ಬೆಂಗಳೂರು [ಜೂ.29] :  ಅನಾರೋಗ್ಯ ಎಂದು ಆಯುರ್ವೇದ ಮತ್ತು ಯುನಾನಿ ವೈದ್ಯರ ಬಳಿ ಚಿಕಿತ್ಸೆಗೆ ಹೋಗುವವರೇ ಎಚ್ಚರ...!

ಎಸ್‌ಎಸ್‌ಎಲ್‌ಸಿ ಅನುತ್ತೀರ್ಣ ಆದವರಿಗೆ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯಿಂದಲೇ ವೈದ್ಯರೆಂದು ನಕಲಿ ಪ್ರಮಾಣಪತ್ರ ಪಡೆದು ಚಿಕಿತ್ಸೆ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಕಲಿ ಪ್ರಮಾಣ ಪತ್ರ ನೀಡಿರುವ ಬಗ್ಗೆ ಕರ್ನಾಟಕ ಆರ್ಯುವೇದ ಮತ್ತು ಯುನಾನಿ ವೈದ್ಯ ಮಂಡಳಿ ಈ ಹಿಂದೆ ರಿಜಿಸ್ಟ್ರಾರ್‌ ಆಗಿದ್ದ ಡಾ.ತಿಮ್ಮಪ್ಪ ಶೆಟ್ಟಿಗಾರ್‌ ಎಂಬುವರ ವಿರುದ್ಧ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಏನಿದು ಘಟನೆ?

ಡಾ.ತಿಮ್ಮಪ್ಪ ಶೆಟ್ಟಿಗಾರ್‌ ಅವರು 2012ರಿಂದ ನಾಲ್ಕು ವರ್ಷಗಳ ಕಾಲ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯ ರಿಜಿಸ್ಟ್ರಾರ್‌ ಆಗಿದ್ದರು. ಈ ಅವಧಿಯಲ್ಲಿ ಆರ್ಯುವೇದ ಮತ್ತು ಯುನಾನಿ ವೈದ್ಯ ವೃತ್ತಿಗೆ ಅನರ್ಹತೆ ಇಲ್ಲದ ವ್ಯಕ್ತಿಗಳಿಂದ ಲಕ್ಷಾಂತರ ರುಪಾಯಿ ಹಣ ಪಡೆದು ವೈದ್ಯಕೀಯ ನೊಂದಣಿ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿರುವ ಬಗ್ಗೆ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಹಾಲಿ ರಿಜಿಸ್ಟ್ರಾರ್‌ ಡಾ.ವೆಂಕಟರಾಮಯ್ಯ ಅವರು ಕೆಲವರ ದಾಖಲೆ ಪರಿಶೀಲಿಸಿದ್ದರು. ಈ ವೇಳೆ ಕಾಮಾಕ್ಷಿಪಾಳ್ಯ ನಿವಾಸಿ ಕೆ.ಮೊಹಮ್ಮದ್‌ ಖಾಜಾ ಮೊಹಿದೀನ್‌ ಎಂಬಾತನ ಬಳಿ ನಕಲಿ ದಾಖಲೆ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ವಿಚಾರಣೆ ನಡೆಸಿದಾಗ ಎಸ್‌ಎಸ್‌ಎಲ್‌ಸಿ ಅನುತ್ತೀರ್ಣನಾಗಿರುವ ಮೊಹಮ್ಮದ್‌ ಬಳಿ ಹಣ ಪಡೆದು ಬಿಯುಎಂಎಸ್‌ (ಬ್ಯಾಚುಲರ್‌ ಆಫ್‌ ಯುನಾನಿ ಮೆಡಿಸಿನ್‌ ಅಂಡ್‌ ಸರ್ಜರಿ) ಪದವೀಧರ ಪ್ರಮಾಣ ಪತ್ರ ನೀಡಿರುವ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

 10 ಲಕ್ಷಕ್ಕೆ ವೈದ್ಯಕೀಯ ಪ್ರಮಾಣಪತ್ರ!

