ದಾವಣಗೆರೆ, [ಸೆ.29]: ನಾನು ತಂತಿ ಮೇಲೆ ನಡೆಯುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿರುವ ಪ್ರಸಂಗ ನಡೆದಿದೆ.

ಇಂದು [ಭಾನುವಾರ] ದಾವಣಗೆರೆಯಲ್ಲಿ ನಡೆದ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡುವ ವೇಳೆ ಬಿಎಸ್ ವೈ ಈ ಮಾತುಗಳನ್ನಾಡಿದರು. ಒಂದು ನಿರ್ಧಾರ ಕೈಗೊಳ್ಳಬೇಕೆಂದ್ರೂ 10 ಬಾರಿ ಯೋಚಿಸುವೆ. ಸಿಎಂ ಆಗಿದ್ರೂ ಒಂದು ರೀತಿ ತಂತಿ ಮೇಲೆ ನಡೆಯುವಂತಾಗಿದೆ ಎಂದು ಹೇಳಿದರು.

ಯಾವುದೇ ನಿರ್ಧಾರ ತೆಗೆಕೊಳ್ಳಬೇಕೆಂದ್ರೂ ಯೋಚಿಸಬೇಕು. ನನ್ನ ನಿರ್ಧಾರದಿಂದ ಬೇರೆ ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತೆ ಎಂಬುದನ್ನ ಚಿಂತನೆ ಮಾಡಬೇಕಾಗಿದೆ.  ಸಿಎಂ ಆಗಿದ್ದರೂ ತಂತಿ ಮೇಲೆ ನಡೆಯುವಂಥ ಪರಿಸ್ಥಿತಿ ಇದೆ ಎಂದು ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅಂದು ಕುಮಾರಸ್ವಾಮಿ ಅವರು ಕಾಂಗ್ರೆಸ್ ಸಹಾಯದಿಂದ ಮುಖ್ಯಂತ್ರಿಯಾಗಿದ್ದರು. ಹಾಗಾಗಿ ಕುಮಾರಸ್ವಾಮಿ ಯಾವುದೇ ನಿರ್ಧಾರವನ್ನು ಸ್ವತಂತ್ರವಾಗಿ ಕೈಗೊಳ್ಳುವಂತಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಚ್‌ಡಿಕೆಗೆ ನುಂಗಕ್ಕೂ ಆಗದೇ ಉಗುಳಕ್ಕೂ ಆಗದೇ ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದರು.  

 ಆದ್ರೆ, ಯಡಿಯೂರಪ್ಪ ಯಾವ ಪಕ್ಷದ ಸಹಾಯವಿಲ್ಲದೇ ಸಿಎಂ ಆಗಿದ್ದಾರೆ. ಈ ರೀತಿಯ ಅಸಹಾಯತೆ ಮಾತುಗಳನ್ನಾಡಿದ್ಯಾಕೆ? ಸಿಎಂ ಆಗಿದ್ರೂ ತಂತಿ ಮೇಲೆ ನಡೆಯುವಂತಾಗಿದೆ ಎಂದು ಹೇಳಿದ್ಯಾಕೆ? ಎನ್ನುವುದನ್ನು  ವಿಮರ್ಶೆ ಮಾಡುವುದಾದ್ರೆ ಎದುರಿಗೆ ಹಲವು ಪ್ರಶ್ನೆಗಳು ಕಾಣಿಸುತ್ತವೆ. 

ಹೆಸರಿಗಷ್ಟೇ ಯಡಿಯೂರಪ್ಪನವರು ಸಿಎಂ ಆಗಿದ್ದಾರಾ? ಯಡಿಯೂರಪ್ಪಗೆ ಹೈಕಮಾಂಡ್ ಮೂಗುದಾರ ಹಾಕಿದ್ಯಾ? ಯಡಿಯೂರಪ್ಪ ಸ್ವತಂತ್ರವಾಗಿ ನಿರ್ಧಾರಕ್ಕೆ ಬ್ರೇಕ್ ಹಾಕಲಾಗಿದ್ಯಾ? ಅದಕ್ಕಾಗಿಯೇ ಮೂವರನ್ನು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಗಿದ್ಯಾ? ಹೀಗೆ ಹಲವು ಪ್ರಶ್ನೆಗಳು ಬಿಜೆಪಿ ಕಾರ್ಯಕರ್ತರಲ್ಲಿ ಹಾಗೂ ಜನಸಾಮಾನ್ಯರ ತಲೆಯಲ್ಲಿ ಸುಳಿದಾಡಲು ಪ್ರಾರಂಭಿಸಿವೆ. 

ಒಟ್ಟಿನಲ್ಲಿ  ಈ ಹಿಂದೆ ಮೈತ್ರಿ ಸರ್ಕಾರವಿದ್ದಾಗ ಕುಮಾರಸ್ವಾಮಿ ತಂತಿ ಮೇಲೆ ನಡೆಯುತ್ತಿದ್ದೇನೆ ಎಂದು ಹೇಳಿದ್ದಾಗ ಮುಸಿ-ಮುಸಿ ನಕ್ಕು ವ್ಯಂಗ್ಯವಾಡಿದ್ದ ಬಿಜೆಪಿ ನಾಯಕರು, ಇದೀಗ ತಮ್ಮದೇ ನಾಯಕ ತಂತಿ ಮೇಲೆ ನಡೆಯುವಂತಾಗಿದೆ  ಎಂದು ಹೇಳಿರುವುದಕ್ಕೆ ಏನು ಹೇಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.