Asianet Suvarna News Asianet Suvarna News

ಪ್ರತೀ ಭಾನುವಾರ ಸಿಎಂಗೆ ನಡೀತಿತ್ತು ಕೊರೋನಾ ಟೆಸ್ಟ್‌ : ಲಕ್ಷಣವಿಲ್ಲದೇ ಪಾಸಿಟಿವ್

ಲಕ್ಷಾಂತರ ಮಂದಿಗೆ ಒಕ್ಕರಿಸಿ ಕಾಡುತ್ತಿರುವ ಕೊರೋನಾ ಮಾಹಾಮಾರಿ ಇದೀಗ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಬಿಟ್ಟಿಲ್ಲ. ಅವರ ವರದಿ ಪಾಸಿಟಿವ್ ಬಂದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಯಾವುದೇ ಲಕ್ಷಣವಿಲ್ಲದೇ ವರದಿಯಲ್ಲಿ ಪಾಸಿಟಿವ್ ಬಂದಿದೆ. 

Karnataka CM BS Yediyurappa tests positive for Coronavirus
Author
bengaluru, First Published Aug 3, 2020, 9:55 AM IST

ಬೆಂಗಳೂರು (ಆ.03) : ಕಳೆದ ಐದು ತಿಂಗಳಿಂದ ನಾಡಿನ ಜನರನ್ನು ತೀವ್ರವಾಗಿ ಕಾಡುತ್ತಿರುವ ಮಹಾಮಾರಿ ಕೊರೋನಾ ಸೋಂಕು ಈಗ ನಾಡಿನ ದೊರೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (77) ಅವರಿಗೂ ತಗಲಿದೆ. ಅವರಿಗೆ ಭಾನುವಾರ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದ್ದು, ಯಾವುದೇ ಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

"

ಈ ಸಂಬಂಧ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಟ್ವೀಟ್‌ ಮಾಡಿದ್ದು, ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್‌ ಎಂದು ಬಂದಿದ್ದು, ರೋಗ ಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು ಕ್ವಾರಂಟೈನ್‌ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಕೋರಿದ್ದಾರೆ.

ಯಡಿಯೂರಪ್ಪ ಅವರು ಎಚ್‌ಎಎಲ್‌ ಬಳಿಯ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯ ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ಹಗಲು ರಾತ್ರಿ ಶ್ರಮಿಸುತ್ತಿದ್ದ ಅವರು ಪ್ರತಿನಿತ್ಯ ಅನೇಕ ಸಚಿವರು, ಅಧಿಕಾರಿಗಳು, ವೈದ್ಯರು, ಖಾಸಗಿ ಆಸ್ಪತ್ರೆಗಳು ಸೇರಿದಂತೆ ಇತರೆ ಪ್ರಮುಖರೊಂದಿಗೆ ಸಭೆಗಳಲ್ಲಿ ಭಾಗವಹಿಸುತ್ತಿದ್ದ ಕಾರಣ ಪ್ರತಿ ವಾರವೂ ಅವರಿಗೆ ಕೊರೋನಾ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಅವರಿಗೆ ಪಾಸಿಟಿವ್‌ ವರದಿ ಬಂದಿದೆ ಎಂದು ತಿಳಿದುಬಂದಿದೆ.

ಇದರೊಂದಿಗೆ ಯಡಿಯೂರಪ್ಪ ಅವರು ಕೋವಿಡ್‌ ಸೋಂಕಿಗೆ ಒಳಗಾದ ದೇಶದ ಎರಡನೇ ಮುಖ್ಯಮಂತ್ರಿಯಾಗಿದ್ದಾರೆ. ಈ ಹಿಂದೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚವಾಣ್‌ ಅವರಿಗೆ ಪಾಸಿಟಿವ್‌ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಬಿಎಸ್‌ವೈ ಚೇತರಿಕೆಗೆ ಹಾರೈಕೆ: ಮುಖ್ಯಮಂತ್ರಿ ಅವರಿಗೆ ಕೋವಿಡ್‌ ಪಾಸಿಟಿವ್‌ ಬಂದಿರುವ ವರದಿ ತಿಳಿಯುತ್ತಿದ್ದಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಸರ್ಕಾರದ ಹಲವು ಸಚಿವರು, ಶಾಸಕರು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಸೇರಿದಂತೆ ಆಡಳಿತ ಹಾಗೂ ಪ್ರತಿಪಕ್ಷದ ಹಲವು ನಾಯಕರು ಮುಖ್ಯಮಂತ್ರಿ ಅವರು ಶೀಘ್ರ ಗುಣಮುಖರಾಗಲಿ ಎಂದು ಟ್ವೀಟ್‌ ಮಾಡಿ ಹಾರೈಸಿದ್ದಾರೆ.

Follow Us:
Download App:
  • android
  • ios