ಆಯ-ವ್ಯಯ ಎಂದರೆ ಎಲ್ಲಿಂದ ಎಷ್ಟುಹಣ ಬರುತ್ತದೆ ಮತ್ತು ಯಾವುದಕ್ಕೆ ಎಷ್ಟುವೆಚ್ಚ ಮಾಡಬೇಕು ಎಂಬುದರ ಲೆಕ್ಕಾಚಾರ. ಆದರೆ ಒಂದು ರಾಜ್ಯದ ಬಜೆಟ್‌ ಸಿದ್ಧಪಡಿಸುವುದೆಂದರೆ ಅದು ದೊಡ್ಡ ಪರಿಶ್ರಮ ಹಾಗೂ ಕಸರತ್ತಿನ ಕೆಲಸ. ಅಂಕಿ-ಅಂಶಗಳ ಜೊತೆ ಗುದ್ದಾಡಿ, ನಾಡಿನ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣದ ಜೊತೆಗೆ ರಾಜ್ಯ ಅಭಿವೃದ್ಧಿ ಪಥದತ್ತ ಹೆಜ್ಜೆ ಇಡುವ ರೀತಿಯಲ್ಲಿ ಬಜೆಟ್‌ ಸಿದ್ಧಪಡಿಸಬೇಕಾಗುತ್ತದೆ.

ಎಂ.ಆರ್‌.ಚಂದ್ರಮೌಳಿ

ಬೆಂಗಳೂರು : ಆಯ-ವ್ಯಯ ಎಂದರೆ ಎಲ್ಲಿಂದ ಎಷ್ಟುಹಣ ಬರುತ್ತದೆ ಮತ್ತು ಯಾವುದಕ್ಕೆ ಎಷ್ಟುವೆಚ್ಚ ಮಾಡಬೇಕು ಎಂಬುದರ ಲೆಕ್ಕಾಚಾರ. ಆದರೆ ಒಂದು ರಾಜ್ಯದ ಬಜೆಟ್‌ ಸಿದ್ಧಪಡಿಸುವುದೆಂದರೆ ಅದು ದೊಡ್ಡ ಪರಿಶ್ರಮ ಹಾಗೂ ಕಸರತ್ತಿನ ಕೆಲಸ. ಅಂಕಿ-ಅಂಶಗಳ ಜೊತೆ ಗುದ್ದಾಡಿ, ನಾಡಿನ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣದ ಜೊತೆಗೆ ರಾಜ್ಯ ಅಭಿವೃದ್ಧಿ ಪಥದತ್ತ ಹೆಜ್ಜೆ ಇಡುವ ರೀತಿಯಲ್ಲಿ ಬಜೆಟ್‌ ಸಿದ್ಧಪಡಿಸಬೇಕಾಗುತ್ತದೆ.

ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ತಿಂಗಳ 16ರಂದು ಮಂಡಿಸಲಿರುವ ಬಜೆಟ್ಟಿನ ಹಿಂದೆ ಸಾಕಷ್ಟುಸಂಖ್ಯೆಯಲ್ಲಿ ಆರ್ಥಿಕ ತಜ್ಞರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಆದರೆ, ಕೋರ್‌ ಟೀಮ್‌ನಂತೆ ಕೆಲಸ ಮಾಡಿ ಬಜೆಟ್‌ ರೂಪಿಸಿರುವುದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಏಳು ಜನರ ತಂಡ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತಃ ಆರ್ಥಿಕ ತಜ್ಞ. ಈ ಬಾರಿ ಅವರು ಮಂಡಿಸಲಿರುವುದು ತಮ್ಮ 13ನೇ ಆಯವ್ಯಯ. ಈ ಪ್ರಮಾಣದಲ್ಲಿ ಬಜೆಟ್‌ ಮಂಡಿಸಿರುವುದು ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮಾತ್ರ. ಆರ್ಥಿಕ ವಿಚಾರದಲ್ಲಿ ಆಳ ಅನುಭವ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮರ್ಥ ಅಧಿಕಾರಿಗಳ ತಂಡವೇ ಈ ಬಾರಿ ಸಾಥ್‌ ನೀಡಿದೆ. ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌, ಕಾರ್ಯದರ್ಶಿಗಳಾದ ಋುತ್ವಿಕ್‌ ರಂಜನ್‌ ಪಾಂಡೆ (ಬಜೆಟ್‌ ಮತ್ತು ಸಂಪನ್ಮೂಲ) ಏಕ್‌ರೂಪ್‌ ಕೌರ್‌ (ವೆಚ್ಚ), ಡಾ.ಡಿ.ಎಸ್‌. ರವೀಂದ್ರನ್‌ (ಖಜಾನೆ) ಮೊದಲ ಹಂತದ ಅಧಿಕಾರಿಗಳಾಗಿದ್ದು, ಒಟ್ಟಾರೆ ಬಜೆಟ್‌ ಸಿದ್ಧಪಡಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿರುತ್ತದೆ.

