Asianet Suvarna News Asianet Suvarna News

ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಉ.ಪ್ರ.ದಲ್ಲಿ ಅನುಮಾನಾಸ್ಪದ ಸಾವು

ಇಂದು ಬುಧವಾರ ಬೆಳಗ್ಗೆ ವಾಕಿಂಗ್'ಗೆಂದು ಹೋಗುವ ತಿವಾರಿ ಹೊರಗಡೆಯೇ ಶವವಾಗಿ ಪತ್ತೆಯಾಗುತ್ತಾರೆ. ವಾಕಿಂಗ್'ಗೆ ಹೋಗುವಾಗ ಅವರು ನಗುನಗುತ್ತಲೇ ಹೊರಟರು ಎಂದು ಗೆಸ್ಟ್'ಹೌಸ್'ನಲ್ಲಿನ ಅವರ ಸಹಚರರು ಹೇಳಿದ್ದಾರೆ. ತಿವಾರಿಯವರು ಮುಸ್ಸೂರಿಯಲ್ಲಿ ತರಬೇತಿ ಮುಗಿಸಿ, ತಮ್ಮ ತಂದೆತಾಯಿಯವರನ್ನು ನೋಡಲು ಲಕ್ನೋಗೆ ಆಗಮಿಸಿದ್ದರೆನ್ನಲಾಗಿದೆ.

karnataka cadre ias officer anurag tiwar found dead in uttarpradesh

ಬೆಂಗಳೂರು(ಮೇ 17): ಆಹಾರ ಇಲಾಖೆ ಆಯುಕ್ತ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಧ್ಯಪ್ರದೇಶದಲ್ಲಿ ತಮ್ಮ ವೃತ್ತಿಸಂಬಂಧಿತ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ರಜೆಯ ಮೇಲೆ ತವರಿಗೆ ಹೋಗಿದ್ದ ತಿವಾರಿ ಅವರು ಲಕ್ನೋನ ಹಜರತ್'ಗಂಜ್'ನಲ್ಲಿರುವ ಮಿರಾಬಿ ಗೆಸ್ಟ್ ಹೌಸ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ. 2007ರ ಕರ್ನಾಟಕ ಕೇಡರ್'ನ ಐಎಎಸ್ ಅಧಿಕಾರಿಯಾಗಿದ್ದ 36 ವರ್ಷದ ಅನುರಾಗ್ ತಿವಾರಿ ತಮ್ಮ ಜನ್ಮದಿನದಂದೇ ಸಾವನ್ನಪ್ಪಿದ್ದಾರೆ.

ಇಂದು ಬುಧವಾರ ಬೆಳಗ್ಗೆ ವಾಕಿಂಗ್'ಗೆಂದು ಹೋಗುವ ತಿವಾರಿ ಅವರು ಗೆಸ್ಟ್'ಹೌಸ್'ನ ಹೊರಗೆ ರಸ್ತೆ ಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವಾಕಿಂಗ್'ಗೆ ಹೋಗುವಾಗ ಅವರು ನಗುನಗುತ್ತಲೇ ಹೊರಟರು ಎಂದು ಗೆಸ್ಟ್'ಹೌಸ್'ನಲ್ಲಿನ ಅವರ ಸಹಚರರು ಹೇಳಿದ್ದಾರೆ. ಆಹಾರ ಪೂರೈಕೆ ಸಚಿವ ಯುಟಿ ಖಾದರ್ ಅವರು ಸುವರ್ಣನ್ಯೂಸ್'ಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತಿವಾರಿ ಸಾವಿನ ಸುದ್ದಿ ದುಃಖ ತಂದಿದೆ ಎಂದು ವಿಷಾದಿಸಿದ್ದಾರೆ. ತಿವಾರಿ ಹೃದಯಾಘಾತದಿಂದ ಮೃತಪಟ್ಟಿರಬಹುದೆಂಬ ಮಾಹಿತಿ ತಮಗೆ ಸದ್ಯಕ್ಕೆ ಲಭಿಸಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ..

1981ರ ಮೇ 17ರಂದು ಜನಿಸಿದ್ದ ತಿವಾರಿಯವರು 2008ರಿಂದ ರಾಜ್ಯದಲ್ಲಿ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಕೊಡಗು, ಬೀದರ್ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದ ಅನುರಾಗ್ ತಿವಾರಿ ಇತ್ತೀಚೆಗಷ್ಟೇ ಆಹಾರ ಇಲಾಖೆ ಆಯುಕ್ತರಾಗಿ ವರ್ಗಾವಣೆಯಾಗಿದ್ದರು. ವಿಧಾನಸೌಧದಲ್ಲೂ ಅವರು ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಎಲ್ಲೆಲ್ಲಿ ಸೇವೆ?
2009: ತುಮಕೂರಿನ ಮಧುಗಿಯಲ್ಲಿ ಸಹಾಯಕ ಆಯುಕ್ತ
2011: ತುಮಕೂರಿನ ನಗರಸಭಾ ಆಯುಕ್ತ
2013: ತುಮಕೂರು ಜಿಲ್ಲಾಧಿಕಾರಿ
2013: ಬೀದರ್ ಜಿಲ್ಲಾಧಿಕಾರಿ
2014: ಕೊಡಗು ಜಿಲ್ಲಾಧಿಕಾರಿ
2017: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತರು

