ಯಾವುದೇ ಕಾರಣಕ್ಕೂ ಸಾರ್ವಜನಿಕರ ಹಣದಲ್ಲಿ ನಡೆಯುವ ಕಲಾಪ ವ್ಯರ್ಥವಾಗಬಾರದು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಇದಕ್ಕಾಗಿ ರಾಮಚಂದ್ರೇಗೌಡ ಅಧ್ಯಕ್ಷತೆಯಲ್ಲಿ ಜಂಟಿ ಸದನ ಸಮಿತಿ ರಚಿಸಲಾಗಿತ್ತು. ಸಮಿತಿಯ ಮಧ್ಯಂತರ ವರದಿಯನ್ನು ವಿಧಾನಸಭೆ ಅಂಗೀಕರಿಸಿದೆ.- ಕೆ.ಬಿ.ಕೋಳಿವಾಡ, ಸ್ಪೀಕರ್

ಸುವರ್ಣವಿಧಾನಸೌಧ, ಬೆಳಗಾವಿ: ವಿಧಾನಮಂಡಲ ಕಲಾಪದಲ್ಲಿ ಭಾಗವಹಿಸುವ ಶಾಸಕ ರು ಇನ್ನು ದಿನಕ್ಕೆರಡು ಬಾರಿ ರುಜು ಮಾಡಬೇಕು. ಬೇಕಾಬಿಟ್ಟಿಸದನದ ಬಾವಿಗೆ ನುಗ್ಗಿ ಕಲಾಪ ಹಾಳು ಮಾಡುವ ವರ್ತನೆ ಕೈಬಿ​ಡ​ಬೇಕು. ಶಾಸಕರು ಕೇಳುವ ಪ್ರಶ್ನೆ ಗಳಿಗೆ ಆಯಾ ಇಲಾಖೆಗಳು ಉತ್ತರ ನೀಡಬೇಕು.

ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮಂಡಿಸಿದ ಮಂಗಳವಾರ ‘ಕರ್ನಾಟಕ ವಿಧಾನಸಭೆಯ ಕಾರ್ಯ ವಿಧಾನ, ಕಲಾಪ ನಡವಳಿಕೆ ತಿದ್ದುಪಡಿ'ಯ ಜಂಟಿ ಸಮಿತಿ ಮಧ್ಯಂತರ ವರದಿಯಲ್ಲಿ ಇಂಥ ಅನೇಕ ಅಂಶಗಳು ಸೇರಿವೆ. ಇದೇ ಮೊದಲ ಬಾರಿಗೆ ವಿಧಾನಸಭೆ ಕಾರ್ಯ ವಿಧಾನ ಮತ್ತು ಕಲಾಪಗಳಿಗೆ ಕಾನೂನು ಬದ್ಧ ನಿಯಮ ರೂಪಿಸಲಾಗಿದೆ. ಇದರಿಂದ ಕಲಾಪ ಯಾವುದೇ ಭಂಗ ವಿಲ್ಲದೆ ಸುಸೂತ್ರವಾಗಿ ನಡೆದು, ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಈ ಹಿಂದೆ ದಿನಕ್ಕೆರಡು ಬಾರಿ ರುಜು ಮಾಡುವ ವಿಚಾರದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಶಾಸಕರು ಈಗ ವಿಧಾನಸಭೆಯಲ್ಲಿ ಈ ತಿದ್ದುಪಡಿ ವಿಧೇಯಕ ಮಂಡನೆ ಯಾದಾಗ ಮೌನಸಮ್ಮತಿ ಸೂಚಿಸಿದರು. ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್‌ ಕೂಡ ತುಸು ಬದಲಾವಣೆಗೆ ಸಲಹೆ ನೀಡಿದರೇ ವಿನಃ ಯಾವುದೇ ಗಂಭೀರ ಆಕ್ಷೇಪ ಎತ್ತಲಿಲ್ಲ. ಹಾಗಾಗಿ ಈ ವಿಧೇಯಕ ಅಪಸ್ವರವಿಲ್ಲದೆ ಸದನದ ಒಪ್ಪಿಗೆ ಪಡೆಯಿತು. ಅಂದ ಹಾಗೆ, ಬೇಕೆನಿಸುವ ಮಾಹಿತಿ ಪಡೆಯಲು ಶಾಸಕರು ಇನ್ನು ಮುಂದೆ ವರ್ಷದ 365 ದಿನವೂ ಪ್ರಶ್ನೆ ಕೇಳಬಹುದು.

