Asianet Suvarna News Asianet Suvarna News

3 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿ ಫೈನಲ್‌

 ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯು ಎರಡು ಲೋಕಸಭಾ ಕ್ಷೇತ್ರ ಮತ್ತು ಒಂದು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಆಯ್ಕೆಯನ್ನು ಮುಕ್ತಾಯಗೊಳಿಸಿದೆ. 

Karnataka By Election BJP Candidate Finalised
Author
Bengaluru, First Published Oct 10, 2018, 7:26 AM IST

ಬೆಂಗಳೂರು :  ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯು ಎರಡು ಲೋಕಸಭಾ ಕ್ಷೇತ್ರ ಮತ್ತು ಒಂದು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಇತರ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದಿಟ್ಟಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಂಸದ ಬಿ.ವೈ.ರಾಘವೇಂದ್ರ, ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಂಸದೆ ಜೆ.ಶಾಂತಾ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಶ್ರೀಕಾಂತ್‌ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.

ಮಂಗಳವಾರ ಸಂಜೆ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದ್ದು, ಈ ಮೂರು ಹೆಸರುಗಳನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಒಂದೆರಡು ದಿನಗಳಲ್ಲಿ ಅಲ್ಲಿಂದ ಒಪ್ಪಿಗೆ ದೊರೆತ ನಂತರ ಅಧಿಕೃತವಾಗಿ ಕೇಂದ್ರ ಸಮಿತಿಯಿಂದಲೇ ಪ್ರಕಟಗೊಳ್ಳಲಿದೆ.

ಪಕ್ಷದ ಸಂಘಟನೆ ದುರ್ಬಲವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತಾದರೂ ಸಮರ್ಥ ಅಭ್ಯರ್ಥಿಗಳ ಕೊರತೆಯಿಂದಾಗಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಯಡಿಯೂರಪ್ಪ ಅವರಿಗೆ ನೀಡುವ ನಿರ್ಣಯ ಕೈಗೊಳ್ಳಲಾಯಿತು. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳಲ್ಲಿನ ಬೆಳವಣಿಗೆಗಳನ್ನು ಆಧರಿಸಿ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು ಎಂದು ತಿಳಿದು ಬಂದಿದೆ.

ಅಭ್ಯರ್ಥಿಗಳ ಆಯ್ಕೆಯಾಗಿರುವ ಮೂರು ಕ್ಷೇತ್ರಗಳ ಪೈಕಿ ಶಿವಮೊಗ್ಗದಿಂದ ರಾಘವೇಂದ್ರ ಅವರನ್ನೇ ಕಣಕ್ಕಿಳಿಸುವ ಬಗ್ಗೆ ಬಹು ಹಿಂದೆಯೇ ನಿಶ್ಚಿತವಾಗಿತ್ತು. ಎರಡು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ಮತ್ತು ಪಕ್ಷದ ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ಬಹಿರಂಗವಾಗಿಯೇ ಘೋಷಣೆಯನ್ನೂ ಮಾಡಿದ್ದರು. ಹೀಗಾಗಿ, ಈ ಕ್ಷೇತ್ರದ ಬಗ್ಗೆ ಕೋರ್‌ ಕಮಿಟಿ ಸಭೆಯಲ್ಲಿ ಹೆಚ್ಚು ಚರ್ಚೆ ನಡೆಯಲಿಲ್ಲ. ಆದರೆ, ಬಳ್ಳಾರಿ ಲೋಕಸಭಾ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಗಂಭೀರ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಬಳ್ಳಾರಿಗೆ ಅಭ್ಯರ್ಥಿ ಮಾಡುವ ಜವಾಬ್ದಾರಿ ಮಾಜಿ ಸಂಸದರೂ ಆಗಿರುವ ಹಾಲಿ ಶಾಸಕ ಬಿ.ಶ್ರೀರಾಮುಲು ಅವರಿಗೆ ವಹಿಸಿದ್ದರಿಂದ ಹಲವು ಹೆಸರುಗಳು ಕೇಳಿಬಂದರೂ ಅಂತಿಮವಾಗಿ ಅವರ ಸಹೋದರಿ ಶಾಂತಾ ಅವರನ್ನೇ ಆಯ್ಕೆ ಮಾಡಲಾಯಿತು. ಇದಕ್ಕೂ ಮೊದಲು ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂಬ ಪ್ರಸ್ತಾಪ ಸಭೆಯಲ್ಲಿ ಕೇಳಿಬಂತು. ಮಾಜಿ ಸಂಸದ ನ್ಯಾ

