Asianet Suvarna News Asianet Suvarna News

ಸರ್ಕಾರಿ ಇಂಗ್ಲಿಷ್‌ ಶಾಲೆಗೆ ಸಿಎಂ ಕುಮಾರಸ್ವಾಮಿ ಚಾಲನೆ

ಸರ್ಕಾರಿ ಇಂಗ್ಲಿಷ್‌ ಶಾಲೆಗೆ ಸಿಎಂ ಚಾಲನೆ| 100 ಹೊಸ ಪಬ್ಲಿಕ್‌ ಶಾಲೆ, ಪೂರ್ವ ಪ್ರಾಥಮಿಕ ತರಗತಿಗಳೂ ಆರಂಭ| 7ಮುಂದಿನ ವರ್ಷ ಆಂಗ್ಲ ಮಾಧ್ಯಮಕ್ಕೆ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ| ಇಂಗ್ಲಿಷ್‌ ಮೀಡಿಯಂ ಆರಂಭ ಟೀಕಿಸಿದ್ದಕ್ಕೆ ಸಿಎಂ ಎಚ್‌ಡಿಕೆ ಟಾಂಗ್‌

Karnataka CM HD Kumaraswamy launches Government English schools
Author
Bangalore, First Published Jun 15, 2019, 11:46 AM IST

ಬೆಂಗಳೂರು[ಜೂ.15]: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಿದ ಮಾತ್ರಕ್ಕೆ ಕನ್ನಡ ಭಾಷೆ ಉಳಿಸುವ ನಮ್ಮ ಬದ್ಧತೆ, ಕಳಕಳಿಯನ್ನು ಯಾರೂ ಸಂಶಯದಿಂದ ನೋಡಬೇಕಾಗಿಲ್ಲ. ನಾನಾಗಲಿ, ಉಪಮುಖ್ಯಮಂತ್ರಿಗಳಾಗಲಿ ಕನ್ನಡ ವಿರೋಧಿಗಳಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ವರ್ಷದಿಂದ ಆರಂಭಿಸಿರುವ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆರಂಭಿಸಿರುವ ಆಂಗ್ಲ ಮಾಧ್ಯಮ ವಿಭಾಗ, 100 ಹೊಸ ಕೆಪಿಎಸ್‌ ಶಾಲೆಗಳು ಹಾಗೂ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಮೈತ್ರಿ ಸರ್ಕಾರ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ನಿರ್ಧರಿಸಿದಾಗ ಸಂಘ-ಸಂಸ್ಥೆಗಳಿಂದ ಹಲವು ರೀತಿ ಅನುಮಾನ, ಆತಂಕಗಳನ್ನು ವ್ಯಕ್ತಪಡಿಸಲಾಯಿತು. ಹಿರಿಯ ಸಾಹಿತಿಗಳು ಸಹ ವೈಯಕ್ತಿಕ ಟೀಕೆ ಮಾಡಿದರು. ಆದರೆ ಇಂಗ್ಲಿಷ್‌ ಆಧುನಿಕ ಜಗತ್ತಿನಲ್ಲಿ ಅನಿವಾರ್ಯವಾಗಿದ್ದು, ಬಡವರ ಮಕ್ಕಳು ಉತ್ತಮ ಹಾಗೂ ಗುಣಾತ್ಮ ಕ ಶಿಕ್ಷಣ ಪಡೆಯಬೇಕು, ಅವರಿಗೆ ಅನ್ಯಾಯ ಆಗಬಾರದೆಂಬ ಉದ್ದೇಶದಿಂದ ಎಷ್ಟೇ ವಿರೋಧ ವ್ಯಕ್ತವಾದರೂ ದೃಢ ನಿರ್ಧಾರ ತೆಗೆದುಕೊಂಡು ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ತೀರ್ಮಾನಿಸಲಾಗಿದೆ ಎಂದರು.

ಮುಂದಿನ ವರ್ಷ ಹೆಚ್ಚು ತರಗತಿ:

ಈ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರುವ ಆಂಗ್ಲ ಮಾಧ್ಯಮ ಶಾಲೆಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ತರಗತಿ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದ ಮುಖ್ಯಮಂತ್ರಿಗಳು, ಆಂಗ್ಲ ಮಾಧ್ಯಮ ಶಾಲೆಗಳ ಪ್ರವೇಶಾತಿ ಸಂಖ್ಯೆಯನ್ನು 30ಕ್ಕೆ ಸೀಮಿತಗೊಳಿಸಿದ್ದಕ್ಕೆ ಕೆಲವರು ಖಾಸಗಿ ಶಾಲೆಗಳ ಜೊತೆ ಶಾಮೀಲಾಗಿದ್ದಾರೆಂಬ ಆರೋಪ ಸಹ ಕೇಳಿ ಬಂದಿತು. ಆದರೆ ಪ್ರತಿ ಮಕ್ಕಳ ಕಡೆಗೆ ಗಮನ ಕೊಡಬೇಕು, ಶಿಕ್ಷಕರು ಒತ್ತಡಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಪ್ರವೇಶಾತಿ ಮಿತಿಯನ್ನು 30ಕ್ಕೆ ನಿಗದಿಪಡಿಸಲಾಗಿದೆ. ಈ ಶಾಲೆಗಳ ಪ್ರವೇಶಾತಿಗೆ ಹೆಚ್ಚಿನ ಬೇಡಿಕೆ ಬಂದಿರುವ ಕಾರಣ ಮುಂದಿನ ವರ್ಷದಿಂದ ಹೆಚ್ಚಿನ ತರಗತಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಶಿಕ್ಷಕರ ರಜೆ ಬೇಡಿಕೆ ಪರಿಶೀಲನೆ

