂಕ್ ಸಾಲ ಮತ್ತು ಹಲವಾರು ವ್ಯಕ್ತಿಗಳ ಮೂಲಕ ವಹಿವಾಟು ನಡೆಸಿ ಆಸ್ತಿ ಗಳಿಕೆ ಮಾಡಿಕೊಳ್ಳಲಾಗಿದೆ.

ಬ್ಯಾಂಕ್ ಸಾಲಗಳನ್ನು ಬೇಗ ತೀರಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಮೂಲಕ ಅಕ್ರಮ ಆಸ್ತಿ ಗಳಿಕೆ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ. ಜಾರ್ಜ್ ಅವರು ಎಕ್ ್ಸಇಂಡಿಯಾ ಸ್ಟೀಲ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಕಂಪನಿಯ ಪ್ಲಾಟ್ ಇದ್ದು, ಬೆಂಗಳೂರಲ್ಲಿ ಕೇಂದ್ರ ಕಚೇರಿ ಇದೆ. ಕಂಪನಿಯಲ್ಲಿ ಹೂಡಿಕೆ ಮಾಡಿರುವ ಹಣದ ಬಗ್ಗೆ ತನಿಖೆ ನಡೆಸಬೇಕಾಗಿದೆ. ವೈಲ್ಡ್‌ಫ್ಲವರ್ ಎಸ್ಟೇಟ್ ಮತ್ತು ರೆಸಾರ್ಟ್ ಪ್ರೈ.ಲಿ. ಸಂಸ್ಥೆಯಿಂದ ಭೂಕಬಳಿಕೆ ಮಾಡಿರುವ ಆರೋಪ ಜಾರ್ಜ್ ವಿರುದ್ಧ ಇದ್ದು, ಹೈಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದರು.

2) 3 ವರ್ಷದ ಹಿಂದಿನ ಪ್ರಕರಣದ ತನಿಖೆ ಸಿಬಿಐಗೆ: ಇಂದು ಸರ್ಕಾರದ ಆದೇಶ ವಿನಯ್ ಕುಲಕರ್ಣಿಗೆ ಸಂಕಷ್ಟ?

ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ವಿವಾದ ಸೃಷ್ಟಿಸಿದ್ದ ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಶನಿವಾರ ಅಧಿಕೃತ ಆದೇಶ ಹೊರಡಿಸುವುದು ಬಹುತೇಕ ನಿಶ್ಚಿತವಾಗಿದೆ.

ಇದರೊಂದಿಗೆ ಧಾರವಾಡ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ. ಮೂರು ವರ್ಷಗಳ ಹಿಂದೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ಯೋಗೇಶ್ ಗೌಡ ಅವರನ್ನು ವಿರೋಧಿಗಳು ಭೀಕರವಾಗಿ ಕೊಂದಿದ್ದರು. ಈ ಕೃತ್ಯದಲ್ಲಿ ಅಂದಿನ ಧಾರವಾಡ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಕೈವಾಡವಿದೆ ಎಂದು ಆರೋಪಿಸಿದ್ದ ಮೃತನ ಕುಟುಂಬದವರು ಹಾಗೂ ಬಿಜೆಪಿ ನಾಯಕರು, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದರು. ಆದರೆ ಈ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿತ್ತು

ಕೊನೆಗೆ ಮೃತನ ಕುಟುಂಬದ ಮನವಿ ಹಾಗೂ ಸ್ಥಳೀಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದ ಸರ್ಕಾರ, ಪ್ರಕರಣವನ್ನು ಸಿಬಿಐಗೆ ವಹಿಸಲು ನಿರ್ಧರಿಸಿದೆ ಎಂದು ಗೊತ್ತಾಗಿದೆ. ಅದರೊಂದಿಗೆ, ಐಎಂಎ ಹಾಗೂ ಫೋನ್ ಕದ್ದಾಲಿಕೆ ಪ್ರಕರಣದ ನಂತರ ಮತ್ತೊಂದು ಪ್ರಕರಣವನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ.

2016ರಲ್ಲಿ ಜಿಮ್‌ನಲ್ಲಿ ಕೊಲೆ: ಧಾರವಾಡದ ಸಪ್ತಾಪುರದಲ್ಲಿನ ಉದಯ ಜಿಮ್ ನಲ್ಲಿ 2016ರ ಜೂ.15ರಂದು ಯೋಗೇಶ್ ಗೌಡ ಅವರನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿತ್ತು. ಇದಾದ ಒಂದು ವಾರದಲ್ಲೇ ಆರು ಜನರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಈ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಕೈವಾಡವಿದೆ ಎಂದು ಆರೋಪಿಸಿ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಗೌಡರ, ಸಹೋ ದರ ಗುರುನಾಥಗೌಡ ಸೇರಿದಂತೆ ಕುಟುಂಬಸ್ಥರು ಆರೋಪಿಸಿ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅಂದಿನ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದರು. ಸರ್ಕಾರ ಅದಕ್ಕೆ ಸ್ಪಂದಿಸದ ಕಾರಣ ಗುರುನಾಥ ಗೌಡ ಅವರು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು.

ಇದೇ ಸಂದರ್ಭದಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿ, ಸಾಕ್ಷ್ಯನಾಶದ ಸಾಧ್ಯತೆಯಿದೆ ಹಾಗೂ ತಮಗೆ ಜೀವ ಬೆದರಿಕೆ ಇದೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು. ಅದರ ವಿಚಾರಣೆ ಮಾಡಿದ್ದ ನ್ಯಾಯಾಲಯ ಸಿಬಿಐಗೆ ವಹಿಸಲು ನಿರಾಕರಿಸಿ, ಸಾಕ್ಷ್ಯನಾಶ ಹಾಗೂ ಜೀವ ಬೆದರಿಕೆ ಅರ್ಜಿಯನ್ನು ಮರು ವಿಚಾರಣೆ ಮಾಡುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿತ್ತು.

Follow Us:
Download App:
  • android
  • ios