ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಅಪರಾಧಿ ಕರೀಂಲಾಲ್ ತೆಲಗಿ ಬಹುಅಂಗಾಂಗ ವೈಫಲ್ಯದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬೆಂಗಳೂರು (ಅ.26): ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಅಪರಾಧಿ ಕರೀಂಲಾಲ್ ತೆಲಗಿ ಬಹುಅಂಗಾಂಗ ವೈಫಲ್ಯದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೆಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ತೆಲಗಿ ಬಳಲುತ್ತಿದ್ದರು. ಅ. 16 ರಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೆಂಟಿಲೇಟರ್' ನಲ್ಲಿಟ್ಟು ತೆಲಗಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ತೆಲಗಿ ನಿಧನರಾಗಿದ್ದಾರೆ.
ನಕಲಿ ಛಾಪಾ ಕಾಗದ ಹಗರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಬಹುಕೋಟಿ ರುಪಾಯಿ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಇವರಾಗಿದ್ದರು. ಪ್ರತ್ಯೇಕ ಪ್ರಕರಣಗಳಲ್ಲಿ ತೆಲಗಿಗೆ 42 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಪ್ರಮುಖ ರಾಜಕಾರಣಿಗಳು ಕೂಡಾ ಈ ಹಗರಣದ ಹಿಂದಿದ್ದರು. ಕಾಂಗ್ರೆಸ್ ಮುಖಂಡ ರೋಷನ್ ಬೇಗ್ ಹೆಸರು ಕೇಳಿ ಬಂದಿತ್ತು. ಅವರ ಸೋದರ ರೇಹಾನ್ ಬೇಗ್ ಆರೋಪಿಯಾಗಿದ್ದರು. ನಂತರ ಪ್ರಕರಣದಿಂದ ಖುಲಾಸೆಯಾಗಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಕೇಳಿಬಂದಿತ್ತು.
2001ರಲ್ಲಿ ಬೆಳಕಿಗೆ ಬಂದಿದ್ದ ಈ ಪ್ರಕರಣಗಳ ತನಿಖೆಯನ್ನು 2004ರಲ್ಲಿ ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ವಿಶೇಷ ನ್ಯಾಯಾಲಯ 2009–10ರಲ್ಲಿ ವಿಚಾರಣೆ ಪೂರೈಸಿತ್ತು. ವಿವಿಧ ಆರೋಪಗಳಲ್ಲಿ ವಿಚಾರಣಾ ಕೋರ್ಟ್ ತೆಲಗಿಗೆ ಶಿಕ್ಷೆ ವಿಧಿಸಿತ್ತು. ಬಹುಕೋಟಿ ಹಗರಣದ ಅಪರಾಧದ ಹಿನ್ನೆಲೆ ತೆಲಗಿ ಈಗಾಗಲೇ 16 ವರ್ಷದಿಂದ ಜೈಲಿನಲ್ಲಿದ್ದಾನೆ. ತೆಲಗಿ ಮತ್ತು ಆತನ ಸಹಚರರ ವಿರುದ್ಧದ ಅನೇಕ ಪ್ರಕರಣಗಳು ದೆಹಲಿ, ಅಹಮದಾಬಾದ್, ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಇನ್ನೂ ವಿಚಾರಣೆಯ ಹಂತದಲ್ಲಿವೆ.
