Asianet Suvarna News Asianet Suvarna News

ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ : ಇಬ್ಬರಿಗೆ ಸಚಿವ ಸ್ಥಾನ

ಕರ್ನಾಟಕ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಇಂದು ನಡೆಯುವ ಸಂಪುಟ ವಿಸ್ತರಣೆ ವೇಳೆ ಇಬ್ಬರು ನೂತನ ಸಚಿವರ ಸೇರ್ಪಡೆಯಾಗಲಿದೆ. 

Karnataka cabinet expansion 2 More Leaders Get Portfolio
Author
Bengaluru, First Published Jun 14, 2019, 7:25 AM IST

ಬೆಂಗಳೂರು :  ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಸಚಿವ ಸಂಪುಟದ ಮೂರನೇ ವಿಸ್ತರಣೆ ಶುಕ್ರವಾರ ನಡೆಯಲಿದ್ದು, ಸರ್ಕಾರವನ್ನು ಸುಭದ್ರಗೊಳಿಸಿಕೊಳ್ಳುವ ಉದ್ದೇಶದಿಂದ ಇಬ್ಬರು ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ದಯಪಾಲಿಸಲು ನಿರ್ಧರಿಸಲಾಗಿದೆ.

ಸದ್ಯ ಜೆಡಿಎಸ್‌ ಪಾಲಿನ ಎರಡು ಮತ್ತು ಕಾಂಗ್ರೆಸ್‌ ಪಾಲಿನ ಒಂದು ಸಚಿವ ಸ್ಥಾನ ಖಾಲಿ ಉಳಿದಿವೆ. ಈ ಪೈಕಿ ಕಾಂಗ್ರೆಸ್‌ ಪಾಲಿನ ಸಚಿವ ಸ್ಥಾನವನ್ನು ಪಕ್ಷೇತರ ಶಾಸಕ ಆರ್‌.ಶಂಕರ್‌ ಅವರಿಗೆ ಮತ್ತು ಜೆಡಿಎಸ್‌ ಪಾಲಿನ ಒಂದು ಸಚಿವ ಸ್ಥಾನವನ್ನು ಮತ್ತೋರ್ವ ಪಕ್ಷೇತರ ಶಾಸಕ ಎನ್‌.ನಾಗೇಶ್‌ ಅವರಿಗೆ ನೀಡುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್‌ ಪಾಲಿನ ಇನ್ನುಳಿದ ಒಂದು ಸ್ಥಾನವನ್ನು ಪಕ್ಷದ ಶಾಸಕರಿಗೆ ನೀಡಬೇಕು ಎಂಬ ಚರ್ಚೆ ನಡೆದಿದ್ದು, ಸದ್ಯಕ್ಕೆ ಅದನ್ನು ಖಾಲಿ ಉಳಿಸಿಕೊಳ್ಳುವ ಬಗ್ಗೆಯೇ ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ. ಆದರೂ ಈ ಬಗ್ಗೆ ಶುಕ್ರವಾರ ಬೆಳಗ್ಗೆಯೇ ಸ್ಪಷ್ಟಚಿತ್ರಣ ಹೊರಬೀಳಲಿದೆ ಎನ್ನಲಾಗಿದೆ.

ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ರಾಜಭವನದ ಗಾಜಿನಮನೆಯಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಈ ಮೊದಲು ಬುಧವಾರ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿತ್ತು. ಆದರೆ, ಸಾಹಿತಿ ಗಿರೀಶ್‌ ಕಾರ್ನಾಡ್‌ ಅವರ ನಿಧನದ ಶೋಕಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರಕ್ಕೆ ಮುಂದೂಡಲಾಯಿತು.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿರುವುದರಿಂದ ಸಂಪುಟ ವಿಸ್ತರಣೆ ಬದಲು ಸಂಪುಟ ಪುನಾರಚನೆಯೇ ಸೂಕ್ತ ಎಂಬ ದಿಕ್ಕಿನಲ್ಲಿ ಕಳೆದ ಹಲವು ದಿನಗಳಿಂದ ಉಭಯ ಪಕ್ಷಗಳ ನಾಯಕರ ನಡುವೆ ಸಾಕಷ್ಟುಚರ್ಚೆ ನಡೆದಿತ್ತು. ಜೆಡಿಎಸ್‌ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿತ್ತು. ಆದರೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತ್ರ ಸದ್ಯಕ್ಕೆ ಪುನಾರಚನೆ ಬೇಡ ಎಂದು ಪಟ್ಟು ಹಿಡಿದರು. ಹೀಗಾಗಿ, ಅಂತಿಮವಾಗಿ ಪಕ್ಷೇತರ ಶಾಸಕರಿಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಚಿವ ಸ್ಥಾನ ನೀಡುವ ಮೂಲಕ ಸರ್ಕಾರದ ಬೆಂಬಲಕ್ಕೆ ಉಳಿಸಿಕೊಳ್ಳುವ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿತ್ತು.