ಇವರ ನಂತರದಲ್ಲಿ ಹೆಚ್ಚುವರಿ ಕಾರ್ಯದರ್ಶಿಗಳಾದ ಸಿಂಧು ಬಿ. (ಆರ್ಥಿಕ ಸುಧಾರಣೆ), ವಿಶೇಷ ಅಧಿಕಾರಿಗಳು ಮತ್ತು ಜಂಟಿ ಕಾರ್ಯದರ್ಶಿಗಳಾದ ಪವನಕುಮಾರ್‌ ಮಾಲಪಟ್ಟಿ(ಬಜೆಟ್‌) ಇವರ ಶ್ರಮ ಸಾಕಷ್ಟುಹೆಚ್ಚಿದೆ. ವಿವಿಧ ಇಲಾಖೆಗಳಿಂದ ಬರುವ ಪ್ರಸ್ತಾವನೆಗಳನ್ನು ಕ್ರೋಡೀಕರಿಸಿ ಸಿದ್ಧಪಡಿಸುವ ಕೆಲಸ ಇವರದ್ದಾಗಿರುತ್ತದೆ. ಸಿಎಂ ಸೇರಿ ಈ ಏಳು ಮಂದಿಯ ಪಾತ್ರವೇ ಅತ್ಯಂತ ಪ್ರಮುಖ. ಇವರಲ್ಲದೆ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ಎಲ್‌.ಕೆ. ಅತೀಕ್‌, ತುಷಾರ್‌ ಗಿರಿನಾಥ್‌ ಬಜೆಟ್‌ ಸಿದ್ಧಗೊಳ್ಳುವ ಎಲ್ಲ ಹಂತದಲ್ಲಿ ಇದ್ದೇ ಇರುತ್ತಾರೆ.

ಬಜೆಟ್‌ ಹೇಗೆ ತಯಾರಾಗುತ್ತದೆ?

ಸಾಮಾನ್ಯವಾಗಿ ಐದಾರು ತಿಂಗಳ ಮೊದಲೇ ಎಲ್ಲ ಸ್ಥಳೀಯ ಸಂಸ್ಥೆಗಳಿಂದ, ಜನಪ್ರತಿನಿಧಿಗಳಿಂದ ಬರುವ ಬೇಡಿಕೆಗಳನ್ನು ಕ್ರೋಡೀಕರಿಸಿ ಜಿಲ್ಲಾಡಳಿತದ ಮೂಲಕ ಸಂಬಂಧಪಟ್ಟಇಲಾಖೆಗೆ ಸಲ್ಲಿಸಲಾಗುತ್ತದೆ. ನಂತರ ಅದನ್ನು ಸಂಬಂಧಪಟ್ಟಇಲಾಖೆಯ ಸಚಿವರು, ಅಧಿಕಾರಿಗಳು ಚರ್ಚಿಸಿ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಸಲ್ಲಿಸುತ್ತಾರೆ. ಬಜೆಟ್‌ ಸಿದ್ಧಪಡಿಸುವ ಒಂದು ತಿಂಗಳ ಮೊದಲೇ ಹಣಕಾಸು ಸಚಿವರು ಸಂಬಂಧಪಟ್ಟಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಮತ್ತೊಮ್ಮೆ ಪ್ರಸ್ತಾವನೆಗಳ ಬಗ್ಗೆ ಚರ್ಚಿಸುತ್ತಾರೆ. ಈ ಹಿಂದಿನ ವರ್ಷದಲ್ಲಿ ಆಯಾ ಇಲಾಖೆಗೆ ನೀಡಿದ ಹಣದ ಖರ್ಚು-ವೆಚ್ಚಗಳು, ಮುಂದುವರೆದ ಕಾಮಗಾರಿಗಳಿಗೆ ಬೇಕಾದ ಹಣ ಹಾಗೂ ಹೊಸ ಯೋಜನೆಗಳ ಆಧಾರದ ಮೇಲೆ ಇಲಾಖೆಗೆ ಹಣ ನಿಗದಿ ಮಾಡುವುದು ಸಂಪ್ರದಾಯ.

