ಬೆಂಗಳೂರು :  ಪಕ್ಷೇತರ ಶಾಸಕರನ್ನು ಯಾವ ಕೋಟಾದಡಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಹಗ್ಗ-ಜಗ್ಗಾಟ ಇನ್ನೂ ಮುಗಿಯದ ಪರಿಣಾಮವಾಗಿ ಸಂಪುಟ ವಿಸ್ತರಣೆ ನೆನೆಗುದಿಗೆ ಬಿದ್ದಿದೆ.

ಇಬ್ಬರು ಪಕ್ಷೇತರರಾದ ರಾಣೆಬೆನ್ನೂರು ಶಾಸಕ ಆರ್‌. ಶಂಕರ್‌ ಹಾಗೂ ಮುಳಬಾಗಿಲು ಶಾಸಕ ಎನ್‌. ನಾಗೇಶ್‌ ಅವರನ್ನು ಜೆಡಿಎಸ್‌ನ ಕೋಟಾದಡಿ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಿರ್ಧರಿಸಿದ್ದವು. ಈ ಬಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಭೆಯೊಂದನ್ನು ನಡೆಸಿ, ತೀರ್ಮಾನವನ್ನು ತೆಗೆದುಕೊಂಡಿದ್ದರು. ಸದರಿ ಸಭೆಯಲ್ಲಿ ಅಮಾವಾಸ್ಯೆ ನಂತರ ಅರ್ಥಾತ್‌ ಜೂ. 6ರ ವೇಳೆಗೆ ಸಂಪುಟ ವಿಸ್ತರಣೆ ಮಾಡಬೇಕು. ಈ ಬಗ್ಗೆ ನಿಖರ ದಿನಾಂಕವನ್ನು ಮುಖ್ಯಮಂತ್ರಿಯವರು ನಿರ್ಧರಿಸಬೇಕು ಎಂದು ತೀರ್ಮಾನವಾಗಿತ್ತು.

ಆದರೆ, ಈ ಸಭೆಯ ತೀರ್ಮಾನದಂತೆ ಪಕ್ಷೇತರರನ್ನು ಸಂಪುಟಕ್ಕೆ ಜೆಡಿಎಸ್‌ ಕೋಟಾದಡಿ ಸೇರಿಸಿಕೊಳ್ಳಲು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅಸಮ್ಮತಿ ತೋರಿದ ಪರಿಣಾಮವಾಗಿ ಇಡೀ ಸಂಪುಟ ವಿಸ್ತರಣೆ ವಿಚಾರವೇ ನೆನೆಗುದಿಗೆ ಬಿದ್ದಿದೆ.

ಈ ಬಗ್ಗೆ ಗುರುವಾರ ಸಿನಿಮಾ ಸಮಾರಂಭವೊಂದರ ವೇಳೆ ಮಾಧ್ಯಮಗಳು ಪ್ರಶ್ನಿಸಿದಾಗ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಈ ಪ್ರಶ್ನೆಯನ್ನು ನನ್ನನ್ನೇಕೆ ಕೇಳುತ್ತಿದ್ದೀರಿ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕೇಳಿ ಎಂದಷ್ಟೇ ಉತ್ತರಿಸಿದ್ದಾರೆ. ಇನ್ನು ಜೆಡಿಎಸ್‌ ನಾಯಕರು ಸಂಪುಟ ವಿಸ್ತರಣೆ ವಿಚಾರವಾಗಿ ತುಟಿ ಬಿಚ್ಚುತ್ತಿಲ್ಲ. ತನ್ಮೂಲಕ ಪೂರ್ವ ನಿರ್ಧಾರದಂತೆ ಗುರುವಾರ ನಡೆಯಬೇಕಿದ್ದ ಸಂಪುಟ ವಿಸ್ತರಣೆ ಇದೀಗ ನೆನೆಗುದಿಗೆ ಬಿದ್ದಿದೆ.

ಗೌಡರ ಅಸಮ್ಮತಿಗೆ ಕಾರಣವೇನು?

ಸಚಿವ ಸಂಪುಟದಲ್ಲಿ ಮೂರು ಸ್ಥಾನಗಳು ಖಾಲಿ ಇವೆ. ಈ ಪೈಕಿ ಎರಡು ಜೆಡಿಎಸ್‌ ಕೋಟಾದ್ದಾಗಿದ್ದರೆ, ಒಂದು ಸ್ಥಾನ ಕಾಂಗ್ರೆಸ್‌ನದ್ದಾಗಿದೆ. ಇಬ್ಬರು ಪಕ್ಷೇತರರನ್ನು ಜೆಡಿಎಸ್‌ ಕೋಟಾದಡಿ ತುಂಬುವ ಬಗ್ಗೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಮಾತುಕತೆ ವೇಳೆ ನಿರ್ಧಾರವಾಗಿತ್ತು. ಆದರೆ, ಈ ನಿರ್ಧಾರಕ್ಕೆ ದೇವೇಗೌಡರು ಅಸಮ್ಮತಿ ತೋರಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್‌ ಕೋಟಾದ ಎರಡು ಸ್ಥಾನಗಳನ್ನು ಪಕ್ಷೇತರರಿಗೆ ನೀಡಲು ಸಾಧ್ಯವಿಲ್ಲ. ಬೇಕಿದ್ದರೆ, ತಲಾ ಒಂದೊಂದು ಸ್ಥಾನವನ್ನು ಉಭಯ ಪಕ್ಷಗಳು ಬಿಟ್ಟು ಕೊಟ್ಟು ಪಕ್ಷೇತರರನ್ನು ಸಂಪುಟಕ್ಕೆ ತೆಗೆದುಕೊಳ್ಳೋಣ. ಎರಡು ಸ್ಥಾನವನ್ನು ಜೆಡಿಎಸ್ಸೇ ಬಿಟ್ಟುಕೊಡಬೇಕು ಎಂಬ ವಾದವನ್ನು ಒಪ್ಪಲಾಗದು ಎಂಬ ನಿಲುವನ್ನು ದೇವೇಗೌಡರು ಹೊಂದಿದ್ದಾರೆ ಎನ್ನಲಾಗಿದೆ.

ಇದಾದ ನಂತರ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ನೆನೆಗುದಿಗೆ ಬಿದ್ದಂತಾಗಿದೆ.