ಕಾಂಗ್ರೆಸ್‌ ಪಕ್ಷದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಆ ಪಕ್ಷದ ಪಾಲಿಗೆ ಖಾಲಿ ಉಳಿದಿರುವುದು ಒಂದು ಸ್ಥಾನ ಮಾತ್ರ. ಅದು ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನ. ಆ ಸ್ಥಾನಕ್ಕೆ ಅದೇ ಕುರುಬ ಸಮುದಾಯದ ಪಕ್ಷೇತರ ಶಾಸಕ ಶಂಕರ್‌ ಅವರನ್ನು ಭರ್ತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಮತ್ತೊಬ್ಬ ಪಕ್ಷೇತರ ಶಾಸಕ ದಲಿತ ಸಮುದಾಯಕ್ಕೆ ಸೇರಿದ ನಾಗೇಶ್‌ ಅವರಿಗೆ ಜೆಡಿಎಸ್‌ ಕಡೆಯಿಂದ ಸಚಿವ ಸ್ಥಾನ ನೀಡಲಾಗುತ್ತಿದೆ.

ಶಂಕರ್‌ ಅವರು ಇದೇ ಸರ್ಕಾರದಲ್ಲಿ ಮೊದಲ ವಿಸ್ತರಣೆಯಲ್ಲೇ ಸಚಿವ ಸ್ಥಾನ ಪಡೆದುಕೊಂಡಿದ್ದರು. ಅವರಿಗೆ ಅರಣ್ಯ ಖಾತೆ ನೀಡಲಾಗಿತ್ತು. ಆದರೆ ಕಾಂಗ್ರೆಸ್‌ನ ಸಹ ಸದಸ್ಯ ಸ್ಥಾನ ಪಡೆಯಲು ನಿರಾಕರಿಸಿದ್ದರಿಂದ ಮತ್ತು ಕಾರ್ಯಕ್ಷಮತೆ ಕೊರತೆ ಹಿನ್ನೆಲೆಯಲ್ಲಿ ಕೆಲವು ತಿಂಗಳ ನಂತರ ಅವರನ್ನು ಸಚಿವ ಸ್ಥಾನದಿಂದ ಪದಚ್ಯುತಗೊಳಿಸಲಾಗಿತ್ತು. ಇನ್ನು ಕಾಂಗ್ರೆಸ್‌ನ ಬಂಡಾಯ ಶಾಸಕರಾಗಿರುವ ನಾಗೇಶ್‌ ಅವರು ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸಲಿದ್ದಾರೆ.

ಜೆಡಿಎಸ್‌ ಪಾಲಿನ ಇನ್ನುಳಿದ ಒಂದು ಸ್ಥಾನವನ್ನು ಭರ್ತಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿತ್ತು. ವಿಧಾನಪರಿಷತ್‌ ಸದಸ್ಯ ಬಿ.ಎಂ.ಫಾರೂಕ್‌ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷದ ನಾಯಕರು ಚಿಂತನೆ ನಡೆಸಿದ್ದರು. ಆದರೆ, ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸಿರುವ ಎಚ್‌.ವಿಶ್ವನಾಥ್‌, ಶಾಸಕರಾದ ಡಾ.ಅನ್ನದಾನಿ ಮತ್ತಿತರೂ ಆಕಾಂಕ್ಷಿಗಳಾಗಿರುವುದರಿಂದ ಅನಗತ್ಯ ಗೊಂದಲಕ್ಕೆ ಕಾರಣವಾಗಬಹುದು ಎಂಬ ಉದ್ದೇಶದಿಂದ ಆ ಸ್ಥಾನವನ್ನು ಖಾಲಿ ಉಳಿಸಿಕೊಳ್ಳುವ ಬಗ್ಗೆ ಜೆಡಿಎಸ್‌ ನಾಯಕರು ಒಲವು ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಹೊತ್ತಿಗೆ ಸ್ಪಷ್ಟಚಿತ್ರಣ ಗೊತ್ತಾಗಲಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios