ನೀರಾವರಿ ಯೋಜನೆಗಳು ಹಾಗೂ ಸಾಲ ಮನ್ನಾಕ್ಕೆ ಆಗ್ರಹಿಸಿ ನಾಳೆ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್​​​ ಗೊಂದಲ್ಲಿದೆ. ಯಾಕೆಂದರೆ ಬಂದ್​​'ಗೆ ಬೆಂಬಲ ನೀಡಲು ಹಲವು ಸಂಘಟನೆಗಳು ನಿರಾಕರಿಸಿವೆ. ಹೀಗಾಗಿ ನಾಳೆ ಬಂದ್ ಇದೆಯೋ ಇಲ್ಲವೋ ಎಂಬ ಗೊಂದಲ ಹುಟ್ಟಿಕೊಂಡಿದೆ.

ಬೆಂಗಳೂರು(ಜೂ.11): ನೀರಾವರಿ ಯೋಜನೆಗಳು ಹಾಗೂ ಸಾಲ ಮನ್ನಾಕ್ಕೆ ಆಗ್ರಹಿಸಿ ನಾಳೆ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್​​​ ಗೊಂದಲ್ಲಿದೆ. ಯಾಕೆಂದರೆ ಬಂದ್​​'ಗೆ ಬೆಂಬಲ ನೀಡಲು ಹಲವು ಸಂಘಟನೆಗಳು ನಿರಾಕರಿಸಿವೆ. ಹೀಗಾಗಿ ನಾಳೆ ಬಂದ್ ಇದೆಯೋ ಇಲ್ಲವೋ ಎಂಬ ಗೊಂದಲ ಹುಟ್ಟಿಕೊಂಡಿದೆ.

 ಕನ್ನಡ ಒಕ್ಕೂಟದ ಪರವಾಗಿ ವಾಟಾಳ್ ನಾಗರಾಜ್, ರಾಜ್ಯ ಬಂದ್'ಗೆ ಕರೆ ನೀಡಿದ್ದಾರೆ. ಆದರೆ, ನಾರಾಯಣ ಗೌಡ ನೇತೃತ್ವದ ಕರವೇ, ಕಾರ್ಮಿಕ ಸಂಘಟನೆಗಳು, ಕೆಎಸ್ ಆರ್ ಟಿಸಿ, ಬಿಎಂಟಿಸಿ, ಹೋಟೆಲ್ ಮಾಲೀಕರ ಸಂಘ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳೇ ಬೆಂಬಲ ನೀಡಲು ನಿರಾಕರಿಸಿವೆ. ಆಟೋ ಚಾಲಕರ ಸಂಘದಿಂದಲೂ ಬೆಂಬಲ ಇಲ್ಲ ಎಂದು ಹೇಳಲಾಗಿದೆ. ಹಾಗಾಗಿ ಜೂನ್ 12ರ ಬಂದ್ ಗೆ ವಾಟಾಳ್ ನಾಗರಾಜ್ ಅವರು ಎಲ್ಲಾ ಸಂಘಟನೆಗಳ ಮನವೊಲಿಸಿ ಬೆಂಬಲ ಪಡೆದುಕೊಳ್ಳುತ್ತಾರೋ ಅಥವಾ ಬಂದ್ ಗೆ ನೀರಸ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಜೂನ್ 12ರಂದು ರಾಜ್ಯ ಬಂದ್ ಇದೆಯೋ ಇಲ್ಲವೋ ಎಂಬ ಬಗ್ಗೆ ಇವತ್ತು ಅಂತಿಮ ನಿರ್ಧಾರ ಹೊರಬೀಳಬಹುದು. ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ, ಕಳಸಾ ಬಂಡೂರಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕನ್ನಡ ಪರ ಒಕ್ಕೂಟ ಬಂದ್‌ಗೆ ಕರೆ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ಆದರೆ, ಚಾಲಕರು ಮತ್ತು ನಿರ್ವಾಹಕರು ಎಂದಿನಂತೆ ಕರ್ತವ್ಯ ನಿರ್ವಹಿಸಲಿದ್ದು, ಬಸ್‌ಗಳ ಸಂಚಾರದಲ್ಲಿ ವ್ಯತ್ಯಯವಾಗುವುದಿಲ್ಲ ಎಂದೂ ಸಂಘ ಎಂದು ಸ್ಪಷ್ಟಪಡಿಸಿದೆ.

ಕರ್ನಾಟಕ ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ, ಆಟೋರಿಕ್ಷಾ ಮಾಲೀಕರು ಮತ್ತು ಚಾಲಕರ ಸಂಘ, ಬೆಂಗಳೂರು ನಗರ ಹೋಟೆಲ್‌ ಮಾಲೀಕರ ಸಂಘ, ಎಪಿಎಂಸಿ ವರ್ತಕರ ಸಂಘ, ರಾಜ್ಯ ತೈಲ ವರ್ತಕರ ಸಂಘಗಳು ತಮ್ಮ ಬೆಂಬಲ ಇಲ್ಲ ಎಂದು ತಿಳಿಸಿವೆ. ಬಸ್‌ಗಳು ಮತ್ತು ಆಟೋರಿಕ್ಷಾಗಳ ಎಂದಿನಂತೆ ಸಂಚರಿಸುತ್ತವೆ. ಪೆಟ್ರೋಲ್ ಬಂಕ್‌ಗಳು, ಶಾಲಾ ಕಾಲೇಜುಗಳು, ಹೋಟೆಲ್‌ಗಳು, ಅಂಗಡಿಗಳು ಸಹ ಕಾರ್ಯನಿರ್ವಹಿಸುತ್ತವೆ.