ವಿಧಾನಸೌಧ :  ಕೇಂದ್ರ ಸರ್ಕಾರ ಇದೀಗ ರೈತರ ಸಾಲಮನ್ನಾ ಮಾಡಲು ಮುಂದಾಗಿದ್ದು, ಕೆಟ್ಟಮೇಲೆ ಕೇಂದ್ರಕ್ಕೆ ಬುದ್ಧಿ ಬಂದಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಕೇಂದ್ರ ಸರ್ಕಾರಕ್ಕೆ ಬುದ್ಧಿ ಬಂದಿದೆ. ರೈತರ ಪ್ರತಿಭಟನೆ ಬಿಸಿ ತಟ್ಟಿದ ಬಳಿಕ ಅವರ ಸಾಲವನ್ನು ಮನ್ನಾ ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರ ಸಾಲಮನ್ನಾ ಮಾಡುವ ಬಗ್ಗೆ ನಿರೀಕ್ಷೆ ಇತ್ತು. ಆದರೆ ಮಾಡಿಲ್ಲ. ರಾಜ್ಯ ಸರ್ಕಾರ ಮಾಡಿದ ಸಾಲ ಮನ್ನಾವನ್ನು ಲೇವಡಿ ಮಾಡಿದ ಕೇಂದ್ರಕ್ಕೆ ಈಗ ರೈತರ ಮೌಲ್ಯ ಅರ್ಥವಾಗಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರವು ಕೊಟ್ಟಮಾತಿನಂತೆ ನಡೆದುಕೊಳ್ಳಲಿದೆ. ಈ ವಿಚಾರದಲ್ಲಿ ರೈತರಿಗೆ ಯಾವುದೇ ಗೊಂದಲ ಬೇಡ. ಕೇಂದ್ರ ಸರ್ಕಾರವು ಸಹ ಸಾಲಮನ್ನಾ ಮಾಡಲು ಮುಂದಾಗಿರುವುದರಿಂದ ಎಲ್ಲ ಸಾಲವು ಮನ್ನಾವಾಗಲಿದೆ. ಈ ಮೂಲಕ ರೈತರು ಎಲ್ಲ ಸಮಸ್ಯೆಯಿಂದ ಮುಕ್ತವಾಗಲಿದ್ದಾರೆ ಎಂದರು.