ಕಾವೇರಿ ನೀರು ಹಂಚಿಕೆ ವಿರೋಧಿಸಿ ವಾಟಾಳ್ ನಾಗರಾಜ್ ಅವರು ಆಗಸ್ಟ್ 13 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಆದರೆ, ಪ್ರಮುಖ ರೈತ, ಸಾರಿಗೆ ಮತ್ತು ಕನ್ನಡ ಸಂಘಟನೆಗಳು ಬೆಂಬಲ ಸೂಚಿಸದ ಕಾರಣ, ಬಂದ್ ವಿಫಲವಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಶಾಲಾ-ಕಾಲೇಜು, ಸಾರಿಗೆ ಸೇರಿದಂತೆ ಎಲ್ಲಾ ಸೇವೆಗಳು ಎಂದಿನಂತೆ ಲಭ್ಯವಿರಲಿವೆ.
ಬೆಂಗಳೂರು (ಆ.12): ರಾಜ್ಯದಲ್ಲಿ ಮತ್ತೆ 'ಕಾವೇರಿ ವಿವಾದ' ಬಿಸಿ ಪಡೆದುಕೊಂಡಿದ್ದು, ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನಾಳೆ (ಆಗಸ್ಟ್ 13, ಗುರುವಾರ) 'ಕರ್ನಾಟಕ ಬಂದ್' (Karnataka Bandh) ಗೆ ಕರೆ ನೀಡಿದ್ದಾರೆ. ಆದರೆ, ಈ ಬಂದ್‌ಗೆ ರಾಜ್ಯದ ಪ್ರಮುಖ ರೈತ, ಸಾರಿಗೆ ಹಾಗೂ ಕನ್ನಡ ಸಂಘಟನೆಗಳು ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ನಾಳೆ ಬಂದ್ ಸಂಪೂರ್ಣ ಫ್ಲಾಪ್ ಆಗುವ ಸಾಧ್ಯತೆಯಿದ್ದು, ರಾಜ್ಯಾದ್ಯಂತ ಜನಜೀವನ ಎಂದಿನಂತೆ ಯಥಾಸ್ಥಿತಿಯಲ್ಲಿ ಇರಲಿದೆ.
ಬಂದ್‌ಗೆ ಪ್ರಮುಖ ಸಂಘಟನೆಗಳ ಬೆಂಬಲ ಸಿಗದ ಕಾರಣ ಶಾಲಾ-ಕಾಲೇಜುಗಳು, ಸಾರಿಗೆ ಸೇವೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ಯಥಾರೀತಿ ನಡೆಯಲಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.
ನಾಳೆ ಏನಿರುತ್ತೆ? (ಸೇವೆಗಳು ಲಭ್ಯ):
ನಾಳೆ ರಾಜ್ಯದಾದ್ಯಂತ ಬಹುತೇಕ ಎಲ್ಲಾ ಅಗತ್ಯ ಹಾಗೂ ಪ್ರಮುಖ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ:
ಸಾರಿಗೆ ಸೇವೆಗಳು: KSRTC, BMTC ಬಸ್‌ಗಳು, ನಮ್ಮ ಮೆಟ್ರೋ (Namma Metro), ರೈಲ್ವೆ ಸೇವೆಗಳು, ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ (Ola/Uber) ಸೇವೆಗಳು ಎಂದಿನಂತೆ ಲಭ್ಯವಿರಲಿವೆ.
ಆರೋಗ್ಯ ಸೇವೆಗಳು: ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಮೆಡಿಕಲ್ ಶಾಪ್‌ಗಳು ಹಾಗೂ ಆಂಬ್ಯುಲೆನ್ಸ್ ಸೇವೆಗಳು ಯಥಾರೀತಿ ಇರಲಿವೆ.
ಶಿಕ್ಷಣ ಸಂಸ್ಥೆಗಳು: ಶಾಲಾ-ಕಾಲೇಜುಗಳಿಗೆ ಯಾವುದೇ ಅಧಿಕೃತ ರಜೆ ಘೋಷಣೆಯಾಗಿಲ್ಲ.
ಅಗತ್ಯ ಸರಕುಗಳು: ದಿನಸಿ ಅಂಗಡಿಗಳು, ಹಾಲು, ತರಕಾರಿ, ಮಾರುಕಟ್ಟೆಗಳು, ಬೇಕರಿ, ಜ್ಯೂಸ್ ಅಂಗಡಿಗಳು ಹಾಗೂ ಬೀದಿ ಬದಿ ವ್ಯಾಪಾರಗಳು ಓಪನ್ ಇರಲಿವೆ.
