ಬೆಂಗಳೂರು :  ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಹಾಗೂ ತಮ್ಮ ಪಕ್ಷದ ಹಿರಿಯ ನಾಯಕರ ನಡವಳಿಕೆಯೂ ಸೇರಿದಂತೆ ಹತ್ತು ಹಲವು ಕಾರಣಗಳಿಂದಾಗಿ ಅಸಮಾಧಾನದ ಹೂಟೆಯಾಗಿರುವ ಕಾಂಗ್ರೆಸ್ ಶಾಸಕರ ಆಕ್ರೋಶ ಸ್ಫೋಟಕ್ಕೆ ವೇದಿಕೆಯಾಗಲಿದೆ ಎಂದೇ ನಿರೀಕ್ಷಿಸಲಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆಯಲಿದೆ.

ಕಾಂಗ್ರೆಸ್ ಶಾಸಕರು ನೇರಾನೇರ ಅಸಮಾಧಾನ ವ್ಯಕ್ತಪಡಿಸಲಿದ್ದಾರೆ ಎಂಬ ಕಾರಣಕ್ಕೆ ಈ ಸಭೆಗೆ ಆಹ್ವಾನಿತರಾಗಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಭೆಯಿಂದ ದೂರ ಉಳಿಯಲಿದ್ದಾರೆ. ಈ ಮೊದಲು ಶಾಸಕಾಂಗ ಪಕ್ಷದ ಸಭೆಗೆ ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗಿದೆ ಎಂದು ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ತಿಳಿಸಿದ್ದವು. 

ಆದರೆ, ಸೋಮವಾರ ಇಂತಹ ಆಹ್ವಾನವನ್ನು ನೀಡಲಾಗಿಲ್ಲ ಎಂದು ಸಿದ್ದರಾಮಯ್ಯ ಅವರೇ ಮಾಧ್ಯಮಗಳಿಗೆ ತಿಳಿಸಿದರು. ತನ್ಮೂಲಕ, ಕುಮಾರಸ್ವಾಮಿ ಅವರು ಮುಜುಗರಕ್ಕೆ ಸಿಲುಕದಂತೆ ತಡೆಯಲು ಕಾಂಗ್ರೆಸ್ ನಾಯಕತ್ವ ತಮ್ಮ ನಿಲುವು ಬದಲಿಸಿಕೊಂಡಂತಾಗಿದೆ. ಕುಮಾರಸ್ವಾಮಿ ಅವರು ಮುಜುಗರದಿಂದ ತಪ್ಪಿಸಿಕೊಂಡರೂ ಕಾಂಗ್ರೆಸ್ ನಾಯಕರಿಗೆ ಮಾತ್ರ ಈ ಬಾರಿ ಶಾಸಕರ ಆಕ್ರೋಶವನ್ನು ಎದುರಿಸುವುದು ಅನಿವಾರ್ಯವಾಗಬಹುದು. 


ಸಿಎಲ್‌ಪಿ: ಚರ್ಚಿತ ವಿಷಯಗಳು

1. ಸಚಿವ ರೇವಣ್ಣರ ಹಸ್ತಕ್ಷೇಪ
2.ಉತ್ತರ ಕರ್ನಾಟಕಕ್ಕೆ ಅನ್ಯಾಯ
3.ಕಾಂಗ್ರೆಸಿಗರಿಗೆ ಸಿಗದ ಪ್ರಾತಿನಿಧ್ಯ
4.ಸಚಿವ ಸಂಪುಟ ವಿಸ್ತರಣೆ
5. ಬಿಜೆಪಿಯ ಆಪರೇಷನ್ ಕಮಲ

ರಾಮಲಿಂಗಾ ರೆಡ್ಡಿ, ಬೇಗ್ ಗೈರು?

ಮೂಲಗಳ ಪ್ರಕಾರ ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ರೋಷನ್‌ಬೇಗ್ ನೇತೃತ್ವದಲ್ಲಿ ಐದಾರು ಮಂದಿ ಶಾಸಕರು ಮಂಗಳವಾರ ನಡೆಯುವ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗುವ ಮೂಲಕ ಬಂಡಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.  ಈ ನಾಯಕರು, ಹೈಕಮಾಂಡ್‌ನಲ್ಲಿ ಪ್ರಭಾವಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ತಮ್ಮ ನಾಯಕರನ್ನಾಗಿ ಬಿಂಬಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಿಂದ ದೂರವುಳಿಯಲಿದ್ದಾರೆ ಎಂದು ತಿಳಿದುಬಂದಿದೆ.

ಉ.ಕರ್ನಾಟಕ ಅನ್ಯಾಯ ಪ್ರಸ್ತಾಪ 

ಸರ್ಕಾರ ಹಾಗೂ ಪಕ್ಷದಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಸಮಾಧಾನ ಹೊಂದಿರುವ ದೊಡ್ಡ ಶಾಸಕರ ಗುಂಪೊಂದು ಸತೀಶ್ ಜಾರಕಿಹೊಳಿ ಹಾಗೂ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಒಗ್ಗೂಡಿದೆ. ಈ ಗುಂಪು ಶಾಸಕಾಂಗ ಪಕ್ಷದ
ಸಭೆಯಲ್ಲಿ ಈ ವಿಚಾರವನ್ನು ದೊಡ್ಡ ಧ್ವನಿಯಲ್ಲಿ ಪ್ರಸ್ತಾಪಿಸಲಿದೆ ಎನ್ನಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ಗುಂಪು ಬಯಸುತ್ತಿರುವ ಹುದ್ದೆಗಳಲ್ಲಿ ಶಾಸಕಾಂಗ ಪಕ್ಷದ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಇದೆ.