ಮಾಧ್ಯಮಗಳ ನಿಯಂತ್ರಣಕ್ಕೆ ಏನು ಮಾಡಬೇಕು ಎಂದು ತಿಳಿಸಲು ಸದನ ಸಮಿತಿ ರಚನೆ ಆಗಿದ್ದಾಯ್ತು, ಇದೀಗ ಸಾಮಾಜಿಕ ಜಾಲತಾಣ ಗಳಲ್ಲಿ ಮುಖ್ಯಮಂತ್ರಿಗಳ ವಿರುದ್ಧ ವೈಯಕ್ತಿಕ ನಿಂದನೆ ಮಾಡುವವರು ಹಾಗೂ ಅದಕ್ಕೆ ವೇದಿಕೆ ಯಾಗುವ ಸಾಮಾಜಿಕ ಜಾಲತಾಣಕ್ಕೆ ಚುರುಕು ಮುಟ್ಟಿಸುವಂತಹ ಬೆಳವಣಿಗೆಗಳು ನಡೆದಿವೆ.

ಬೆಂಗಳೂರು(ಮಾ.28): ಮಾಧ್ಯಮಗಳ ನಿಯಂತ್ರಣಕ್ಕೆ ಏನು ಮಾಡಬೇಕು ಎಂದು ತಿಳಿಸಲು ಸದನ ಸಮಿತಿ ರಚನೆ ಆಗಿದ್ದಾಯ್ತು, ಇದೀಗ ಸಾಮಾಜಿಕ ಜಾಲತಾಣ ಗಳಲ್ಲಿ ಮುಖ್ಯಮಂತ್ರಿಗಳ ವಿರುದ್ಧ ವೈಯಕ್ತಿಕ ನಿಂದನೆ ಮಾಡುವವರು ಹಾಗೂ ಅದಕ್ಕೆ ವೇದಿಕೆ ಯಾಗುವ ಸಾಮಾಜಿಕ ಜಾಲತಾಣಕ್ಕೆ ಚುರುಕು ಮುಟ್ಟಿಸುವಂತಹ ಬೆಳವಣಿಗೆಗಳು ನಡೆದಿವೆ.

ಅದು- ನಕಲಿ ಖಾತೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಜಗತ್ತಿನ ಅತ್ಯಂತ ಪ್ರಖ್ಯಾತ ಜಾಲತಾಣ ಟ್ವೀಟರ್ಗೆ (ಟ್ವೀಟರ್ ಇಂಡಿಯಾ) ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆಯನ್ನು ರಾಜ್ಯದ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ನೀಡಿದ್ದಾರೆ.

ಇತ್ತೀಚೆಗೆ ಟ್ವೀಟರ್ನಲ್ಲಿ ಕಿಡಿಗೇಡಿಯೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ವ್ಯಂಗ್ಯಾತ್ಮಕ ಟ್ವೀಟ್ಗಳನ್ನು ಹಾಕಿದ್ದ. ಈ ಪ್ರಕರಣದ ಬಗ್ಗೆ ಸಿಐಡಿ ಸೈಬರ್ ಕ್ರೈಂ ಸೆಲ್ನಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಪೊಲೀಸರು, ಆರೋಪಿಯ ವಿವರಗಳನ್ನು ನೀಡುವಂತೆ ಟ್ವೀಟರ್ಗೆ ನೋಟಿಸ್ ಜಾರಿಗೊಳಿಸಿದ್ದರು.

ಮೊದಲ ನೋಟಿಸ್ಗೆ ಸ್ಪಂದಿಸಿದ್ದ ಟ್ವೀಟರ್ ಸಂಸ್ಥೆಯು ಆರೋಪಿಯ ವಿವರ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಅದನ್ನು ಈಡೇರಿಸಲಿಲ್ಲ. ಆರೋಪಿಯ ವಿವರಗಳಿಗಾಗಿ ಎರಡು ತಿಂಗಳು ಕಾದ ಪೊಲೀಸರು ಈಗ ಟ್ವೀಟರ್ಗೆ ತಾವು ಕೇಳಿದ ವಿವರ ಒದಗಿಸದಿದ್ದರೆ, ಸಾಕ್ಷ್ಯ ನಾಶ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ನಕಲಿ ಖಾತೆದಾರನ ಕುರಿತು ಮಾಹಿತಿ ಕೋರಿ ದೆಹಲಿಯಲ್ಲಿರುವ ಟ್ವೀಟರ್ ಇಂಡಿಯಾ ಮುಖ್ಯ ಕಚೇರಿಗೆ ನೋಟಿಸ್ ನೀಡಿದ್ದೆವು. ಇದಕ್ಕೆ ಪ್ರತಿಕ್ರಿಯಿಸಿದ್ದ ಆ ಸಂಸ್ಥೆ ಮುಖ್ಯಸ್ಥರು, ಜನವರಿಯಲ್ಲಿ ಸಿಐಡಿ ಕಚೇರಿಗೆ ಖುದ್ದು ಆಗಮಿಸಿ ತನಿಖೆಗೆ ಸಹಕರಿಸುವುದಾಗಿ ಹೇಳಿಕೆ ನೀಡಿ ತೆರಳಿದ್ದರು. ಇದಾದ ಬಳಿಕ ಆರೋಪಿ ಬಗ್ಗೆ ಮಾಹಿತಿ ನೀಡದೆ ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ ಸಾಕ್ಷ್ಯ ನಾಶ ಆರೋಪದಡಿ ಟ್ವೀಟರ್ ಸಂಸ್ಥೆ ಮೇಲೆ ಪ್ರಕರಣ ದಾಖಲಿ ಸುವ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ್ದೇವೆ. ಈ ಬಗ್ಗೆ ಸಂಸ್ಥೆ ಮುಖ್ಯಸ್ಥರಿಗೆ ಎರಡನೇ ಬಾರಿ ನೋಟಿಸ್ ಸಹ ಜಾರಿಗೊಳಿಸ ಲಾಗಿದ್ದು, ಇದಕ್ಕೆ ಸಂಸ್ಥೆಯ ಪ್ರತಿಕ್ರಿಯೆ ನೋಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸೈಬರ್ ಕ್ರೈಂ ಅಧಿಕಾರಿಗಳು ‘ಕನ್ನಡಪ್ರಭ'ಕ್ಕೆ ಹೇಳಿದ್ದಾರೆ.

