ಕಳೆದ ತಿಂಗಳ 27ರಂದು ಚುನಾವಣಾ ಆಯೋಗವು ವೇಳಾಪಟ್ಟಿಪ್ರಕಟಿಸುವುದರೊಂದಿಗೆ ರಾಜ್ಯ ವಿಧಾನಸಭಾ ಚುನಾವಣಾ ಚಟುವಟಿಕೆಗಳು ಗರಿಗೆದರಿದ್ದು, ಸೋಮವಾರ ವಿವಿಧ ರಾಜಕೀಯ ಪಕ್ಷಗಳು ಅತೃಪ್ತಿ, ವಲಸೆ, ಆಕ್ರೋಶಗಳ ಬಿಸಿ ಎದುರಿಸಿವೆ. ನಿನ್ನೆ ಇಡೀ ದಿನ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಲ್ಲಿ ರಾಜಕೀಯ ಬಿರುಸಾಗಿತ್ತು. ಅವುಗಳೆಲ್ಲದರ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ಕಳೆದ ತಿಂಗಳ 27ರಂದು ಚುನಾವಣಾ ಆಯೋಗವು ವೇಳಾಪಟ್ಟಿಪ್ರಕಟಿಸುವುದರೊಂದಿಗೆ ರಾಜ್ಯ ವಿಧಾನಸಭಾ ಚುನಾವಣಾ ಚಟುವಟಿಕೆಗಳು ಗರಿಗೆದರಿದ್ದು, ಸೋಮವಾರ ವಿವಿಧ ರಾಜಕೀಯ ಪಕ್ಷಗಳು ಅತೃಪ್ತಿ, ವಲಸೆ, ಆಕ್ರೋಶಗಳ ಬಿಸಿ ಎದುರಿಸಿವೆ. ನಿನ್ನೆ ಇಡೀ ದಿನ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಲ್ಲಿ ರಾಜಕೀಯ ಬಿರುಸಾಗಿತ್ತು. ಅವುಗಳೆಲ್ಲದರ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ಅಂಬರೀಶ್‌ ಟಿಕೆಟ್‌, ಸ್ಪರ್ಧೆ ಬಗ್ಗೆ ಗೊಂದಲ

ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ ಶಾಸಕ, ನಟ ಅಂಬರೀಶ್‌ ಈ ಬಾರಿ ಕಣಕ್ಕಿಳಿಯುವ ಬಗ್ಗೆ ಗೊಂದಲಗಳೆದ್ದಿವೆ. ಮುಂದಿನ ನಡೆ ಏನೆಂದು ತಿಳಿದುಕೊಳ್ಳಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬರೀಶ್‌ರನ್ನು ಭೇಟಿಯಾಗುತ್ತಿದ್ದಾರೆ. ಬಯಸಿದರೆ ಅಂಬಿಗೆ, ಇಲ್ಲವಾದರೆ ಪತ್ನಿ ಸುಮಲತಾರನ್ನು ಕಣಕ್ಕಿಳಿಸುವ ಚಿಂತನೆಯಿದೆ.

ಉಡುಪಿಯಲ್ಲಿ ಶಿರೂರು ಶ್ರೀ ಸ್ಪರ್ಧೆ ಖಚಿತ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯಿಂದ ಕಣಕ್ಕಿಳಿಯುವುದಾಗಿ ಪದೇ ಪದೇ ಹೇಳುತ್ತಿರುವ ಶಿರೂರು ಮಠಾಧೀಶ ಲಕ್ಷ್ಮೇವರ ತೀರ್ಥ ಸ್ವಾಮೀಜಿ, ಇದೇ ತಿಂಗಳ 8ರಿಂದ ಪ್ರಚಾರ ಆರಂಭಿಸುವುದಾಗಿ ತಿಳಿಸಿದ್ದಾರೆ. ಟಿಕೆಟ್‌ ಸಿಕ್ಕರೆ ಬಿಜೆಪಿಯಿಂದ, ಇಲ್ಲದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಮಲ್ಲಿಕಾರ್ಜುನ ಖೂಬಾ ವಿರುದ್ಧ ಆಕ್ರೋಶ

