ಬೆಂಗಳೂರು :  ಮುಂದಿನ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸೆಮಿಫೈನಲ್‌ ಎಂದೇ ಪರಿಗಣಿಸಿರುವ ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಈಗಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ.  

ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾಗಿದ್ದು ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಶಾಂತಿಯುತ ಮತ್ತು ಪಾರದರ್ಶಕ ಮತದಾನಕ್ಕಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸ್ಥಳೀಯ ಪೊಲೀಸರ ಜತೆಗೆ 39 ಕೇಂದ್ರ ಪಡೆಯನ್ನು ನಿಯೋಜಿಸಲಾಗಿದೆ. ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ಜಮಖಂಡಿ, ರಾಮನಗರ ಕ್ಷೇತ್ರದಲ್ಲಿ 6453 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 1502 ಸೂಕ್ಷ್ಮ ಮತಗಟ್ಟೆಮತ್ತು 57 ಸಖಿ (ಪಿಂಕ್‌) ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 26 ಮತಗಟ್ಟೆಗಳನ್ನು ಅಂಗವಿಕಲರು ನಿರ್ವಹಣೆ ಮಾಡಲಿದ್ದಾರೆ.

9822 ಬಾಲೆಟ್‌ ಯುನಿಟ್‌, 8438 ಕಂಟ್ರೋಲ್‌ ಯುನಿಟ್‌ ಹಾಗೂ 8922 ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ. 130 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಮಾಡಲಾಗುತ್ತಿದ್ದು, 1312 ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ. ಐದು ಕ್ಷೇತ್ರದಲ್ಲಿ 54,54,275 ಮತದಾರರಿದ್ದು, 27,21,085 ಪುರುಷ ಮತದಾರರು, 27,30,949 ಮಹಿಳಾ ಮತದಾರರು, 462 ಇತರರು ಮತ್ತು 1879 ಸೇವಾ ಮತದಾರರಿದ್ದಾರೆ. 51,131 ಅಂಗವಿಕಲ ಮತದಾರರನ್ನು ಗುರುತಿಸಲಾಗಿದೆ. ಇವರನ್ನು ಮನೆಯಿಂದ ಮತಗಟ್ಟೆಗೆ ಮತ್ತು ಮತಗಟ್ಟೆಯಿಂದ ಮನೆಗೆ ಕರೆದೊಯ್ಯಲು ದೇಶದಲ್ಲಿಯೇ ಇದೇ ಮೊದಲ ಬಾರಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ.

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್‌ ಕೊನೆಗಳಿಗೆಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಈ ಮೊದಲೇ ಸಿದ್ಧತೆ ಪೂರ್ಣಗೊಳಿಸಿರುವ ಆಯೋಗವು ಇವಿಎಂ ಯಂತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಎಂದು ಚಂದ್ರಶೇಖರ್‌ ಅವರ ಹೆಸರು ಮತ್ತು ಚಿಹ್ನೆಯನ್ನು ನಮೂದಿಸಲಾಗಿದೆ. ಚುನಾವಣೆ ಬಳಿಕ ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಪರಿಶೀಲಿಸಲಾಗುವುದು ಎಂದು ಆಯೋಗವು ತಿಳಿಸಿದೆ.