224 ಕ್ಷೇತ್ರಗಳಲ್ಲೂ ಸ್ತ್ರೀಯರಿಗೆ ಮಾತ್ರವೇ ಟಿಕೆಟ್‌: ಎಂಇಪಿ

First Published 10, Mar 2018, 7:43 AM IST
Karnataka Assembly Election Woman Contestant
Highlights

ಮಹಿಳಾ ಸಬಲೀಕರಣ ಹೆಸರಿನಲ್ಲಿ ಅಸ್ವಿತ್ವಕ್ಕೆ ಬಂದಿರುವ ಎಂಇಪಿ ಪಕ್ಷವು, ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನೇ ಅಖಾಡಕ್ಕೆ ಹೂಡಿ 150 ಸ್ಥಾನಗಳಲ್ಲಿ ಗೆಲ್ಲುವುದಾಗಿ ಘೋಷಿಸಿದೆ.

ಬೆಂಗಳೂರು : ಮಹಿಳಾ ಸಬಲೀಕರಣ ಹೆಸರಿನಲ್ಲಿ ಅಸ್ವಿತ್ವಕ್ಕೆ ಬಂದಿರುವ ಎಂಇಪಿ ಪಕ್ಷವು, ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನೇ ಅಖಾಡಕ್ಕೆ ಹೂಡಿ 150 ಸ್ಥಾನಗಳಲ್ಲಿ ಗೆಲ್ಲುವುದಾಗಿ ಘೋಷಿಸಿದೆ.

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷದ (ಎಂಇಪಿ) ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೇರಾ ಶೇಖ್‌ ಅವರು, 2019ರ ಲೋಕಸಭಾ ಚುನಾವಣೆ ಪೂರ್ವ ಸಿದ್ಧತೆಯಾಗಿ ವಿಧಾನಸಭಾ ಚುನಾವಣೆಗೆ ಪಕ್ಷವು ಸ್ಪರ್ಧಿಸುತ್ತಿದೆ ಎಂದರು.

ಮಹಿಳೆಯರಿಗೆ ರಾಜಕೀಯವಾಗಿ ಶಕ್ತಿ ತುಂಬುವ ಉದ್ದೇಶದಿಂದಲೇ ಪಕ್ಷ ಸ್ಥಾಪನೆಯಾಗಿದೆ. ಪಕ್ಷದ ಮೂಲ ಧ್ಯೇಯದಂತೆ ರಾಜ್ಯದ ವಿಧಾನಸಭಾ ಚುನಾವಣೆಗೆ ಎಲ್ಲಾ 224 ಕ್ಷೇತ್ರಗಳಲ್ಲಿ ಮಹಿಳೆಯರನ್ನೇ ಅಭ್ಯರ್ಥಿ ಮಾಡಲಿದ್ದೇವೆ. ಈ ಮಹಿಳೆಯರಿಗೆ ಪುರುಷ ಸಮುದಾಯವೂ ಬೆಂಬಲಿಸಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಈಗಾಗಲೇ ಚುನಾವಣಾ ಸಂಬಂಧ ಮೊದಲ ಹಂತದಲ್ಲಿ ರಾಜ್ಯದ 30 ಜಿಲ್ಲೆಗಳ ಪೈಕಿ 13 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪರಿಸ್ಥಿತಿ ಅವಲೋಕಿಸಲಾಗಿದೆ. ಇನ್ನುಳಿದ 17 ಜಿಲ್ಲೆಗಳಿಗೆ ಶೀಘ್ರವೇ ಭೇಟಿ ನೀಡುತ್ತೇನೆ. ಪಕ್ಷದ ಸ್ಥಳೀಯ ಘಟಕಗಳ ಅಭಿಪ್ರಾಯ ಪಡೆದು ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ನಾವು 150 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

ಪಕ್ಷವು ಜಾತಿ-ಧರ್ಮ ಆಧಾರದ ಮೇಲೆ ರಚನೆಯಾಗಿಲ್ಲ. ನಮಗೆ ದಲಿತರು, ಲಿಂಗಾಯತರು, ಮುಸ್ಲಿಂ, ಒಕ್ಕಲಿಗರು ಸೇರಿ ನಾಡಿನ ಎಲ್ಲ ಸಮುದಾಯದ ಜನರ ಬೆಂಬಲವಿದೆ. ನಾಡಿನ ಪ್ರಗತಿಗೆ ಇಚ್ಛಾಶಕ್ತಿ ಹೊಂದಿರುವವರನ್ನು ಗುರುತಿಸಿ ಮನ್ನಣೆ ನೀಡುತ್ತೇವೆ ಎಂದ ಶೇಖ್‌, ತಾವು ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪಧಿಸುವುದಿಲ್ಲ ಎಂದು ಘೋಷಿಸಿದರು.

