ಬೆಂಗಳೂರು [ಜು.31]:  ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಸರ್ಕಾರಿ ಬಂಗ್ಲೆ ಯಡಿಯೂರಪ್ಪ ಅವರ ಅದೃಷ್ಟದ ಮನೆ. ಹಿಂದೆ 2004ರ ವಿಧಾನಸಭಾ ಚುನಾವಣೆ ನಂತರ ಪ್ರತಿಪಕ್ಷದ ನಾಯಕರಾಗಿದ್ದ ವೇಳೆ ಯಡಿಯೂರಪ್ಪ ಅವರು ಈ ನಿವಾಸಕ್ಕೆ ಬಂದರು. ಅಲ್ಲಿದ್ದಾಗಲೇ ಜೆಡಿಎಸ್‌ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಯಡಿಯೂರಪ್ಪ ಅವರು ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿದರು. ಉಪಮುಖ್ಯಮಂತ್ರಿಯಾದರು. ಅದಾದ ಮೇಲೆ ಆ ಬಂಗ್ಲೆ ಬಗ್ಗೆ ಯಡಿಯೂರಪ್ಪ ಅವರಿಗೆ ವಿಶೇಷ ಮಮತೆ.

ಮುಂದೆ ಮುಖ್ಯಮಂತ್ರಿಯಾದಾಗಲೂ ಅದೇ ಮನೆಯಲ್ಲಿ ವಾಸ ಮುಂದುವರೆಸಿದ್ದ ಅವರು ಇತ್ತೀಚೆಗೆ ಮತ್ತೆ ಪ್ರತಿಪಕ್ಷದ ನಾಯಕರಾದ ನಂತರ ಆ ಬಂಗ್ಲೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಆದರೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಒಪ್ಪದೆ ತಮ್ಮ ಆಪ್ತ ಸಚಿವರೊಬ್ಬರಿಗೆ ನೀಡಿ ಯಡಿಯೂರಪ್ಪ ಅವರಿಗೆ ಬೇರೊಂದು ಮನೆ ನೀಡುವುದಾಗಿ ತಿಳಿಸಿದರು. ಇದರಿಂದ ಆಕ್ರೋಶಗೊಂಡ ಯಡಿಯೂರಪ್ಪ ಅವರು ಸರ್ಕಾರಿ ಬಂಗ್ಲೆ ನಿರಾಕರಿಸಿ ತಮ್ಮ ಖಾಸಗಿ ನಿವಾಸದಲ್ಲೆ ವಾಸ್ತವ್ಯ ಮುಂದುವರೆಸಿದ್ದರು.

ಇದೀಗ ಮುಖ್ಯಮಂತ್ರಿಯಾಗಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ಬಳಿಕ ರೇಸ್‌ಕೋರ್ಸ್‌ ನಿವಾಸಕ್ಕೆ ವಾಪಸಾಗಲು ಸಿದ್ಧವಾಗಿದ್ದಾರೆ. ಆ ನಿವಾಸಕ್ಕೆ ಸುಣ್ಣ ಬಣ್ಣ ಬಳಿದ್ದಲ್ಲದೆ, ಮುಂಭಾಗದಲ್ಲಿ ಡಾಂಬರು ಹಾಕುತ್ತಿದ್ದಾರೆ.