Asianet Suvarna News Asianet Suvarna News

ಕರ್ನಾಟಕ ಬಂದ್'ಗೆ ಮಿಶ್ರ ಪ್ರತಿಕ್ರಿಯೆ; ಬೆಂಗಳೂರಿನಲ್ಲಿ ಸದ್ದು ಮಾಡದ ಬಂದ್..!

ಕರ್ನಾಟಕ ಬಂದ್​ಗೆ ಬಯಲುಸೀಮೆಯಲ್ಲಿ ಉತ್ತರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ರೆ, ಮಧ್ಯ ಮತ್ತು ಕರಾವಳಿ ಭಾಗದಲ್ಲಿ ನೀರಸವಾಗಿತ್ತು.. ಬೆಂಗಳೂರಲ್ಲೂ ಬಂದ್'ಗೆ ಹೆಚ್ಚಿನ ಬೆಂಬಲ ಸಿಗಲಿಲ್ಲ. ಈ ಮಧ್ಯೆ ಬಲವಂತವಾಗಿ ಅಂಗಡಿ-ಮುಗಟ್ಟು ಮುಚ್ಚಿಸಲು ಯತ್ನಿಸಿದ ಪ್ರತಿಭಟನಕಾರರನ್ನ ಪೊಲೀಸ್ರು ಬಂಧಿಸಿದ್ರು.

karnataka bandh mixed response
  • Facebook
  • Twitter
  • Whatsapp

ಬೆಂಗಳೂರು(ಜೂನ್ 12): ಶಾಶ್ವತ ನೀರಾವರಿ ಯೋಜನೆ, ರೈತರ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ  ಕರ್ನಾಟಕ ಬಂದ್‌'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ವಾಗಿದೆ. ಬಯಲು ಸೀಮೆಯಲ್ಲಿ ಒಂದಷ್ಟು ತೀವ್ರತೆ ಇದ್ದದ್ದು ಬಿಟ್ಟರೆ ಉಳಿದ ಕಡೆ ಬಂದ್'ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿರುತ್ತಿರೋ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಈ ಭಾಗದಲ್ಲಿ ಬಂದ್ ಸಕ್ಸಸ್ ಆಗಿದೆ.. ಚಿಕ್ಕಬಳ್ಳಾಪುರದಲ್ಲಿ BSNL ಕಚೇರಿಯನ್ನ ಬಲವಂತವಾಗಿ ಮುಚ್ಚಿಸಲು ಯತ್ನಿಸಿದ 15ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನ ಪೊಲೀಸ್ರು ಬಂಧಿಸಿದ್ರು. ರಾಮನಗರದಲ್ಲಿ ಕಲ್ಲುತೂರಿ ವ್ಯಾಪಾರ ವಹಿವಾಟಿಗೆ ತೊಂದರೆ ಕೊಡ್ತಿದ್ದ 7 ಮಂದಿಯನ್ನು  ಬಂಧಿಸಿದ್ರು. ಹುಬ್ಬಳ್ಳಿಯಲ್ಲಿ ಪ್ರತಿಭಟನಾಕಾರರು ಲಾರಿ ತಡೆದು ಚಾಲಕನಿಗೆ ಥಳಿಸಿದರು. ಮೋದಿ ಪ್ರತಿಕೃತಿ ಶವಯಾತ್ರೆ ನಡೆಸಿದ್ರು. ಗದಗದಲ್ಲಿ  ರಸ್ತೆ ತಡೆದು ಪ್ರತಿಭಟನೆ ನಡೆಸಲಾಯ್ತು. ವಿಜಯಪುರದಲ್ಲಿ ಬೈಕ್ ರ್ಯಾಲಿ ನಡೆಸ್ತಿದ್ದ ವೇಳೆ ಆ್ಯಂಬುಲೆನ್ಸ್ ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕಿಕೊಂಡ ಘಟನೆಯೂ ನಡೆಯಿತು. ಇನ್ನು, ಕೋಲಾರದಲ್ಲಿ  ಟಾಲಿವುಡ್ ನಟ ಜೂನಿಯರ್ ಎನ್'ಟಿಆರ್'ನ ಕಾರನ್ನು ತಡೆ ಹಿಡಿಯಲಾಗಿತ್ತು.. ನೆಂಟರಿಷ್ಟರು ಇಲ್ಲದೇ ಬಿಕೋ ಅಂತಿದ್ದ ಕಲ್ಯಾಣ ಮಂಟಪದಲ್ಲಿ ಹೋರಾಟಗಾರರೇ ಊಟ ಮಾಡಿದ್ರು.

