Asianet Suvarna News Asianet Suvarna News

ಉಪ ಚುನಾವಣೆ : 17 ಕ್ಷೇತ್ರಕ್ಕೆ ಸ್ಪರ್ಧಿಸುವ ಕಾಂಗ್ರೆಸ್‌ ಸಂಭಾವ್ಯರ ಪಟ್ಟಿ

ರಾಜ್ಯದಲ್ಲಿ ಉಪ ಚುನಾವಣೆಗೆ ಸಿದ್ಧತೆ ನಡೆದಿದೆ. ಈ ಬಾರಿ ಚುನಾವಣೆಯನ್ನು ಮೈತ್ರಿ ಇಲ್ಲದೇ ಎದುರಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧ ಮಾಡಲಾಗಿದೆ. 

Karnataka By Election Congress Probable Candidate List
Author
Bengaluru, First Published Aug 2, 2019, 7:21 AM IST

ಬೆಂಗಳೂರು [ಆ.02]:  ಮಾಜಿ ಸಂಸದ ಪ್ರಕಾಶ್‌ ಹುಕ್ಕೇರಿ, ಮಾಜಿ ಸಚಿವ ಸಂತೋಷ್‌ ಲಾಡ್‌, ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ, ಮಾಜಿ ಶಾಸಕರಾದ ಪ್ರಿಯಕೃಷ್ಣ, ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಅವರ ಪುತ್ರ ಪ್ರಶಾಂತ್‌ ದೇಶಪಾಂಡೆ...

ಇವರು ಅನರ್ಹ ಶಾಸಕರ ಕ್ಷೇತ್ರಗಳಿಗೆ ಎದುರಾಗಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಇರುವ ನಾಯಕರು. ಕುತೂಹಲಕಾರಿ ಸಂಗತಿಯೆಂದರೆ, ಈ ಪಟ್ಟಿಯಲ್ಲಿ ಬಿಜೆಪಿಯ ನಾಯಕ ಬಚ್ಚೇಗೌಡ ಅವರ ಪುತ್ರ ಶರತ್‌ ಬಚ್ಚೇಗೌಡ ಹಾಗೂ ಜೆಡಿಎಸ್‌ನ ಮಾಜಿ ಎಂಎಲ್‌ಎ ಮಾಲೂರು ಮಂಜುನಾಥ ಗೌಡ ಅವರ ಹೆಸರೂ ಇದೆ. ಗುರುವಾರ ನಡೆದ ಕಾಂಗ್ರೆಸ್‌ ಹಿರಿಯ ನಾಯಕರ ಸಭೆಯಲ್ಲಿ ಉಪ ಚುನಾವಣೆ ಎದುರಾಗಲಿರುವ 17 ಕ್ಷೇತ್ರಗಳಿಗೆ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವ ಪ್ರಾಥಮಿಕ ಪ್ರಯತ್ನ ನಡೆದಿದೆ. ಈ ವೇಳೆ ಈ ಹೆಸರುಗಳು ಪ್ರಸ್ತಾಪಗೊಂಡಿವೆ ಎಂದು ಮೂಲಗಳು ಹೇಳಿವೆ.

ಅನಾರೋಗ್ಯದ ನೆಪದಲ್ಲಿ ವಿಶ್ವಾಸ ಮತಯಾಚನೆಯಿಂದ ದೂರ ಉಳಿದ ಶ್ರೀಮಂತ ಪಾಟೀಲ್‌ ಅವರ ಅನರ್ಹತೆಯಿಂದ ತೆರವಾಗಿರುವ ಕಾಗವಾಡ ಕ್ಷೇತ್ರದಲ್ಲಿ ಮಾಜಿ ಸಂಸದ ಪ್ರಕಾಶ್‌ ಹುಕ್ಕೇರಿ ಅವರನ್ನು ಕಣಕ್ಕೆ ಇಳಿಸುವ ಉಮೇದಿಯಲ್ಲಿ ಕಾಂಗ್ರೆಸ್‌ ಇದೆ. ಅದೇ ರೀತಿ ಮಾಜಿ ಸಚಿವ ಸಂತೋಷ್‌ ಲಾಡ್‌ ಅವರನ್ನು ಅನರ್ಹರಾದ ಆನಂದಸಿಂಗ್‌ ಕ್ಷೇತ್ರವಾದ ಬಳ್ಳಾರಿಯ ವಿಜಯನಗರದಿಂದ ಕಣಕ್ಕೆ ಇಳಿಸುವ ಯೋಜನೆಯನ್ನು ಕಾಂಗ್ರೆಸ್‌ ರೂಪಿಸಿದೆ ಎನ್ನಲಾಗಿದೆ.