ವೈಯಕ್ತಿಕ ಸಮಸ್ಯೆ ಇತ್ತೇ?
ಅನುರಾಗ್ ತಿವಾರಿಯವರ ಆಪ್ತರಾಗಿದ್ದ ಕಾರವಾರ ಅಪರ ಜಿಲ್ಲಾಧಿಕಾರಿ ಪ್ರಸನ್ನ ಅವರು ಈ ಸಾವಿಗೆ ಆಘಾತ ವ್ಯಕ್ತಪಡಿಸಿದ್ದಾರೆ. ತಿವಾರಿ ಒಬ್ಬ ದಕ್ಷ ಮತ್ತು ಸೌಮ್ಯ ಸ್ವಭಾವದ ತಿವಾರಿ ಅವರು ಬಹಳ ಸಕ್ರಿಯ ಅಧಿಕಾರಿ ಎಂದು ಪ್ರಸನ್ನ ಅವರು ಸುವರ್ಣನ್ಯೂಸ್'ಗೆ ತಿಳಿಸಿದ್ದಾರೆ. ತಮ್ಮ ಕಿರಿಯ ಸಹೋದ್ಯೋಗಿಗಳೊಂದಿಗೆ ಅವರು ಎಂದಿಗೂ ದರ್ಪದಿಂದ ವರ್ತಿಸುತ್ತಿರಲಿಲ್ಲ. ಎಲ್ಲರಂತೆ ಅವರಿಗೂ ವೈಯಕ್ತಿಕ ಸಮಸ್ಯೆ ಇತ್ತು. ಆದರೆ, ತಮ್ಮ ಕೆಲಸ ಕಾರ್ಯಗಳಿಗೆ ಆ ಸಮಸ್ಯೆ ತಡೆಯಾಗದಂತೆ ಅವರು ನೋಡಿಕೊಳ್ಳುತ್ತಿದ್ದರು ಎಂದು ಐಎಎಸ್ ಅಧಿಕಾರಿ ಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ.

ಬೀದರ್'ನ ಜಿಲ್ಲಾಧಿಕಾರಿಯಾಗಿದ್ದಾಗ ಅನುರಾಗ್ ತಿವಾರಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದರೆಂದು ಸಮಾಜ ಸೇವಕ ವಿಜಯ್ ಕುಮಾರ್ ಹೇಳಿದ್ದಾರೆ. ಪ್ರಾಮಾಣಿಕ ಅಧಿಕಾರಿಯಾಗಿದ್ದ ತಿವಾರಿಯವರು ಬೀದರ್'ನ ಅನೇಕ ಕೆರೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ಯಶಸ್ವಿಯಾಗಿ ನಿಂತು ನಿರ್ವಹಿಸಿದ್ದರು ಎಂದು ವಿಜಯ್ ಕುಮಾರ್ ತಿಳಿಸಿದ್ದಾರೆ.

ಉತ್ತರಪ್ರದೇಶ ಮೂಲದವರೇ ಆದ ಅನುರಾಗ್ ತಿವಾರಿ ಲಕ್ನೋ ವಿವಿಯಿಂದ ಎಲೆಕ್ಟ್ರಿಕಲ್ ಬಿಟೆಕ್ ಪದವಿ ಪಡೆದಿದ್ದರು. ಅವರ ಅಪ್ಪ-ಅಮ್ಮ ಇಬ್ಬರೂ ಲಕ್ನೋದಲ್ಲೇ ವಾಸವಾಗಿದ್ದು, ಅವರನ್ನು ನೋಡಲು ತಿವಾರಿ ಆಗಾಗ ರಜೆ ಮೇಲೆ ಹೋಗುತ್ತಿದ್ದರೆನ್ನಲಾಗಿದೆ. ಮಧ್ಯಪ್ರದೇಶದಲ್ಲಿ ವೃತ್ತಿಸಂಬಂಧಿತ ತರಬೇತಿ ಮುಗಿಸಿ 15 ದಿನ ರಜೆಯ ಮೇಲೆ ಅವರು ತವರಿಗೆ ಹೋಗಿದ್ದರು.

Follow Us:
Download App:
  • android
  • ios