ಎರಡು ಮತ್ತು ನಾಲ್ಕನೆ ಶನಿವಾರ ಸರ್ಕಾರಿ ರಜೆ ಘೋಷಣೆ ಶಿಕ್ಷಕ ಸಮುದಾಯಕ್ಕೆ ಅನ್ವಯ ಆಗದಿರುವ ಹಿನ್ನೆಲೆಯಲ್ಲಿ ಸಾಂದರ್ಭಿಕ ರಜೆ ಕಡಿತ ಮಾಡಬಾರದೆಂಬ ಬೇಡಿಕೆ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಕೆಲ ಟೀವಿ ಚಾನಲ್‌ಗಳ ಬಗ್ಗೆ ಬೇಸರ

ಇತ್ತೀಚೆಗೆ ಬೆಂಗಳೂರಿನಲ್ಲಿ ಚೀಟಿ ವ್ಯವಹಾರದಲ್ಲಿ ನಷ್ಟಕ್ಕೆ ಒಳಗಾಗಿ ತಂದೆಯೇ ಮಗನನ್ನು ನೇಣಿಗೆ ಹಾಕಿದ ದೃಶ್ಯ ಪ್ರಸಾರ ಮಾಡಿದ ವಾಹಿನಿಗಳ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಇಂತಹ ದೃಶ್ಯ ಪ್ರಸಾರದಿಂದ ತಂದೆ ಮಕ್ಕಳ ಬಾಂಧವ್ಯದ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಚಿಂತಿಸಬೇಕು. ನನ್ನ ಬಗ್ಗೆ ಮಾಧ್ಯಮಗಳು ಎಷ್ಟೇ ಟೀಕೆ ಮಾಡಿದರೂ ಪರವಾಗಿಲ್ಲ. ಆದರೆ, ಇಂತಹ ದೃಶ್ಯ ಪ್ರಸಾರ ಮಾಡುವುದರಿಂದ ಏನು ಪರಿಣಾಮ ಆಗುತ್ತದೆ ಎಂಬುದನ್ನು ಯೋಚಿಸಬೇಕು ಎಂದರು.

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ:

ಮೈತ್ರಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ವಿಶೇಷವಾಗಿ ಶಿಕ್ಷಕರ ವರ್ಗಾವಣೆ ವಿಷಯದಲ್ಲಿ ಶೇ.90ರಷ್ಟುಪಾರದರ್ಶಕತೆ ತರಲಾಗಿದೆ. ಹೊಸ ಶಾಲೆಗಳಿಗೆ ಕಟ್ಟಡ, ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಯೂನಿಸೆಫ್‌ ಮೂಲಕ ಶಿಕ್ಷಕರಿಗೆ ತರಬೇತಿ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಈ ಹಿಂದೆ ಪ್ರಾಥಮಿಕ ಮತ್ತು ಪೌಢಶಿಕ್ಷಣ ಸಚಿವರಾಗಿದ್ದ ಎನ್‌. ಮಹೇಶ್‌ ಅವರು ರಾಜಕೀಯ ಕಾರಣದಿಂದ ರಾಜೀನಾಮೆ ನೀಡಿದ ನಂತರ ತಾವೇ ಈ ಖಾತೆಯ ಜವಾಬ್ದಾರಿ ಹೊಂದಬೇಕಾಯಿತು. ಇಂತಹ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಶಿಕ್ಷಣ ಇಲಾಖೆಗೆ ಸಚಿವರೇ ಇಲ್ಲ, ಇಲಾಖೆಯ ಜವಾಬ್ದಾರಿ ನಿರ್ವಹಿಸುವವರೇ ಇಲ್ಲ ಎಂಬ ಟೀಕೆ-ಟಿಪ್ಪಣಿಗಳು ಕೇಳಿ ಬಂದವು, ಆದರೆ ತಾವು ಹಾಗೂ ಉಪಮುಖ್ಯಮಂತ್ರಿಗಳು ಜೊತೆಯಾಗಿ ಯಾವುದೇ ಲೋಪದೋಷ ಆಗದಂತೆ ಇಲಾಖೆ ನಿರ್ವಹಿಸಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಮಾತನಾಡಿ,ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸುವ ಕುರಿತಂತೆ ಹಲವು ಗೊಂದಲಗಳು ಇತ್ತು. ಕನ್ನಡ ಪರ ಸಂಘಟನೆಗಳು ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದವು. ಆದರೆ ಶಿಕ್ಷಣ ಮನುಷ್ಯನ, ಸಮಾಜ, ದೇಶದ ಬದಲಾವಣೆ ಮಾಡುತ್ತಿದೆ. ಆಧುನಿಕ ಜಗತ್ತಿನಲ್ಲಿ ಪರಸ್ಪರ ವಿಚಾರ ವಿನಿಮಯವಾಗಲು ಆಂಗ್ಲ ಮಾಧ್ಯಮ ಶಿಕ್ಷಣ ಅಗತ್ಯವಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕನ್ನಡ ಭಾಷೆ ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿಮಾತನಾಡಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಹೊಂದಿರುವ ಮುಖ್ಯಮಂತ್ರಿಗಳು ಈ ಹಿಂದೆ ಯಾರೂ ಮಾಡದಷ್ಟುಕೆಲಸವನ್ನು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ರೋಷನ್‌ ಬೇಗ್‌ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಸಾ.ರಾ. ಮಹೇಶ್‌, ಪರಿಷತ್‌ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ, ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ನಾರಾಯಣಸ್ವಾಮಿ, ಭೋಜೇಗೌಡ, ಶಾಸಕಿ ಸೌಮ್ಯರೆಡ್ಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೋನರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಪಿ.ಸಿ. ಜಾಫರ್‌ ಮುಂತಾದವರು ಉಪಸ್ಥಿತರಿದ್ದರು.

Follow Us:
Download App:
  • android
  • ios