ಇಂದಿ​ನಿಂದಲೇ ಸುಗಮ ಕಲಾಪ: ಬೆಳಗಾವಿ ಅಧಿವೇಶನದ ಕಲಾಪಗಳು ಈಗಾಗಲೇ ಸುಗಮವಾಗಿ ಸಾಗುತ್ತಿದ್ದು ಬುಧವಾರದಿಂದಲೇ ಕಲಾಪಗಳು ಇನ್ನಷ್ಟುಸುಗಮವಾಗಲಿವೆ. ಸದನ ಕಲಾಪ ನಿಯಮಾವಳಿಗಳಿಗೆ ಕೆಲವೊಂದು ತಿದ್ದುಪಡಿಗಳು ಅಂಗೀಕಾರಗೊಂಡಿದ್ದು ಬುಧವಾರದಿಂದಲೇ ಈ ನಿಯಮಾವಳಿ ಅನುಷ್ಠಾನಕ್ಕೆ ಬರಲಿದೆ. ಹೀಗಾಗಿ ಗೊತ್ತುವಳಿ ಸೂಚನೆಗಳನ್ನು ಮಧ್ಯಾಹ್ನವಷ್ಟೇ ಮಂಡಿಸಬಹುದು.

ತಿದ್ದುಪಡಿಯಲ್ಲಿರುವ ಪ್ರಮುಖ ಅಂಶಗಳೇನು?
1) ಉಭಯ ಸದನಗಳಿಗೆ ಬೆಂಗಳೂರು ವಿಧಾನಸೌಧ, ಬೆಳಗಾವಿ ಸುವರ್ಣಸೌಧ ಅಧಿಕೃತ ನಿವಾಸಗಳು
2) ಒಟ್ಟು ಸದಸ್ಯರ 10ನೇ ಒಂದು ಭಾಗದಷ್ಟು ಸದಸ್ಯರು ಕೋರಂ ಇದ್ದರೆ ಮಾತ್ರ ಕಲಾಪಕ್ಕೆ ಅವಕಾಶ
3) ಸದನ ಕಡ್ಡಾಯವಾಗಿ ಮತ್ತೆ ಆರಂಭವಾಗುವ ಮುನ್ನ ಆ ಮಧ್ಯದ ಅವಧಿಯಲ್ಲಿ ಘಟಿಸುವ ಜನಹಿತಾಸಕ್ತಿಯ ಪ್ರಮುಖ ಅಂಶಗಳ ಬಗ್ಗೆ ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ.
4) ಕಲಾಪವನ್ನು ಬೆಳಗ್ಗೆ 10:30ರಿಂದ ಮಧ್ಯಾಹ್ನ 2ಗಂಟೆ ಮತ್ತು ಮಧ್ಯಾಹ್ನ 3ರಿಂದ 6ಗಂಟೆಯವರೆಗೆ ಎಂದು 2 ಅವಧಿಯಾಗಿ ವಿಂಗಡಿಸಿದ್ದು, ಈ ಎರಡೂ ಅವಧಿ ಶಾಸಕರು ಕಡ್ಡಾಯವಾಗಿ ಹಾಜರಿ ಪುಸ್ತಕದಲ್ಲಿ ರುಜು ಮಾಡುವುದು ಕಡ್ಡಾಯ.
5) ಸದನದಲ್ಲಿ ಕೇಳಬಯಸುವ ಪ್ರಶ್ನೆಗಳ ಕಾಲಾವಧಿಯನ್ನು 15 ದಿನಗಳಿಗೆ ಬದಲಾಗಿ ವರ್ಷದ 365 ದಿನಗಳಿಗೆ ವಿಸ್ತರಣೆ. ಅಧಿವೇಶನ ಮುಗಿದರೂ ಶಾಸಕರ ಎಲ್ಲ ಪ್ರಶ್ನೆಗಳಿಗೆ ಆಯಾ ಇಲಾಖೆಯಿಂದ ಕಡ್ಡಾಯವಾಗಿ 15 ದಿನಗಳಲ್ಲಿ ಉತ್ತರ ಕೊಡಿಸಬೇಕು.
6) ಸರ್ಕಾರದ ವೈಫಲ್ಯ, ಅಧಿಕಾರಿಗಳೇ ಕಾನೂನು ಉಲ್ಲಂಘಿಸಿದ ಸಂದರ್ಭದಲ್ಲಿ ನಿಯಮ 60ರ ಅಡಿ ನಿಲುವಳಿ ಮಂಡನೆಗೆ ಅವಕಾಶ. ಬೇಕಾಬಿಟ್ಟಿ ನಿಲುವಳಿ ಮಂಡನೆಗೆ ಅವಕಾಶವಿಲ್ಲ.

(ಕನ್ನಡಪ್ರಭ ವಾರ್ತೆ)