ಈಗಾಗಲೇ ಎಲ್ಲ ಇಲಾಖೆಗಳು ಸೇರಿದಂತೆ ರೈತರು, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು, ಹಿಂದುಳಿದ ವರ್ಗಗಳು ಹಾಗೂ ವಿವಿಧ ಸಂಘಟನೆಗಳ ಜೊತೆ ಚರ್ಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಬಜೆಟ್‌ಗೆ ಅಂತಿಮ ರೂಪ ಕೊಡುತ್ತಿದ್ದಾರೆ.

ಬಿಗಿ ಭದ್ರತೆಯಲ್ಲಿ ಮುದ್ರಣ

ಬಜೆಟ್‌ ಮಂಡನೆ ಫೆ.16ರಂದು ನಿಗದಿಯಾಗಿದ್ದರೂ ಹಿಂದಿನ ದಿನದವರೆಗೂ ಬಜೆಟ್‌ ಸಿದ್ಧತೆ ನಡೆಯುತ್ತಲೇ ಇರುತ್ತದೆ. ಫೆ.15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನ ಅಂತಿಮ ಕರಡು ಓದಿ ಒಪ್ಪಿಗೆ ನೀಡಿದ ನಂತರವೇ ರಾತ್ರಿ ಮುದ್ರಣಕ್ಕೆ ಹೋಗಲಿದೆ. ಬಜೆಟ್‌ನ ಮಾಹಿತಿ ಸೋರಿಕೆಯಾಗದಂತೆ ಸರ್ಕಾರಿ ಮುದ್ರಣಾಲಯದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಸಿಬ್ಬಂದಿಯನ್ನು ತಪಾಸಣೆ ನಡೆಸಲಾಗುತ್ತದೆ. ಅಂದು ರಾತ್ರಿಯಿಡೀ ಅತ್ಯಂತ ಬಿಗಿ ಭದ್ರತೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯ ಬಜೆಟ್‌ ಪ್ರತಿಗಳನ್ನು ಸರ್ಕಾರಿ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತದೆ. ಮರುದಿನ (ಫೆ.16) ಬಜೆಟ್‌ ಮಂಡನೆ ಹೊತ್ತಿಗೆ ಮುದ್ರಣಾಲಯದಿಂದ ನೇರವಾಗಿ ಬಜೆಟ್‌ ಪ್ರತಿ ಹೊತ್ತ ವಾಹನಗಳನ್ನು ಪೊಲೀಸ್‌ ಬಂದೋಬಸ್ತ್ನಲ್ಲಿ ವಿಧಾನಸೌಧಕ್ಕೆ ತರಲಾಗುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಒಂದು ತಿಂಗಳಿಂದ ರಾಜಕೀಯ ಚಟುವಟಿಕೆಗಳ ಮಧ್ಯೆ ದಿನಕ್ಕೆ ಏಳು-ಎಂಟು ಗಂಟೆಗಳ ಕಾಲ ಕರ್ನಾಟಕ ವಿದ್ಯುತ್‌ ನಿಗಮದ ‘ಶಕ್ತಿ ಭವನ’ದಲ್ಲಿ ಪ್ರತಿನಿತ್ಯ ವಿವಿಧ ಇಲಾಖೆಗಳ ಸಚಿವರು, ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ರಾಜ್ಯದ ಹಣಕಾಸು ಪರಿಸ್ಥಿತಿ ನೋಡಿಕೊಳ್ಳುವುದರ ಜೊತೆಗೆ ಚುನಾವಣಾ ವರ್ಷವಾಗಿರುವ ಕಾರಣ ಪಕ್ಷದ ಒತ್ತಡಕ್ಕೆ ಪೂರಕವಾಗಿ ಬಜೆಟ್‌ ಸಿದ್ಧಪಡಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ.

