ಬೆಂಗಳೂರು, [ಜೂನ್.08]: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಅಸಮಾಧಾನಿತ ಶಾಸಕರನ್ನು ಸಮಾಧಾನಗೊಳಿಸಲು ಉಭಯ ನಾಯಕರು ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದ್ದು, ಜೂನ್ 12ರಂದು ಬೆಳಿಗ್ಗೆ 11.30ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇಂದು [ಶನಿವಾರ] ರಾಜ್ಯಪಾಲರನ್ನು ಭೇಟಿಯಾದ ಸಿಎಂ ಕುಮಾರಸ್ವಾಮಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿದರು. 

ಇದಕ್ಕೆ ಸಮ್ಮತಿಸಿದ ರಾಜ್ಯಪಾಲರು ಜೂನ್ 12 ರಂದು ಬೆಳಿಗ್ಗೆ 11.30ಕ್ಕೆ ಸಮಯ ನಿಗದಿ ಮಾಡಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರಲ್ಲಿ ರಾಣೇಬೆನ್ನೂರಿನ ಪಕ್ಷೇತರ ಶಾಸಕರಾದ ಆರ್. ಶಂಕರ್, ಮುಳಬಾಗಲಿನ ನಾಗೇಶ್ ಅವರಿಗೆ ಮಂತ್ರಿಗಿರಿ ಪಕ್ಕಾ ಎನ್ನಲಾಗುತ್ತಿದೆ. ಆದ್ರೆ, ದಲಿತ ಕೋಟಾದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಅನ್ನೋದು ಮಾತ್ರ ಇನ್ನೂ ರಹಸ್ಯವಾಗುಳಿದಿದೆ.