ಬಿಜೆಪಿಗೆ ಸೇರಲು ಸಜ್ಜಾಗಿರುವ ಬೀದರ್‌ ಜಿಲ್ಲೆ ಬಸವಕಲ್ಯಾಣ ಕ್ಷೇತ್ರದ ಜೆಡಿಎಸ್‌ ಶಾಸಕ ಮಲ್ಲಿಕಾರ್ಜುನ ಖೂಬಾಗೆ ಬಿಜೆಪಿ ಕಾರ್ಯಕರ್ತರಿಂದ ಬಿಸಿ ಎದುರಾಗಿದೆ. ಖೂಬಾ ಪಕ್ಷಾಂತರ ವಿರೋಧಿಸಿ ಬಸವಕಲ್ಯಾಣದಲ್ಲಿ ಪ್ರತಿಭಟನೆ ನಡೆದಿದ್ದು, ಬಿಜೆಪಿ ಕಾರ್ಯಕರ್ತರೊಬ್ಬರು ಪೆಟ್ರೋಲ್‌ ಸುರಿದುಕೊಂಡ ಘಟನೆಯೂ ಸಂಭವಿಸಿದೆ.

ನಾಡಿದ್ದು ಬಿಜೆಪಿ ಸೇರ್ತಾರಂತೆ ಯತ್ನಾಳ್‌

ಭಾರೀ ಗೊಂದಲದ ಬಳಿಕ ವಿಜಯಪುರದ ಪ್ರಭಾವಿ ರಾಜಕಾರಣಿ, ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಬಿಜೆಪಿ ಸೇರುವುದು ಕೊನೆಗೂ ಖಚಿತವಾಗಿದೆ. ಇದೇ ತಿಂಗಳ 4ರಂದು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದಾಗಿ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಕಾಂಗ್ರೆಸ್‌ಗೆ ಕಾದಿದೆ ಶಾಕ್‌: ಗುತ್ತೇದಾರ್‌

ಬಿಜೆಪಿ ಸೇರುವುದಾಗಿ ಖಚಿತ ಮಾತುಗಳಲ್ಲಿ ಹೇಳಿರುವ ಕಲಬುರಗಿ ಜಿಲ್ಲೆಯ ಪ್ರಭಾವಿ ರಾಜಕಾರಣಿ, ಕಾಂಗ್ರೆಸ್‌ ಶಾಸಕ ಮಾಲಿಕಯ್ಯ ಗುತ್ತೇದಾರ್‌ ‘ಶಾಕ್‌’ ನೀಡುವ ಭರದಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರಿಗೆ ಯಾವುದೇ ಕಿಮ್ಮತ್ತಿಲ್ಲ, ಕೆಲವೇ ದಿನದಲ್ಲಿ ಆ ಪಕ್ಷಕ್ಕೆ ಶಾಕ್‌ ನೀಡುತ್ತೇನೆ ಎಂದು ಗುಡುಗಿದ್ದಾರೆ.

ಹಾಲಪ್ಪ ಅತೃಪ್ತಿ ಶಮನಕ್ಕೆ ಬಿಎಸ್‌ವೈ ಯತ್ನ

ಶಿವಮೊಗ್ಗದ ಸೊರಬದಲ್ಲಿ ಬೇಳೂರು ಗೋಪಾಲಕೃಷ್ಣ ಅವರಿಗೆ ಬಿಜೆಪಿ ಟಿಕೆಟ್‌ ಸಿಗುವ ಸಾಧ್ಯತೆಯಿಂದ ಅಸಮಾಧಾನಗೊಂಡಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರನ್ನು ಸಮಾಧಾನಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪ್ರಯತ್ನ ನಡೆಸಿದ್ದಾರೆ. ಹಾಲಪ್ಪ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಜೆಡಿಎಸ್‌ ಪರ ಪ್ರಚಾರ: ಸುದೀಪ್‌ಗೆ ಗಾಳ