21 ಬಾರಿ ಭಾಷಾಂತರ: ವಿಶುಕುಮಾರ್‌ ದಾಖಲೆ!

ದಶಕಗಳ ಹಿಂದೆ ಸರ್ಕಾರ ಮಂಡಿಸುತ್ತಿದ್ದ ಬಜೆಟ್‌ನ ಪ್ರತಿಯನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟಕರವಾಗಿತ್ತು. ಇಂಗ್ಲಿಷ್‌ ಶಬ್ದಗಳನ್ನು ಕನ್ನಡಕ್ಕೆ ಅನುವಾದಿಸಿದ್ದರೂ ಸುಲಭವಾಗಿ ಅರ್ಥವಾಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಇಂಗ್ಲಿಷ್‌ನಲ್ಲಿ ಇರುತ್ತಿದ್ದ ಬಜೆಟ್‌ ಪ್ರತಿಯನ್ನು ಸೊಗಸಾದ ಕನ್ನಡದಲ್ಲಿ ಭಾಷಾಂತರ ಮಾಡುವ ಕೆಲಸವನ್ನು ಆರಂಭಿಸಿದವರು ಸದ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿರುವ ವಿಶುಕುಮಾರ್‌. ಒಂದಲ್ಲ, ಎರಡಲ್ಲ ಶುಕ್ರವಾರ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ ಸೇರಿಸಿದರೆ ಬರೋಬ್ಬರಿ 21 ಬಜೆಟ್‌ಗಳನ್ನು ಅವರು ಭಾಷಾಂತರ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ಹಿಂದೆ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಆರಂಭವಾದ ಬಜೆಟ್‌ ಭಾಷಾಂತರ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಸುಮಾರು 15-16 ಇಂಗ್ಲಿಷ್‌ನಲ್ಲಿದ್ದ ಬಜೆಟ್‌ಗಳನ್ನು ಒಬ್ಬರೇ ಅಹೋರಾತ್ರಿ ಕುಳಿತು ಭಾಷಾಂತರ ಮಾಡಿದ ಹೆಗ್ಗಳಿಗೆ ವಿಶುಕುಮಾರ್‌ ಅವರದ್ದಾಗಿದೆ. ಭಾಷಾಂತರ ಎಂದರೆ ಕೇವಲ ಮಕ್ಕಿ ಕಾ ಮಕ್ಕಿ ಕೆಲಸ ಅಲ್ಲ. ಬಜೆಟ್‌ ಪ್ರತಿಯಲ್ಲಿನ ಪ್ರತಿಯೊಂದು ಶಬ್ದ ಸರ್ಕಾರ ಮಾತನಾಡಿದಂತೆ ಇರಬೇಕು. ಹಾಗಾಗಿ ಸರ್ಕಾರದ ಮನಸ್ಸನ್ನು ಅರ್ಥ ಮಾಡಿಕೊಂಡು ಭಾಷಾಂತರ ಮಾಡುವ ಕೆಲಸವನ್ನು ವಿಶುಕುಮಾರ್‌ ಮಾಡುತ್ತಿದ್ದಾರೆ. ಬಜೆಟ್‌ಗೆ ಸಾಹಿತ್ಯದ ಕಂಪು ನೀಡಲು ಸಾಹಿತಿಗಳ ಪುಸ್ತಕ, ಕವನ ಓದಿ ಹೊಸ ಮೆರಗು ನೀಡುವ ಕೆಲಸವನ್ನು ಸಹ ಇವರು ಮಾಡುತ್ತಾರೆ.