2019 ಲೋಕಸಭಾ ಚುನಾವಣೆಗೆ ಪಕ್ಷದ ಗುರಿಯಾಗಿದ್ದು, ವಿಧಾನಸಭಾ ಚುನಾವಣೆಯನ್ನು ಪೂರ್ವ ಸಿದ್ಧತಾ ವೇದಿಕೆಯನ್ನು ಮಾಡಿಕೊಂಡಿದ್ದೇವೆ. ನಾವು ಕರ್ನಾಟಕ ಮಾತ್ರವಲ್ಲದೆ ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ರಾಷ್ಟ್ರೀಯ ಮಟ್ಟದಲ್ಲಿ ಸಂಘಟನೆ ಹೊಂದಿದ್ದೇವೆ. ನಮ್ಮ ಪಕ್ಷದ ಜತೆ ಹೊಂದಾಣಿಕೆಗೆ ಹಲವು ಪಕ್ಷಗಳಿಂದ ಪ್ರಸ್ತಾಪ ಬಂದಿದ್ದು, ಈ ಬಗ್ಗೆ ಪಕ್ಷದ ಮುಖಂಡರ ಜತೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಶೇಖ್‌ ಮಾಹಿತಿ ನೀಡಿದರು.

ಚುನಾವಣಾ ದಿನಾಂಕ ಪ್ರಕಟಗೊಂಡ ನಂತರ ಅಭ್ಯರ್ಥಿಗಳ ಪಟ್ಟಿಪ್ರಕಟಿಸುತ್ತೇವೆ. ಪಕ್ಷದ ಪ್ರಣಾಳಿಕೆ ಸಿದ್ಧಗೊಂಡಿದ್ದು, ಇದರಲ್ಲಿ ರಾಜ್ಯದ ನೀರಾವರಿ, ನಿರುದ್ಯೋಗ, ಮೂಲಭೂತ ಸೌಲಭ್ಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪಕ್ಷದ ಚಿಂತನೆಗಳೇನು ಎಂಬುದನ್ನು ಹೇಳುತ್ತೇವೆ ಎಂದರು.

ಪಕ್ಷ ಶಕ್ತಿ ಕುಗ್ಗಿಸುವ ಯತ್ನ: ನೌಹೇರಾ ಆಕ್ರೋಶ

ನಮ್ಮ ಪಕ್ಷದ ಬಲವರ್ಧನೆಯನ್ನು ಕುಗ್ಗಿಸುವ ಯತ್ನವನ್ನು ಕೆಲವರು ನಡೆಸಿದ್ದು, ಈ ಷಡ್ಯಂತ್ರಗಳಿಗೆ ಹೆದರುವುದಿಲ್ಲ ಎಂದು ಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ನೌಹೇರಾ ಶೇಖ್‌ ಗುಡುಗಿದರು. ನಮ್ಮ ಪೂರ್ವನಿಗದಿತ ಯೋಜನೆಯಂತೆ ಅರಮನೆ ಮೈದಾನದಲ್ಲಿ ಪಕ್ಷದ ಸಮಾವೇಶವನ್ನು ಆಯೋಜಿಸುವುದಕ್ಕೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಹೀಗಾಗಿ ಮಾ.23ರ ಬದಲಿಗೆ ಶನಿವಾರ (ಮಾ.10) ಪಕ್ಷದ ಸಭೆ ನಡೆಯಲಿದೆ. ಇಲ್ಲಿ ನಮ್ಮ ಕಾರ್ಯಕರ್ತರ ಶಕ್ತಿ ತೋರಿಸುತ್ತೇವೆ ಎಂದರು.

loader