ಬೆಂಗಳೂರು[ಜು.07]: ರಾಜೀನಾಮೆ ನೀಡಿರುವ ಅತೃಪ್ತ ಶಾಸಕರನ್ನು ಮನವೊಲಿಸುವಲ್ಲಿ ಅಥವಾ ಅವರ ಸಂಖ್ಯೆ ಕಡಮೆಗೊಳಿಸಲು ವಿಫಲವಾದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮುಂದೆ ಎರಡು ಅವಕಾಶಗಳು ಗೋಚರಿಸಬಹುದು.

ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸುವ ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಅಥವಾ ಮಿತ್ರ ಪಕ್ಷ ಕಾಂಗ್ರೆಸ್‌ನ ಒಪ್ಪಿಗೆ ಪಡೆದುಕೊಂಡು ವಿಧಾನಸಭೆ ವಿಸರ್ಜನೆ ಮಾಡಬಹುದು ಎಂಬ ಮಾತು ಗಂಭೀರವಾಗಿ ಕೇಳಿಬರುತ್ತಿದೆ.

ಆಯ್ಕೆ 1- ಅಮೆರಿಕದಿಂದ ವಾಪಸಾದ ಕೂಡಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿರುವ ಶಾಸಕರನ್ನು ಮನವೊಲಿಸಲು ತೀವ್ರ ಪ್ರಯತ್ನ ನಡೆಸಲಿದ್ದಾರೆ. ಆ ಶಾಸಕರು ಕೈಗೆ ಸಿಗದಿದ್ದರೂ ಅವರ ಆಪ್ತರ ಮೂಲಕವೂ ಪ್ರಯತ್ನಿಸಬಹುದು. ಅದೂ ಸಾಧ್ಯವಾಗದೇ ರಾಜ್ಯಪಾಲರು ವಿಶ್ವಾಸಮತ ಯಾಚನೆಗೆ ಸೂಚಿಸಿದಲ್ಲಿ ಆಗ ಸಂಕಷ್ಟಎದುರಾಗುತ್ತದೆ. ಒಂದು ವೇಳೆ ಶಾಸಕರ ಬೆಂಬಲ ಇಲ್ಲ ಎಂಬುದು ಖಚಿತವಾದಲ್ಲಿ ಅಧಿವೇಶನದ ಮೊದಲ ದಿನವೇ ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸದೆ ವಿದಾಯ ಭಾಷಣ ಮಾಡಿ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸಬಹುದು.

ಆಯ್ಕೆ 2- ಶಾಸಕರನ್ನು ಮನವೊಲಿಸುವ ಪ್ರಯತ್ನ ವಿಫಲವಾದಲ್ಲಿ ಮಿತ್ರ ಪಕ್ಷ ಕಾಂಗ್ರೆಸ್‌ ನಾಯಕರ ಜತೆ ಸಮಾಲೋಚನೆ ನಡೆಸಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಉದ್ದೇಶದಿಂದ ವಿಧಾನಸಭೆ ವಿಸರ್ಜನೆಗೆ ಮುಂದಾಗಬಹುದು. ಕಾಂಗ್ರೆಸ್‌ನಲ್ಲಿ ಕೂಡ ಇದೀಗ ಇಂಥದ್ದೇ ಚರ್ಚೆ ನಡೆದಿದೆ. ಸಚಿವ ಸಂಪುಟ ಸಭೆ ಕರೆದು ಅದರಲ್ಲಿ ವಿಧಾನಸಭೆ ವಿಸರ್ಜನೆಯ ಕುರಿತು ಸರ್ವಾನುಮತದ ನಿರ್ಣಯ ಕೈಗೊಂಡು ಅದನ್ನು ರಾಜ್ಯಪಾಲರಿಗೆ ತಲುಪಿಸುವುದು. ಆದರೆ, ಈ ನಿರ್ಣಯವನ್ನು ರಾಜ್ಯಪಾಲರು ಒಪ್ಪಲೇಬೇಕು ಎಂದೇನಿಲ್ಲ. ಬೇರೊಂದು ಪಕ್ಷ ಸರ್ಕಾರ ರಚಿಸಲು ಅಗತ್ಯವಾದಷ್ಟುಸಂಖ್ಯಾಬಲ ಹೊಂದಿಲ್ಲದೇ ಇದ್ದಾಗ ವಿಧಾನಸಭೆ ವಿಸರ್ಜನೆ ನಿರ್ಣಯ ಒಪ್ಪಿಕೊಳ್ಳುತ್ತಾರೆ. ಒಂದು ವೇಳೆ ಬೇರೊಂದು ಪಕ್ಷ ಸಂಖ್ಯಾಬಲ ಹೊಂದಿದ್ದಾಗ ಆ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡುವ ಸಾಧ್ಯತೆಯೇ ಹೆಚ್ಚು. ಇಲ್ಲಿ ಬಿಜೆಪಿ ಸಂಖ್ಯಾಬಲ ಹೊಂದಿದ್ದರೂ ಸರ್ಕಾರ ರಚನೆಗೆ ನಿರಾಸಕ್ತಿ ತೋರಿದಾಗ ಮಾತ್ರ ವಿಧಾನಸಭೆ ವಿಸರ್ಜನೆಗೆ ರಾಜ್ಯಪಾಲರು ಅಂಗೀಕಾರ ನೀಡುವ ಸಂಭವವಿರುತ್ತದೆ.