ಕರ್ನಾಟಕ ರಾಜಕೀಯದಲ್ಲಿ ಸರ್ಕಾರ ಪತನವಾಗಿ ಬಿಜೆಪಿ ತುದಿಗಾಲಲಲ್ಲಿ ನಿಂತಿದೆ. ಆದರೆ ಕೇಂದ್ರದಿಂದ ಸಿಗದ ಗ್ರೀನ್ ಸಿಗ್ನಲ್ ಆತಂಕಕ್ಕೆ ಈಡು ಮಾಡಿದೆ. 

ನವದೆಹಲಿ/ಬೆಂಗಳೂರು [ಜು.26] : ಕಾನೂನು ಕಟ್ಟಳೆಗಳ ಪರಿಶೀಲನೆ ನಡೆಯುತ್ತಿರುವು ದರಿಂದ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಪರ್ಯಾಯ ಸರ್ಕಾರ ರಚನೆ ಪ್ರಕ್ರಿಯೆ ತುಸು ವಿಳಂಬವಾಗುವ ಸಾಧ್ಯತೆಯಿದ್ದು, ಗುರುವಾರದೆಹಲಿಗೆ ತೆರಳಿದ್ದ ಪಕ್ಷದ ರಾಜ್ಯ ನಾಯಕರಿಗೆ ವರಿಷ್ಠರು ಹಸಿರು ನಿಶಾನೆ ತೋರಿಲ್ಲ.

Add Asianetnews Kannada as a Preferred SourcegooglePreferred

ಮೂವರು ಶಾಸಕರನ್ನು ಅನರ್ಹಗೊಳಿಸಿ ವಿಧಾನಸಭೆಯ ಸ್ಪೀಕರ್ ಗುರುವಾರ ರಾತ್ರಿ ತೀರ್ಪು ನೀಡಿರುವುದರಿಂದ ಅದರಿಂದಾಗುವ ಸಾಧಕ ಬಾಧಕಗಳನ್ನು ಬಿಜೆಪಿ ಹೈಕಮಾಂಡ್ ಪರಿಶೀಲಿಸುತ್ತಿದೆ. ಅದರ ಬಗ್ಗೆ ಸ್ಪಷ್ಟ ಚಿತ್ರಣ ದೊರೆತ ಬಳಿಕವಷ್ಟೇ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದೆ.

ಈ ನಡುವೆ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹೊಸ ಸರ್ಕಾರ ರಚಿಸಲು ಸಿದ್ಧರಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೈಕಮಾಂಡ್ ನಿರ್ಧಾರಕ್ಕಾಗಿ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ.

ಬಿಜೆಪಿ ನಿಯೋಗ ಭೇಟಿ: ಗುರುವಾರ ಬೆಳಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರ ಉಪಸ್ಥಿತಿಯಲ್ಲಿ ಭೇಟಿಯಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಅರವಿಂದ ಲಿಂಬಾವಳಿ, ಜೆ.ಸಿ.ಮಾಧುಸ್ವಾಮಿ ಮತ್ತು ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸುಮಾರು ಒಂದು ಗಂಟೆಗಿಂತಲೂ ಹೆಚ್ಚು ಕಾಲ ಸರ್ಕಾರ ರಚನೆ ಸಂಬಂಧ ಮಾತುಕತೆ ನಡೆಸಿದ್ದಾರೆ. ಶುಕ್ರವಾರವೂ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.

ಈ ಸಂದರ್ಭದಲ್ಲಿ ಅಮಿತ್ ಶಾ ಅವರು ಹೊಸ ಸರ್ಕಾರ ರಚನೆಗೆ ಇರುವ ಕಾನೂನಾತ್ಮಕ ಸಮಸ್ಯೆಗಳ ಬಗ್ಗೆಯೇ ಹೆಚ್ಚು ಗಮನಹರಿಸಿದ್ದಾರೆ ಎಂದು ತಿಳಿದು ಬಂದಿದೆ. ಹಾಗೆಯೇ ಸ್ಥಿರ ಸರ್ಕಾರ ರಚಿಸಬೇಕಾದರೆ ಈ ಕಾನೂನು ತೊಡಕುಗಳನ್ನು ಹೇಗೆ ನಿಭಾಯಿಸಬಹುದು ಎಂಬುದರ ಬಗ್ಗೆ ನಿಯೋಗದ ಸದಸ್ಯರಿಂದ ಶಾ ಅವರು ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆ.