ಮುಶೋಖ್(ಜು.08): ಅದು ಕಾರ್ಗಿಲ್ ಯುದ್ಧದ ಅಂತ್ಯದ ಸಮಯ. ಭೂಮಿ, ಆಕಾಶದಲ್ಲಿ ಪಾಕ್ ಸೈನಿಕರನ್ನು ಅಟ್ಟಾಡಿಸಿ ಹೊಡೆಯುತ್ತಿದ್ದ ಭಾರತೀಯ ಭೂಸೇನೆ ಮತ್ತು ವಾಯುಸೇನೆ, ಭಾರತ ನೆಲದಿಂದ ಪಾಕಿಗಳನ್ನು ಒದ್ದೋಡಿಸಿದರು.

ದೇಶ ಇದೀಗ ಕಾರ್ಗಿಲ್ ವಿಜಯೋತ್ಸವದ 20ನೇ ವರ್ಷಾಚರಣೆಯನ್ನು ಆಚರಿಸುತ್ತಿದೆ. ದೇಶಕ್ಕಾಗಿ ಪ್ರಾಣತೆತ್ತ ನಮ್ಮ ವೀರ ಯೋಧರನ್ನು ನೆನೆಯಲು, ಆ ಅಭೂತಪೂರ್ವ ಜಯದ ಸಂತಸ ಹಂಚಿಕೊಳ್ಳಲು  ವೇದಿಕೆ ಸಿದ್ಧಗೊಂಡಿದೆ.

ಈ ಮಧ್ಯೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕ್ ಸೇನಾ ತುಕಡಿಯೊಂದು ಬಿಟ್ಟು ಹೋಗಿದ್ದ ಸೇನಾ ವಸ್ತುಗಳು ಇದೀಗ ದ್ರಾಸ್ ಸೆಕ್ಟರ್’ನಲ್ಲಿ ದೊರೆತಿದೆ.

ಯುದ್ಧದ ಸಂದರ್ಭದಲ್ಲಿ ತಯಾರಿಸಲಾಗಿದ್ದ ತಾತ್ಕಾಲಿಕ ಬಂಕರ್, ಜೀವಂತ ಮದ್ದುಗುಂಡುಗಳು ಹಾಗೂ ಆಹಾರ ಸಾಮಾಗ್ರಿಗಳು ಪಾಯಿಂಟ್ 4355 ಬಳಿ ದೊರೆತಿದೆ ಎಂದು ಸೇನೆ ತಿಳಿಸಿದೆ.

ಭಾರತೀಯ ಸೇನೆ ಪಾಯಿಂಟ್ 4355 ನತ್ತ ಮುನ್ನುಗ್ಗಿದ್ದಾಗ, ಈ ಬಂಕರ್’ನಲ್ಲಿದ್ದ ಎಲ್ಲ ವಸ್ತುಗಳನ್ನು ಬಿಟ್ಟು ಪಾಕ್ ಸೈನಿಕರು ಓಡಿ ಹೋಗಿದ್ದರು ಎನ್ನಲಾಗಿದೆ.