ಅದೇ ರೀತಿ ಶಿವರಾಂ ಹೆಬ್ಬಾರ್‌ ಅನರ್ಹಗೊಂಡಿರುವುದರಿಂದ ತೆರವಾಗಿರುವ ಯಲ್ಲಾಪುರ ಕ್ಷೇತ್ರಕ್ಕೆ ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಅವರ ಪುತ್ರ ಪ್ರಶಾಂತ್‌ ದೇಶಪಾಂಡೆ ಅವರ ಹೆಸರು ಕೇಳಿಬರುತ್ತಿದೆ. ಇವರಲ್ಲದೆ, ಭೀಮಣ್ಣ ನಾಯ್ಕ, ಶಶಿಭೂಷಣ್‌ ಹೆಗಡೆ ಅವರ ಹೆಸರೂ ಈ ಕ್ಷೇತ್ರಕ್ಕೆ ಪರಿಗಣನೆಯಲ್ಲಿದೆ.

ಎಂ. ಮುನಿರತ್ನ ಅನರ್ಹಗೊಂಡಿರುವುದರಿಂದ ಚುನಾವಣೆ ಎದುರಾಗಲಿರುವ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಎಂ. ಕೃಷ್ಣಪ್ಪ ಅವರ ಪುತ್ರ ಪ್ರಿಯಕೃಷ್ಣ ಹೆಸರು ಕೇಳಿ ಬರುತ್ತಿದೆ. ಇವರಲ್ಲದೆ, ಸ್ಥಳೀಯ ನಾಯಕ ಎಂ. ರಾಜಕುಮಾರ್‌, ಮಾಜಿ ಪುರಸಭೆ ಅಧ್ಯಕ್ಷ ಹನುಮಂತರಾಯಪ್ಪ ಅವರ ಹೆಸರು ಪರಿಗಣನೆಯಲ್ಲಿದೆ. ಯಶವಂತಪುರ ಕ್ಷೇತ್ರಕ್ಕೂ ಪ್ರಿಯಕೃಷ್ಣ ಅವರ ಹೆಸರನ್ನು ಪರಿಗಣಿಸಲಾಗುತ್ತಿದೆ. ಮಹಾಲಕ್ಷ್ಮೇ ಲೇಔಟ್‌ ಕ್ಷೇತ್ರಕ್ಕೆ ಮಾಜಿ ಶಾಸಕ ಮಾಗಡಿ ಬಾಲಕೃಷ್ಣ ಅವರ ಹೆಸರು ಪ್ರಬಲವಾಗಿ ಕೇಳಿ ಬಂದಿದೆ. ಇವರಲ್ಲದೆ, ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥ್‌ ಅವರ ಹೆಸರು ಪರಿಗಣನೆಯಲ್ಲಿದೆ ಎನ್ನಲಾಗಿದೆ.

ಇನ್ನು ಜೆಡಿಎಸ್‌ ಮಾಜಿ ಅಧ್ಯಕ್ಷ ಅಡಗೂರು ವಿಶ್ವನಾಥ್‌ ಅವರ ಕ್ಷೇತ್ರವಾದ ಹುಣಸೂರಿಗೆ ಮಾಜಿ ಶಾಸಕ ಎಚ್‌.ಪಿ. ಮಂಜನಾಥ್‌ ಅವರ ಹೆಸರು ಕೇಳಿಬರುತ್ತಿದೆ. ಕೆ.ಆರ್‌. ಪೇಟೆ ಕ್ಷೇತ್ರಕ್ಕೆ ಕೆ.ಬಿ. ಚಂದ್ರಶೇಖರ್‌, ರಾಣೆಬೆನ್ನೂರು ಕ್ಷೇತ್ರಕ್ಕೆ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಅಥವಾ ಅವರ ಪುತ್ರ ಪ್ರಕಾಶ್‌ ಕೋಳಿವಾಡ ಅವರ ಹೆಸರು ಪರಿಗಣನೆಯಲ್ಲಿದೆ ಎನ್ನಲಾಗಿದೆ.

ಶರತ್‌ ಬಚ್ಚೇಗೌಡಗೆ ಕಾಂಗ್ರೆಸ್‌ ಟಿಕೆಟ್‌!