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ನಿವಾಸಕ್ಕೆ ಖ್ಯಾತ ನಟ ಕಿಚ್ಚ ಸುದೀಪ್‌ ಭೇಟಿ ನೀಡಿ ಭೋಜನ ಮಾಡಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಜೆಡಿಎಸ್‌ ಸೇರುವ ಬಗ್ಗೆ ಗುಸುಗುಸು ಹಬ್ಬಿತ್ತು. ಆದರೆ, 8ರಿಂದ 10 ಕ್ಷೇತ್ರಗಳಲ್ಲಿ ಅವರು ಪ್ರಚಾರ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಎಂ.ವೈ.ಪಾಟೀಲ್‌ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ

ಮಾಲಿಕಯ್ಯ ಗುತ್ತೇದಾರ್‌ ಕಾಂಗ್ರೆಸ್‌ನಿಂದ ತಮ್ಮ ಪಕ್ಷಕ್ಕೆ ವಲಸೆ ಬರುವ ಬಗ್ಗೆ ಅತೃಪ್ತರಾಗಿದ್ದ ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಂ.ವೈ.ಪಾಟೀಲ್‌, ಪಕ್ಷ ತೊರೆದಿದ್ದಾರೆ. ಸೋಮವಾರ ಕಾಂಗ್ರೆಸ್‌ ಸೇರಿದ್ದಾರೆ. ಅಲ್ಲಿಗೆ ಬಿಜೆಪಿ-ಕಾಂಗ್ರೆಸ್‌ ಅಭ್ಯರ್ಥಿಗಳು ಅದಲು-ಬದಲಾದಂತಾಗಿದೆ.

ಅಲ್ತಾಫ್‌ ಜೆಡಿಎಸ್‌ಗೆ: ಜಮೀರ್‌ಗೆ ಸವಾಲು

ಜಮೀರ್‌ ಅಹ್ಮದ್‌ ಖಾನ್‌ ಕಾಂಗ್ರೆಸ್‌ಗೆ ವಲಸೆ ಹೋದ ನಂತರ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರಕ್ಕೆ ಜೆಡಿಎಸ್‌ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಕಾಂಗ್ರೆಸ್‌ ನಾಯಕ ಅಲ್ತಾಫ್‌ ಖಾನ್‌ರನ್ನು ಜೆಡಿಎಸ್‌ ಸೆಳೆದುಕೊಂಡಿದೆ. ಸೋಮವಾರ ಅಲ್ತಾಫ್‌ ಹಾಗೂ ಜಮೀರ್‌ ಅವರುಗಳು ಸವಾಲು-ಪ್ರತಿಸವಾಲುಗಳ ‘ಹವಾ’ ಎಬ್ಬಿಸಿದ್ದಾರೆ.

ಸಿದ್ದು ಕಣಕ್ಕಿಳಿಯಲು ಏ.23ರ ಮುಹೂರ್ತ

ಎಲ್ಲಿಂದ ಸ್ಪರ್ಧೆ ಎಂಬ ಬಗ್ಗೆ ಕಳೆದೆರಡು ತಿಂಗಳಿನಿಂದ ಇದ್ದ ಗೊಂದಲಕ್ಕೆ ಸಂಪೂರ್ಣವಾಗಿ ತೆರೆ ಎಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮತ್ತೆ ಸ್ಪಷ್ಟಪಡಿಸಿದ್ದಾರೆ. ಇದೇ ತಿಂಗಳ 23ರಂದು ನಾಮಪತ್ರ ಸಲ್ಲಿಸುವುದಾಗಿ ಸಿದ್ದರಾಮಯ್ಯ ಸೋಮವಾರ ಖಚಿತಪಡಿಸಿದ್ದಾರೆ.