ಲಕ್ನೋ(ನ. 21): ನಿನ್ನೆ ಭಾನುವಾರದ ನಸುಕಿನ ಜಾವ ಕಾನ್ಪುರದ ಪುಖರಾನ್ ಬಳಿ ಸಂಭವಿಸಿದ ಇಂಧೋರ್‌-ಪಾಟ್ನಾ ಎಕ್ಸ್‌'ಪ್ರೆಸ್‌ ರೈಲು ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ಏರುತ್ತಲೇ ಇದೆ.. ಇಲ್ಲಿಯವರೆಗೆ ಸುಮಾರು 142 ಪ್ರಯಾಣಿಕರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾಕಷ್ಟು ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ಇದೇ ವೇಳೆ, ರೈಲ್ವೇ ಅಧಿಕಾರಿಗಳು ಮೃತರ ಹಾಗೂ ಗಾಯಾಳುಗಳ ಹೆಸರುಗಳನ್ನೂ ಬಿಡುಗಡೆ ಮಾಡಿದ್ದಾರೆ.

ಕೋಲ್ಡ್ ಕಟ್ಟರ್ ಬಳಸಿ ರಕ್ಷಣಾ ಕಾರ್ಯ:
ಬೋಗಿಗಳನ್ನು ಕತ್ತರಿಸಲು ಗ್ಯಾಸ್‌ ಕಟ್ಟರ್‌'ಗಳನ್ನು ಬಳಸುವುದರಿಂದ ಬೋಗಿ ಬಿಸಿಯಾಗುತ್ತದೆ ಅನ್ನೋ ಕಾರಣಕ್ಕೆ ಕೋಲ್ಡ್‌ ಕಟ್ಟರ್‌ ಬಳಕೆ ಮಾಡಿಕೊಳ್ಳಲಾಗಿದೆ. ಕೋಲ್ಡ್‌ ಕಟ್ಟರ್‌ ಮೂಲಕ ಬೋಗಿಗಳನ್ನು ಕತ್ತರಿಸಿ ನಜ್ಜುಗುಜ್ಜಾದ ಬೋಗಿಗಳ ಒಳಗೆ ಸಿಲುಕಿದವರನ್ನ ರಕ್ಷಿಸಲಾಯಿತು.

ಅನಧಿಕೃತ ಪ್ರಯಾಣಿಕರೇ ಅಧಿಕ:
ಪಾಟ್ನಾದಿಂದ ಇಂಧೋರ್ ಸಂಪರ್ಕಿಸುವ ಏಕೈಕ ರೈಲು ಇದಾಗಿದ್ದು,  ಒಟ್ಟು 1200 ಪ್ರಯಾಣಿಕರಿದ್ದರು. ಇಷ್ಟು ಪ್ರಯಾಣಿಕರಲ್ಲಿ ಕೇವಲ 410 ಜನರು ಮಾತ್ರ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದರು, ಅವ್ರಲ್ಲಿ ಶೇಕಡಾ 30 ರಷ್ಟು ಜನ ಮಾತ್ರ ಐಆರ್'​ಸಿಟಿಸಿ ಆನ್'ಲೈನ್ ಟಿಕೆಟ್ ಮೂಲಕ ರೈಲ್ವೆ ಇನ್ಷೂರೆನ್ಸ್ ಹೊಂದಿದ್ದರೆಂಬುದು ಗೊತ್ತಾಗಿದೆ.

ಈಗಾಗಲೇ ಮೃತರ ಕುಟುಂಬ ಹಾಗೂ ಗಾಯಾಳುಗಳಿಗೆ ಸರ್ಕಾರಗಳು ಪರಿಹಾರ ಘೋಷಿಸಿವೆ. ಅಲ್ಲದೇ ಶವಗಳನ್ನ ಕುಟುಂಬಸ್ಥರಿಗೆ ಹಸ್ತಾಂತರಿಸುವ ಕೆಲಸ ಕೂಡ ನಡೆಯುತ್ತಿದೆ. ಮೃತರ ಕುಟುಂಬಕ್ಕೆ ಅನುಕೂಲವಾಗಲಿ ಎಂದು ಹೆಲ್ಪ್'ಲೈನ್ ಕೂಡ ಓಪನ್ ಮಾಡಲಾಗಿದೆ.

ನಿನ್ನೆ ಸಂಭವಿಸಿದ ಈ ದುರಂತಕ್ಕೆ ಹಳಿ ಬಿರುಕು ಬಿಟ್ಟಿದ್ದು ಕಾರಣವಿರಬಹುದೆಂಬ ಶಂಕೆ ಸದ್ಯಕ್ಕಿದೆ. ಆದರೆ, ರೈಲ್ವೆ ಸಚಿವರ ಈ ದುರ್ಘಟನೆಯ ತನಿಖೆಗೆ ಆದೇಶಿಸಿದ್ದು, ನಿಜವಾದ ಕಾರಣವೇನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

- ಧಾನ್ಯಶ್ರೀ, ನ್ಯೂಸ್ ಡೆಸ್ಕ್ ಸುವರ್ಣ ನ್ಯೂಸ್