ಎನ್‌.ವೈ.ಹನುಮಂತಪ್ಪ ಪುತ್ರ ಸುಜಯ್‌ ಕುಮಾರ್‌, ಪಕ್ಷದ ಮುಖಂಡ ಶ್ರೀನಿವಾಸ್‌ ಸೇರಿದಂತೆ ಹಲವರ ಹೆಸರುಗಳು ಕೇಳಿಬಂದರೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುವುದರಿಂದ ಶಾಂತಾ ಅವರಿಗೆ ಟಿಕೆಟ್‌ ನೀಡುವುದೇ ಸೂಕ್ತ ಎಂಬ ನಿಲವಿಗೆ ಬರಲಾಯಿತು ಎನ್ನಲಾಗಿದೆ.

ಅದೇ ರೀತಿ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಕಡಮೆ ಮತಗಳ ಅಂತರದಿಂದ ಸೋಲುಂಡಿದ್ದ ಮಾಜಿ ಶಾಸಕ ಶ್ರೀಕಾಂತ್‌ ಕುಲಕರ್ಣಿ ಅವರಿಗೆ ಟಿಕೆಟ್‌ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಸಂಘ ಪರಿವಾರದ ಮುಖಂಡರೂ ವ್ಯಕ್ತಪಡಿಸಿದ್ದರು. ಮಾಜಿ ಸಚಿವ ಮುರುಗೇಶ್‌ ನಿರಾಣಿ ಸಹೋದರ ಸಂಗಮೇಶ್‌ ನಿರಾಣಿ ಸೇರಿದಂತೆ ಹಲವರು ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದರೂ ಬಿಜೆಪಿ ನಾಯಕರು ಅಂತಿಮವಾಗಿ ಸಂಘ ಪರಿವಾರದ ಮುಖಂಡರ ಮಾತಿಗೆ ಮಣಿದರು ಎಂದು ತಿಳಿದು ಬಂದಿದೆ.

ಅನ್ಯ ಪಕ್ಷಗಳ ಮುಖಂಡರು ಸಂಪರ್ಕದಲ್ಲಿ: ಬಿಎಸ್‌ವೈ

ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಿಗೆ ಅನ್ಯ ಪಕ್ಷಗಳ ನಾಯಕರನ್ನು ಸೆಳೆದು ಕಣಕ್ಕಿಳಿಸುವ ಸಾಧ್ಯತೆ ಬಗ್ಗೆ ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೇ ಸುಳಿವು ನೀಡಿದ್ದಾರೆ.

ಕೋರ್‌ ಕಮಿಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ಯ ಪಕ್ಷಗಳ ಹಲವು ಪ್ರಮುಖ ಮುಖಂಡರು ನಮನ್ನು ಸಂಪರ್ಕಿಸಿದ್ದಾರೆ. ಹೀಗಾಗಿ ಈ ಎರಡು ಕ್ಷೇತ್ರಗಳಿಗೆ ಮೂರು ದಿನ ಕಾದು ನೋಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದರು.

ಮಂಡ್ಯ ಮತ್ತು ರಾಮನಗರ ಎರಡೂ ಕ್ಷೇತ್ರಗಳಿಗೆ ಉಸ್ತುವಾರಿ ನೇಮಕ ಮಾಡಿದ್ದು, ಅವರೆಲ್ಲ ನಾಳೆಯಿಂದಲೇ ಕೆಲಸ ಪ್ರಾರಂಭಿಸಲಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿ.ವೈ ರಾಘವೇಂದ್ರ ಸ್ಪರ್ಧೆ ಮಾಡುತ್ತಿದ್ದು, ಈ ತಿಂಗಳ 15ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

Follow Us:
Download App:
  • android
  • ios