ಇದು ಬಿಟ್ಟರೆ ಉಳಿದೆಡೆ ಬಂದ್ ಹೇಳಹೆಸರಿಲ್ಲದಂತಿತ್ತು. ಕಲಬುರಗಿ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಚಾಮರಾಜನಗರ, ದಾವಣಗೆರೆ, ಧಾರವಾಡ, ಹಾಸನ, ಹಾವೇರಿ, ಕಾರವಾರ, ರಾಯಚೂರು ,  ಉಡುಪಿ, ಯಾದಗಿರಿ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರಲ್ಲೂ ನೀರಸ:
ಕರ್ನಾಟಕ ಬಂದ್‌‌'ಗೆ ಬೆಂಗಳೂರಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯ್ತು.. KSRTC, BMTC,  ಮೆಟ್ರೋ, ಆಟೋ ಸಂಚಾರ ಎಂದಿನಂತಿತ್ತು. ವ್ಯಾಪಾರ ವಹಿವಾಟಿನ ಮೇಲೂ ಬಂದ್ ಪರಿಣಾಮ ಬೀರಲಿಲ್ಲ.

ಟೌನ್‌'ಹಾಲ್‌ನಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಮುಖಂಡರಾದ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು ಸೇರಿ ಹಲವರನ್ನ ಬಂಧಿಸಲಾಯ್ತು. ಈ ಸಮಯದಲ್ಲಿ ಬಂದ್ ಬೆಂಬಲಿಸದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ವಿರುದ್ಧ ವಾಟಾಳ್ ನಾಗರಾಜ್ ಕಿಡಿಕಾರಿದ್ರು.

ದಿಢೀರ್ ಬಂದ್‌'ನಿಂದ ಶ್ರೀಸಾಮಾನ್ಯರಿಗೆ ತೊಂದ್ರೆ ಆಗಬಾರದು ಎಂಬ ಉದ್ದೇಶದಿಂದ ತಮ್ಮ ಸಂಘಟನೆಯು ದೂರ ಉಳಿದಿದ್ದಾಗಿ ನಾರಾಯಣಗೌಡ ಸುವರ್ಣ ನ್ಯೂಸ್'​ಗೆ ಸ್ಪಷ್ಟಪಡಿಸಿದ್ರು.

ಇನ್ನು, ಎಚ್ಚರಿಕೆ ಮೀರಿ ಪ್ರತಿಭಟನೆ ಮಾಡಿದ ಮತ್ತೊಂದು ಬಣದ ಕರವೇ ಮುಖಂಡ ಪ್ರವೀಣ್ ಕುಮಾರ್​ ಶೆಟ್ಟಿಯನ್ನು ಮೇಖ್ರಿ ಸರ್ಕಲ್ ಬಳಿ ಪೊಲೀಸರು ವಶಕ್ಕೆ ಪಡೆದ್ರು.

ಮೆಜೆಸ್ಟಿಕ್'​ನಲ್ಲಿ ಕರವೇ ಯುವಸೇನೆ ಕಾರ್ಯಕರ್ತರು, ಆಟೋ ಚಾಲಕರು, ಮೆಟ್ರೋ ಸಿಬ್ಬಂದಿ, ಡ್ರೈವರ್​'ಗಳಿಗೆ ಹೂವು ನೀಡುವ ಮೂಲಕ ಪ್ರತಿಭಟನೆ ಮಾಡದಿರಿ ಅಂತ ಮನವಿ ಮಾಡಿಕೊಂಡ್ರು. ಒಟ್ನಲ್ಲಿ ಬೆಂಗಳೂರಿನಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕನ್ನಡಪರ ಸಂಘಟನೆಗಳ ದ್ವಂದ್ವ ಇದ್ರಿಂದ ಬಯಲಾಯ್ತು.

ಬ್ಯುರೋ ರಿಪೋರ್ಟ್, ಸುವರ್ಣನ್ಯೂಸ್

Follow Us:
Download App:
  • android
  • ios