ತಿಮ್ಮಪ್ಪ ಶೆಟ್ಟಿಗಾರ್‌ ಅವರು 2015ರಲ್ಲಿ ಖುದ್ದು ಮೊಹಮ್ಮದ್‌ನನ್ನು ಸಂಪರ್ಕ ಮಾಡಿ, ವೈದ್ಯ ಪ್ರಮಾಣಪತ್ರ ನೀಡುತ್ತೇವೆ. ಅದಕ್ಕೆ 15 ಲಕ್ಷ ರು. ತಗಲುತ್ತದೆ ಎಂದು ಹೇಳಿದ್ದರು. ನಂತರ 10 ಲಕ್ಷ ರು. ಪಡೆದು ವೈದ್ಯ ವೃತ್ತಿ ನಿರತ ವೈದ್ಯ ಪ್ರಮಾಣಪತ್ರ ನೀಡಿದ್ದರು ಎಂದು ಮೊಹಮ್ಮದ್‌ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ನೀಡಿದ್ದ ನೋಟಿಸ್‌ಗೆ ಉತ್ತರ ನೀಡಿದ್ದಾನೆ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೊಹಮ್ಮದ್‌ ಅವರ ತಂದೆ ಪಾರಂಪರಿಕ ವೈದ್ಯರಾಗಿದ್ದು, ಕಾಮಾಕ್ಷಿಪಾಳ್ಯದಲ್ಲಿ ರತನ್‌ ಡಿಸ್ಪೆನ್ಸರಿ ಎಂಬ ಚಿಕಿತ್ಸಾಲಯ ಹೊಂದಿದ್ದಾರೆ. ಇಲ್ಲಿ ಮೊಹಮ್ಮದ್‌ ಸಹಾಯಕನಾಗಿದ್ದ. ಈ ವೇಳೆ ತಿಮ್ಮಪ್ಪ ಶೆಟ್ಟಿಗಾರ್‌, ಮಂಡಳಿಯ ಮಾಜಿ ಸದಸ್ಯ ಡಾ.ವಾಸುದೇವ ಹೊಳ್ಳ ಹಾಗೂ ಮಾಜಿ ಅಧ್ಯಕ್ಷ ಡಾ.ಸತ್ಯಮೂರ್ತಿ ಅವರ ಸಂಪರ್ಕ ಮಾಡಿದ್ದಾಗಿ ಮಂಡಳಿ ಬಳಿ ಲಿಖಿತ ಹೇಳಿಕೆ ನೀಡಿದ್ದಾನೆ. ಈ ಹೇಳಿಕೆ ದಾಖಲೆಗಳನ್ನು ಪೊಲೀಸರಿಗೆ ನೀಡಲಾಗಿದೆ ಎಂದು ವೆಂಕಟರಾಮಯ್ಯ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಆಯುರ್ವೇದ ಮತ್ತು ಯುನಾನಿ ಮಂಡಳಿಯಿಂದಲೇ ವೈದ್ಯನೆಂದು ನಕಲಿ ದಾಖಲೆ ನೀಡಿರುವ ಬಗ್ಗೆ ದೂರು ದಾಖಲಾಗಿದೆ. ಉಪ್ಪಾರ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- ರಮೇಶ್‌.ಬಿ, ಪಶ್ವಿಮ ವಿಭಾಗದ ಡಿಸಿಪಿ

ಇದೇ ರೀತಿ ಹಲವು ಮಂದಿ ಬಳಿ ಹಣ ಪಡೆದು ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿರುವ ಬಗ್ಗೆ ದೂರುಗಳು ಬಂದಿವೆ. ತಿಮ್ಮಪ್ಪ ಶೆಟ್ಟಿಹಾಗೂ ಹಿಂದಿನ ನೊಂದಾಣಾಧಿಕಾರಿ ವೇಳೆ ನೀಡಲಾದ ವೈದ್ಯಕೀಯ ಪ್ರಮಾಣ ಪತ್ರ ನೀಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಪೊಲೀಸ್‌ ಠಾಣೆಯಲ್ಲೂ ದೂರು ನೀಡಲಾಗಿದೆ.

- ಡಾ.ವೆಂಕಟರಾಮಣಯ್ಯ, ಆಯುರ್ವೇದ ಮತ್ತು ಯುನಾನಿ ವೈದ್ಯಕೀಯ ಮಂಡಳಿ ನೊಂದಣಿ ಅಧಿಕಾರಿ

ವರದಿ: ಎನ್‌.ಲಕ್ಷ್ಮಣ್‌