ಬೆಂಗಳೂರು(ಆ.20)  ಬಿಎಸ್ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಯಾಗಿದೆ. ಆದರೆ ಜಾರಕಿಹೊಳಿ ಕುಟುಂಬದವರ ಹೆಸರು ಇಲ್ಲ. ಸಹಜವಾಗಿಯೇ ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬದ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ತಪ್ಪಿರುವುದಕ್ಕೆ ಬೆಂಬಲಿಗರು ಅಸನಾಧಾನ ಹೊರಹಾಕಿದ್ದಾರೆ.

ಸಹೋದರರ ಪಟ್ಟಿ: ರಮೇಶ್, ಸತೀಶ್, ಬಾಲಚಂದ್ರ ಮತ್ತು ಲಖನ್ ಜಾರಕಿಹೊಳಿ ಸಹೋದರರು ರಾಜಕೀಯವಾಗಿ ತುಂಬಾ ಪ್ರಬಲರು. ಅದರಲ್ಲಿಯೂ ಬೆಳಗಾವಿಯಲ್ಲಿ ಪಾರಂಪರಾಗತವಾಗಿ ತಮ್ಮ ಹಿಡಿತ ಸಾಧಿಸಿಕೊಂಡು ಬಂದಿದ್ದಾರೆ. ಆದರೆ ಈ ಸಾರಿಯ ಸಂಪುಟದಲ್ಲಿ ಜಾರಕಿಹೊಳಿ ಫ್ಯಾಮಿಲಿಗೆ ಮಂತ್ರಿಗಿರಿ ಇಲ್ಲ.

ರಾಜಕೀಯ ಪಕ್ಷಗಳು: ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದು ಅರಬಾವಿಯ ಶಾಸಕರು.. ಇನ್ನು ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಲ್ಲಿದ್ದು ಯಮಕನಮರಡಿ ಶಾಸಕರು. ರಮೇಶ್ ಜಾರಿಹೊಳಿ ಗೋಕಾಕ್ ಶಾಸಕರಾಗಿದ್ದು ಇದೀಗ ಅನರ್ಹ. ಇನ್ನು ಲಖನ್ ಜಾರಕಿಹೊಳಿ ರಾಜಕಾರಣದಿಂದ ದೂರ ಉಳಿದಿದಿದ್ದು ಗೋಕಾಕ್ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಇವೆ.

 13 ಜಿಲ್ಲೆಯ 17 ಶಾಸಕರಿಗೆ ಮಂತ್ರಿ ಭಾಗ್ಯ; ಲಿಂಗಾಯತರಿಗೆ ಸಿಂಹಪಾಲು

2006ರಿಂದ ತಪ್ಪದ ಮಂತ್ರಿಗಿರಿ: ಕುಮಾರಸ್ವಾಮಿ ಮತ್ತು ಬಿಎಸ್ ವೈ ನೇತೃತ್ವದ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಿಂದ ಸಮಾಜ ಕಲ್ಯಾಣ ಸಚಿವರಾದರು. ನಂತರ 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿದಾಗಲೂ ಬಾಲಚಂದ್ರ ಜಾರಕಿಹೊಳಿ ಸಚಿವ ಸ್ಥಾನ ಕಾಯ್ದುಕೊಂಡರು.. ಇದಾದ ಮೇಲೆ ಸಿದ್ದರಾಮಯ್ಯ ಸರ್ಕಾರ ಬಂದಾಗ ಮೊದಲಿಗೆ ರಮೇಶ್ ಜಾರಕಿಹೊಳಿ, ನಂತರ ಸತೀಶ್ ಸಚಿವರಾದರು. ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ಬಂದಾಗ ರಮೇಶ್ ಮತ್ತು ಸತೀಶ್ ಇಬ್ಬರು ಕೆಲ ಕಾಲ ಮಂತ್ರಿಯಾಗಿದ್ದರು.

ರಾಜಭವನದಲ್ಲಿ ಪ್ರಮಾಣ ವಚನ: ಸಿಎಂ ಯಡಿಯೂರಪ್ಪ ಸಂಪುಟ ಸೇರಿದ ಸಚಿವರಿವರು!

ಬದಲಾದ ರಾಜಕೀಯ ವಾತಾವರಣ: ಆದರೆ ಇದೀಗ ರಾಜ್ಯದಲ್ಲಿ ರಾಜಕಾರಣದ ವಾತಾವರಣವೇ ಬದಲಾಗಿದೆ. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿಯೇ ಹದಿನೇಳು ಶಾಸಕರು ರಾಜೀನಾಮೆ ಕೊಟ್ಟ ಪರಿಣಾಮ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮೊದಲ ಹಂತದಲ್ಲಿ 17 ಜನರೇ ಸಚಿವರಾಗಿ ಪ್ರಮಾಣ ತೆಗೆದುಕೊಂಡಿದ್ದು ಜಾರಕಿಹೊಳಿ ಕುಟುಂಬ ಮಿಸ್ ಆಗಿದೆ.

ಪ್ರವಾಹ ಪರಿಸ್ಥಿತಿ ನಿಭಾಯಿಸಲು ತೆರಳಿದ್ದ ಬಾಲಚಂದ್ರ ಜಾರಕಿಹೊಳಿ ನಿಮಗೆಲ್ಲ ಮನೆ ಕಟ್ಟಿಕೊಡದಿದ್ದರೆ ಈ ಸರ್ಕಾರವನ್ನು ಕೆಡವುತ್ತೇನೆ ಎಂದು ಹೇಳಿದ್ದರು. ಎರಡನೇ ಹಂತದಲ್ಲಿ ಬಾಲಚಂದ್ರ ಅಥವಾ ರಮೇಶ್ ಸಚಿವರಾಗಬಹುದು ಎಂದು ಹೇಳಲಾಗುತ್ತಿದೆ.