ಇನ್ನುಮುಂದೆ ಸಾಮಾಜಿಕ ತಾಣಗಳಲ್ಲಿ ನಕಲಿ ಖಾತೆ ತೆರೆದು ಅವಹೇಳನಕಾರಿ ಬರಹಗಳನ್ನು ಪೋಸ್ಟ್ ಮಾಡುವ ಕಿಡಿಗೇಡಿಗಳ ಬಗ್ಗೆ ತನಿಖೆಗೆ ಸಹಕರಿಸದೆ ಹೋದರೆ ಇದೇ ಕ್ರಮ ಅನುಸರಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಇತ್ತೀಚೆಗೆ ಮುಖ್ಯಮಂತ್ರಿಗಳು, ಸಚಿವರು ಮತ್ತು ಸರ್ಕಾರದ ಯೋಜನೆಗಳ ಕುರಿತು ಸಾಮಾಜಿಕ ತಾಣಗಳಲ್ಲಿ ನಿಂದಾನಾತ್ಮಕ ಬರಹ ಬರೆಯುತ್ತಿರುವ ಕಿಡಿಗೇಡಿಗಳ ಕೃತ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುಚೋದ್ಯತನಕ್ಕೆ ಕಡಿವಾಣ ಹಾಕುವ ಸಲುವಾಗಿ ಸರ್ಕಾರವು ನಕಲಿ ಖಾತೆಗಳ ಬಗ್ಗೆ ಸಮಗ್ರ ತನಿಖೆಗೆ ಸೂಚಿಸಿದೆ. ಈ ಸೂಚನೆ ಹಿನ್ನೆಲೆಯಲ್ಲಿ ನಕಲಿ ಖಾತೆದಾರರ ಮೇಲೆ ಸಾಮಾಜಿಕ ತಾಣಗಳಿಗೆ ಬಿಸಿ ಮುಟ್ಟಿಸಲು ಸೈಬರ್ ಕ್ರೈಂ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಅಮೀನ್ ಮಟ್ಟು ನೀಡಿದ್ದ ದೂರು:

ಟ್ವೀಟರ್ನಲ್ಲಿ ಮುಖ್ಯಮಂತ್ರಿಗಳ ಅಧಿಕೃತ ಖಾತೆ ಹೆಸರಿನಲ್ಲಿ ಕಳೆದ ಡಿಸೆಂಬರ್ 27ರಂದು ನಕಲಿ ಖಾತೆ ತೆರೆದಿದ್ದ ಆರೋಪಿ, ಆ ಖಾತೆಯಲ್ಲಿ ಸರ್ಕಾರದ ಯೋಜನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ನಾಯಕರ ಕುರಿತು ಅವಹೇಳನಕಾರಿ ಟ್ವೀಟ್ಗಳನ್ನು ಮಾಡಿದ್ದ. ಮೊದಲು cmofkarnataka ಎಂಬ ಖಾತೆ ತೆರೆದಿದ್ದ ಆತ, ಈ ಬಗ್ಗೆ ದೂರು ದಾಖಲಾದ ನಂತರ ಆ ಖಾತೆ ರದ್ದು ಮಾಡಿ ಮತ್ತೆ CMoKarnataka ಹೆಸರಿನಲ್ಲಿ ಖಾತೆ ತೆರೆದು ಗೊಂದಲಕಾರಿ ಟ್ವೀಟ್ಗಳನ್ನು ಪೋಸ್ಟ್ ಹಾಕಿದ್ದ. ಈ ಬಗ್ಗೆ ತನಿಖೆಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದರು.