ಬಾಗಲಕೋಟೆ :  ಸಚಿವ ಸಂಪುಟ ವಿಸ್ತರಣೆ ಬಗ್ಗೆ ಡಿ.5ರಂದು ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಳಿಕ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಇದು ಅವರ ಭ್ರಮೆ. ಈ ಸರ್ಕಾರ ಸುಭದ್ರವಾಗಿದೆ. 5 ವರ್ಷದ ತನ್ನ ಆಡಳಿತಾವಧಿಯನ್ನು ಪೂರ್ಣಗೊಳಿಸುತ್ತದೆ. ಇದರಲ್ಲಿ ಯಾವುದೇ ಸಂಶಯಬೇಡ ಎಂದರು.

ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರ ಹಿತ ಕಡೆಗಣಿಸಿಲ್ಲ. ನಮ್ಮ ಪಕ್ಷದ ಶಾಸಕರು ಮಂತ್ರಿ ಮಂಡಳ ವಿಸ್ತರಣೆಗೆ ಅವಸರವನ್ನೂ ಮಾಡಿಲ್ಲ. ನನ್ನ ವಿರುದ್ಧ ಯಾರೂ ಹೈಕಮಾಂಡ್‌ಗೆ ದೂರನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂದಿರಾ ಕ್ಯಾಂಟೀನ್‌:

ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಅನುದಾನ ಕೊರತೆಯಿಲ್ಲ. ಇದೆಲ್ಲ ಬಿಜೆಪಿಯ ರಾಜಕೀಯವಷ್ಟೇ ಎಂದ ಅವರು, ಕಬ್ಬು ಬೆಳೆಗಾರರಿಗೆ ಕಾರ್ಖಾನೆಯವರು ಕೊಡಬೇಕಿರುವ ಬಾಕಿ ಹಣವನ್ನು ಶೀಘ್ರದಲ್ಲೇ ಕೊಡಿಸಲಾಗುವುದು. ರೈತರ ಹಿತ ಕಾಯುತ್ತೇವೆ. ಈ ಬಗ್ಗೆ ರೈತರಲ್ಲಿ ಯಾವುದೇ ಆತಂಕ ಬೇಡ. ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದಂತೆ ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸಲಾಗುವುದು ಎಂದು ಹೇಳಿದರು.

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ವೇಳೆ ಲಕ್ಷಕ್ಕೂ ಅಧಿಕ ಮಂದಿಯನ್ನು ಸೇರಿಸಿ ಪ್ರತಿಭಟಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಅವರು ಒಂದು ಲಕ್ಷ ಜನ ಸೇರಿಸಿದರೆ ನಾವು ಎರಡು ಲಕ್ಷ ಜನ ಸೇರಿಸುತ್ತೇವೆ. ರೈತರ ಬಗ್ಗೆ ಅವರಿಗಷ್ಟೆಕಾಳಜಿ ಇದೆಯೇ, ನಮ್ಮ ಪರವಾಗಿಯೂ ರೈತರಿದ್ದಾರೆ. ರಾಜಕೀಯವಾಗಿ ಮಾತನಾಡುವ ಮಾತುಗಳಿಗೆ ಬೆಲೆ ಇಲ್ಲ ಎಂದರು.

ಚುನಾವಣೆ ಬಂದಾಗ ರಾಮ ಜಪ:

ರಾಮಮಂದಿರಕ್ಕಾಗಿ ನಡೆಯುತ್ತಿರುವ ಜನಾಗ್ರಹ ಸಭೆ ಕುರಿತು ಆಕ್ಷೇಪಿಸಿದ ಸಿದ್ದರಾಮಯ್ಯ, ಬಿಜೆಪಿಯವರಿಗೆ ಚುನಾವಣೆ ಬಂದಾಗ ಮಾತ್ರ ರಾಮ ನೆನಪಾಗುತ್ತಾನೆ. ಕಳೆದ ನಾಲ್ಕುವರೆ ವರ್ಷದಿಂದ ರಾಮ ಮಂದಿರವೇಕೆ ನೆನಪಾಗಲಿಲ್ಲ, ಲೋಕಸಭೆ ಚುನಾವಣೆ ಹತ್ತಿರವಿರುವುದರಿಂದ ಬಿಜೆಪಿಯವರು ನಡೆಸುತ್ತಿರುವ ಬಹುದೊಡ್ಡ ನಾಟಕವಿದು ಎಂದು ಲೇವಡಿ ಮಾಡಿದರು.

ಮೈಸೂರಲ್ಲಿ ವಿಷ್ಣು ಸ್ಮಾರಕ?:

ಭಾರತಿ ವಿಷ್ಣುವರ್ಧನ್‌ ಸಹ ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣದ ಬಗ್ಗೆ ಒಲವು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿಯೇ ನಟ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಚರ್ಚಿಸುತ್ತೇನೆ ಎಂದರು.