ಬೆಂಗಳೂರು[ಸೆ.22]: ರಾಜ್ಯದಲ್ಲಿ ಮುಂದಿನ ತಿಂಗಳು ನಡೆಯಲಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಲು ಆರು ಕ್ಷೇತ್ರಗಳಲ್ಲಿ ಗೆಲ್ಲಲೇ ಬೇಕಿದೆ. ಒಂದು ವೇಳೆ ಆರು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸದಿದ್ದರೆ ಬಿಜೆಪಿ ಸರ್ಕಾರಕ್ಕೆ ಕಷ್ಟಉಂಟಾಗಲಿದೆ.

224 ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರಸ್ತುತ ಬಿಜೆಪಿ 106 (ಸ್ಪೀಕರ್‌ ಮತ್ತು ಪಕ್ಷೇತರ ಅಭ್ಯರ್ಥಿ ಸೇರಿ) ಇದ್ದು, ಜೆಡಿಎಸ್‌ 34 ಹಾಗೂ ಕಾಂಗ್ರೆಸ್‌ 66, ಬಿಎಸ್ಪಿಯ ಒಬ್ಬ ಶಾಸಕರಿದ್ದಾರೆ. ಪ್ರಸ್ತುತ ಎರಡು ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿಲ್ಲ. ಹೀಗಾಗಿ 222 ಕ್ಷೇತ್ರಗಳ ಲೆಕ್ಕಾಚಾರದಂತೆ ಯಾವುದೇ ಪಕ್ಷ ಸರ್ಕಾರ ರಚನೆ ಮಾಡಲು ಅಗತ್ಯ 112 ಸ್ಥಾನ ಇರಬೇಕಾಗುತ್ತದೆ.

106 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಸರಳ ಬಹುಮತ ಸಾಧಿಸಲು ಬಿಜೆಪಿ 15 ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ 6 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ. ಆರು ಸ್ಥಾನಗಳಲ್ಲಿ ಬಿಜೆಪಿ ಗೆದ್ದರೆ ಮಾತ್ರ ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಗಮವಾಗಿ ಮೂರು ವರ್ಷ ಪೂರೈಸಲು ಸಾಧ್ಯ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.