ವಾಣಿಜ್ಯ ವಲಯ: ಮಾಲ್‌ಗಳು, ಚಿತ್ರಮಂದಿರಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೈಗಾರಿಕಾ ಕ್ಷೇತ್ರಗಳು ಹಾಗೂ ಸರ್ಕಾರಿ ಆಫೀಸ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಬಂದ್‌ಗೆ ಯಾರ ಬೆಂಬಲವಿದೆ?
- ವಾಟಾಳ್ ನಾಗರಾಜ್ ನೇತೃತ್ವದ 'ಕನ್ನಡ ಸಂಘಟನೆಗಳ ಒಕ್ಕೂಟ'
- ಕನ್ನಡ ಸೇನೆ
- ಕನ್ನಡ ಜಾಗೃತಿ ವೇದಿಕೆ ಹಾಗೂ ಕೆಲವು ಸಣ್ಣಪುಟ್ಟ ಸಂಘಟನೆಗಳು ಮಾತ್ರ ಬಂದ್‌ಗೆ ಬೆಂಬಲ ನೀಡಿವೆ.
- ಖಾಸಗಿ ಶಾಲಾ ಒಕ್ಕೂಟ ನೈತಿಕ ಬೆಂಬಲ ನೀಡಿದರೂ, ಪರೀಕ್ಷೆ ನಡೆಯುತ್ತಿರುವುದರಿಂದ ಶಾಲೆಗೆ ರಜೆ ನೀಡುವುದಿಲ್ಲ.
- ಹೋಟೆಲ್ ಮಾಲೀಕ ಸಂಘಟನೆಗಳಿಂದಲ ನೈತಿಕ ಬೆಂಬಲವಿದ್ದರೂ ಸೇವೆಗಳನ್ನು ಬಂದ್ ಮಾಡುವುದಿಲ್ಲ.
ಯಾರ್ಯಾರ ಬೆಂಬಲವಿಲ್ಲ? (ಬಂದ್‌ನಿಂದ ದೂರ ಉಳಿದವರು):
ಈ ಬಾರಿಯ ಬಂದ್‌ಗೆ ರಾಜ್ಯದ ಪ್ರಭಾವಿ ಸಂಘಟನೆಗಳು ನೇರವಾಗಿ ವಿರೋಧ ವ್ಯಕ್ತಪಡಿಸಿವೆ ಅಥವಾ ದೂರ ಉಳಿದಿವೆ:
ಕನ್ನಡ ರಕ್ಷಣಾ ವೇದಿಕೆ (KRV): ನಾರಾಯಣ ಗೌಡ ಬಣ, ಪ್ರವೀಣ್ ಶೆಟ್ಟಿ ಬಣ ಹಾಗೂ ಶಿವರಾಮೇಗೌಡ ಬಣಗಳು ಬಂದ್‌ಗೆ ಬೆಂಬಲ ನೀಡುತ್ತಿಲ್ಲ.
ರೈತ ಹಾಗೂ ಚಲನಚಿತ್ರ ಸಂಘಟನೆಗಳು: ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘ ಬಂದ್‌ನಿಂದ ದೂರ ಇರಲಿವೆ.
ಸಾರಿಗೆ ಹಾಗೂ ಶಿಕ್ಷಣ: ಖಾಸಗಿ ಸಾರಿಗೆ ಒಕ್ಕೂಟ, ಆಟೋ ಯೂನಿಯನ್‌ಗಳು ಹಾಗೂ ಖಾಸಗಿ ಶಾಲೆಗಳ ಒಕ್ಕೂಟಗಳಾದ 'ರುಪ್ಸಾ' (RUPSA) ಮತ್ತು 'ಕ್ಯಾಮ್ಸ್' (KAMS) ಬೆಂಬಲ ನೀಡಿಲ್ಲ.
ಹೋಟೆಲ್ ಅಸೋಸಿಯೇಷನ್: ಬಂದ್‌ಗೆ ಕೇವಲ ನೈತಿಕ ಬೆಂಬಲ ನೀಡಿದ್ದು, ಹೋಟೆಲ್‌ಗಳು ತೆರೆದಿರಲಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ನಾಳೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಾಂಕೇತಿಕ ಧರಣಿ ಹಾಗೂ ಪ್ರತಿಭಟನೆಗಳು ನಡೆಯಬಹುದೇ ವಿನಃ, ರಾಜ್ಯಾದ್ಯಂತ ಸಾರ್ವಜನಿಕ ಸೇವೆಗಳಿಗೆ ಯಾವುದೇ ರೀತಿಯ ಅಡಚಣೆ ಉಂಟಾಗುವುದಿಲ್ಲ. ಜನಜೀವನ ಸಾಮಾನ್ಯ ದಿನಗಳಂತೆಯೇ ಇರಲಿದೆ.


