Asianet Suvarna News Asianet Suvarna News

ಟಿಕೆಟ್‌ಗೆ ಮಗ ಪಟ್ಟು ಹಿಡಿದರೂ ಬಚ್ಚೇಗೌಡರ ಮೌನ? ಹಿಂದಿದೆ ಈ ಅನುಮಾನ!

ಹೊಸಕೋಟೆ ಟಿಕೆಟ್‌ ಗೆ ಶರತ್ ಬಚ್ಚೇಗೌಡ ಪಟ್ಟು/ ಬಚ್ಚೇಗೌಡ ಬಿಜೆಪಿ ಸಂಸದರಾಗಿದ್ದರೂ ಪುತ್ರನ ಬೇಡಿಕೆ/ ಬಚ್ಚೇಗೌಡರ ಮೌನದ ಬಗ್ಗೆ ಬಿಜೆಪಿಯಲ್ಲಿ ಅನುಮಾನ

Karnataka By Election 2019 MP Bachegowda son Sharath wants Hoskote BJP Ticket
Author
Bengaluru, First Published Sep 29, 2019, 11:19 PM IST

ಬೆಂಗಳೂರು[ಸೆ. 29] ಹೊಸಕೋಟೆ ಟಿಕೆಟ್  ಸಂಬಂಧಿಸಿದಂತೆ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಮತ್ತವರ ಪುತ್ರ ಶರತ್ ಬಚ್ಚೇಗೌಡ ಅವರ ನಡೆಯ ಕುರಿತು ಬಿಜೆಪಿ ವಲಯದಲ್ಲಿ ವ್ಯಾಪಕ ಟೀಕೆ ಹಾಗೂ ಅನುಮಾನಗಳು ವ್ಯಕ್ತವಾಗಿವೆ. ಬಿಜೆಪಿಯಿಂದ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಅಥವಾ ಅವರು ಸೂಚಿಸುವ ವ್ಯಕ್ತಿಗೆ ಟಿಕೆಟ್ ಕೊಡಬೇಕು ಎಂಬ ತಾತ್ವಿಕ ನಿಲುವಿಗೆ ಆಡಳಿತಾರೂಢ ಬಿಜೆಪಿ ಬಂದಿದೆ. ಆದರೆ, ಕಳೆದ ಬಾರಿ ಸ್ಪರ್ಧಿಸಿ ಸೋಲುಂಡಿದ್ದ ಶರತ್ ಬಚ್ಚೇಗೌಡ ಅವರು ತಮಗೇ ಟಿಕೆಟ್ ನೀಡಬೇಕು.

ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಆದರೆ, ಬಚ್ಚೇಗೌಡರು ಪಕ್ಷದ ಸಂಸದರಾಗಿದ್ದರೂ ಪುತ್ರನಿಗೆ ಕಿವಿಮಾತು ಹೇಳದೆ ಮೌನಕ್ಕೆ ಶರಣಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದೀಗ ಪುತ್ರ ಶರತ್ ತಾನು ತಂದೆಯಿಂದ ದೂರವಾಗಿ ಬೇರೊಂದು ಮನೆ ಮಾಡಲು ಹೊರಟಿರುವುದು ನಾಟಕವಲ್ಲದೇ ಮತ್ತೇನು ಎಂಬ ಪ್ರಶ್ನೆ ಬಿಜೆಪಿ ವಲಯದಿಂದಲೇ ಕೇಳಿಬರುತ್ತಿದೆ.

ಅವರ ದಾರಿ ಅವರಿಗೆ...ನಮ್ಮ ದಾರಿ ನಮಗೆ..: ಅನರ್ಹ ಶಾಸಕರಿಗೆ ಶಾಕ್ ಕೊಟ್ಟ ಬಿಜೆಪಿ ಹಿರಿಯ ನಾಯಕ...

ದಶಕಗಳಿಂದಲೂ ಹೊಸಕೋಟೆಯಲ್ಲಿ ಬಚ್ಚೇಗೌಡ ಮತ್ತು ನಾಗರಾಜ್ ನಾಗರಾಜ್ ಅವರದ್ದು ಜಿದ್ದಾಜಿದ್ದಿಯ ರಾಜಕಾರಣ. ನಾಗರಾಜ್ ಕಳೆದ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರೂ ಅದನ್ನು ತೊರೆದು ಹೊರಬಂದಿದ್ದಾರೆ. ನಾಗರಾಜ್ ಸೇರಿದಂತೆ ಹಲವರ ಕ್ರಮದಿಂದಾಗಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಹೀಗಾಗಿ, ಅದಕ್ಕೆ ಪ್ರತಿಯಾಗಿ ಅವರಿಗೆ ಅಥವಾ ಅವರು ಸೂಚಿಸುವವರಿಗೆ ಟಿಕೆಟ್ ನೀಡಲು ಪಕ್ಷದ ನಾಯಕರು ಭರವಸೆಯನ್ನೂ ನೀಡಿದ್ದಾರೆ.

ಆದರೆ, ಹೊಸಕೋಟೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಿಗೆ ಟಿಕೆಟ್ ನೀಡದೆ ಕಾಂಗ್ರೆಸ್ ಪಕ್ಷದಿಂದ ವಲಸೆ ಬರಲಿರುವ ನಾಗರಾಜ್ ಅವರಿಗೆ ಟಿಕೆಟ್ ನೀಡುವುದನ್ನು ತಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶರತ್ ಬಚ್ಚೇಗೌಡ ಗುಡುಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶರತ್ ಬಚ್ಚೇಗೌಡಅವರು ಮೊದಲ ಬಾರಿಗೆ  ಸ್ಪರ್ಧಿಸಿದ್ದರು.

ಅದಕ್ಕೂ ಮೊದಲು ಅವರ ತಂದೆ ಬಚ್ಚೇಗೌಡರೇ ಅಲ್ಲಿ ಅಭ್ಯರ್ಥಿಯಾಗಿದ್ದರು. ಶರತ್ ಅವರು ಆಗ ಕಾಂಗ್ರೆಸ್‌ನಲ್ಲಿದ್ದ ಎಂ.ಟಿ.ಬಿ.ನಾಗರಾಜ್ ವಿರುದ್ಧ ಸುಮಾರು ಏಳೂವರೆ ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದರು. ಹೀಗಾಗಿ, ಈ ಬಾರಿಯೂ ತಮಗೇ ಟಿಕೆಟ್ ನೀಡಬೇಕು ಎಂಬ ಪಟ್ಟು ಹಿಡಿದಿದ್ದಾರೆ. ಅದಕ್ಕಾಗಿ ಕ್ಷೇತ್ರದಲ್ಲಿ ಸತತ ಸಭೆಗಳನ್ನು ನಡೆಸುತ್ತಿದ್ದಾರೆ.

Follow Us:
Download App:
  • android
  • ios