ಕುತೂಹಲಕಾರಿ ಸಂಗತಿಯೆಂದರೆ, ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್‌ ಅವರ ಪುತ್ರ ಪುರುಷೋತ್ತಮ್‌ ಅವರೇನಾದರೂ ಕಣಕ್ಕೆ ಇಳಿದರೆ ಆಗ ಬಿಜೆಪಿಯ ಹಾಲಿ ಸಂಸದ ಬಚ್ಚೇಗೌಡ ಅವರ ಪುತ್ರ ಶರತ್‌ ಬಚ್ಚೇಗೌಡ ಅವರನ್ನು ಕರೆತಂದು ಕಣಕ್ಕೆ ಇಳಿಸುವ ಚಿಂತನೆಯೂ ಕಾಂಗ್ರೆಸ್‌ ನಾಯಕರಲ್ಲಿದೆ. ಇದು ಕೈಗೂಡದಿದ್ದರೆ ಜೆಡಿಎಸ್‌ನ ಮಾಜಿ ಶಾಸಕ ಮಾಲೂರು ಮಂಜುನಾಥಗೌಡ ಅವರ ಹೆಸರು ಕೂಡ ಪರಿಗಣನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಸಂಭಾವ್ಯರ ಪಟ್ಟಿ

ಗೋಕಾಕ್‌- ಲಖನ್‌ ಜಾರಕಿಹೊಳಿ

ಅಥಣಿ- ಎ.ಬಿ. ಪಾಟೀಲ್‌

ವಿಜಯನಗರ- ಸಂತೋಷ್‌ ಲಾಡ್‌

ಮಸ್ಕಿ- ಬಿ.ವಿ. ನಾಯಕ/ ಹಂಪಯ್ಯ ನಾಯಕ/ ರಾಜಾ ರಾಯಪ್ಪ ನಾಯಕ.

ಕಾಗವಾಡ- ಪ್ರಕಾಶ್‌ ಹುಕ್ಕೇರಿ/ ರಾಜು ಕಾಗೆ

ರಾಣೆ ಬೆನ್ನೂರು- ಕೆ.ಬಿ. ಕೋಳಿವಾಡ /ಪ್ರಕಾಶ್‌ ಕೋಳಿವಾಡ

ಹಿರೇಕೆರೂರು- ಯು.ಬಿ. ಬಣಕಾರ್‌ ಅಥವಾ ಅವರ ಪುತ್ರ

ಯಲ್ಲಾಪುರ- ಪ್ರಶಾಂತ್‌ ದೇಶಪಾಂಡೆ/ಶಶಿಭೂಷಣ್‌ ಹೆಗಡೆ/ಭೀಮಣ್ಣ ನಾಯ್ಕ

ಕೆ.ಆರ್‌. ಪುರ- ಎಂಎಲ್ಸಿ ನಾರಾಯಣಸ್ವಾಮಿ/ ಧನಂಜಯ/ಕೇಶವ್‌ ರಾಜಣ್ಣ/ ಉದಯಕುಮಾರ್‌ ರೆಡ್ಡಿ.

ಯಶವಂತಪುರ- ಪ್ರಿಯಕೃಷ್ಣ.

ರಾಜರಾಜೇಶ್ವರಿ ನಗರ- ಪ್ರಿಯ ಕೃಷ್ಣ/ಎಂ. ರಾಜಕುಮಾರ್‌ / ಹನುಮಂತರಾಯಪ್ಪ

ಹೊಸಕೋಟೆ- ಮಾಲೂರು ಮಂಜುನಾಥಗೌಡ/ಶರತ್‌ ಬಚ್ಚೇಗೌಡ

ಚಿಕ್ಕಬಳ್ಳಾಪುರ- ಡಾ. ಎಂ.ಸಿ. ಸುಧಾಕರ್‌/ಆಂಜಿನಪ್ಪ

ಹುಣಸೂರು- ಎಚ್‌.ಪಿ. ಮಂಜುನಾಥ್‌

ಮಹಾಲಕ್ಷ್ಮೇ ಬಡಾವಣೆ - ಮಾಗಡಿ ಬಾಲಕೃಷ್ಣ/ ಮಂಜುನಾಥ್‌

ಕೆ.ಆರ್‌. ಪೇಟೆ- ಕೆ.ಬಿ. ಚಂದ್ರಶೇಖರ್‌

ಶಿವಾಜಿ ನಗರ- ರಿಜ್ವಾನ್‌ ಅರ್ಷದ್‌/ಹುಸೇನ್‌

Follow Us:
Download App:
  • android
  • ios