ಕಣ್ಣೂರು[ಡಿ.10]: ಕೇರಳದ ಕಣ್ಣೂರಿನಲ್ಲಿ ನಿರ್ಮಾಣಗೊಂಡಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾನುವಾರ ಲೋಕಾರ್ಪಣೆಗೊಂಡಿತು. ಕೇಂದ್ರ ವಿಮಾನಯಾನ ಖಾತೆ ಸಚಿವ ಸುರೇಶ್‌ ಪ್ರಭು ಹಾಗೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, 186 ಪ್ರಯಾಣಿಕರನ್ನು ಹೊತ್ತು ದುಬೈಗೆ ಹೊರಟ ‘ಏರ್‌ಇಂಡಿಯಾ ಎಕ್ಸ್‌ಪ್ರೆಸ್‌’ ವಿಮಾನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಈ ವಿಮಾನ ನಿಲ್ದಾಣ ಉದ್ಘಾಟನೆಯೊಂದಿಗೆ 4 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದ ದೇಶದ ಏಕೈಕ ರಾಜ್ಯ ಎಂಬ ಹಿರಿಮೆಗೆ ಕೇರಳ ಪಾತ್ರವಾಗಿದೆ. ತಿರುವನಂತಪುರ, ಕೊಚ್ಚಿ ಹಾಗೂ ಕೋಳಿಕೋಡ್‌ನಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ.

ಕೊಡಗಿಗೆ ಸಮೀಪ: ಕಣ್ಣೂರು ನಗರದಿಂದ 16 ಕಿ.ಮೀ. ದೂರದಲ್ಲಿ ಈ ವಿಮಾನ ನಿಲ್ದಾಣ, ಕರ್ನಾಟಕದ ಗಡಿ ಜಿಲ್ಲೆ ಕೊಡಗಿಗೆ ಅತ್ಯಂತ ಸಮೀಪದಲ್ಲಿದೆ. ಕೊಡಗು ಜಿಲ್ಲೆಯ ವಿರಾಜಪೇಟೆಯಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಕೇವಲ 58 ಕಿ.ಮೀ ದೂರವಿದೆ, ಜಿಲ್ಲಾ ಕೇಂದ್ರವಾದ ಮಡಿಕೇರಿ 90 ಕಿ.ಮೀ ದೂರದಲ್ಲಿದೆ. ಹೀಗಾಗಿ ಹೊಸ ವಿಮಾನ ನಿಲ್ದಾಣ, ಕೇರಳದ ಜೊತೆಜೊತೆಗೇ ಕರ್ನಾಟಕದ ಕೊಡಗಿನ ಪ್ರವಾಸೋದ್ಯಮದ ಅಭಿವೃದ್ಧಿಗೂ ನೆರವಾಗಲಿದೆ ಎನ್ನಲಾಗಿದೆ.

ಕರ್ನಾಟಕದ ಸೊಬಗು: ವಿಮಾನ ನಿಲ್ದಾಣ ಉದ್ಘಾಟನೆ ವೇಳೆ, ನಿಲ್ದಾಣದ ಆವರಣವನ್ನು ದೊಡ್ಡ ದೊಡ್ಡ ಚಿತ್ರಗಳಿಂದ ಅಲಂಕರಿಸಲಾಗಿತ್ತು. ಈ ಚಿತ್ರಗಳಲ್ಲಿ ಕೇರಳದ ಸಂಸ್ಕೃತಿಯ ಅನಾವರಣದ ಜೊತೆಜೊತೆಗೆ ನೆರೆಯ ಕರ್ನಾಟಕದ ಸಂಸ್ಕೃತಿಯ ಅನಾವರಣಕ್ಕೂ ವೇದಿಕೆ ಕಲ್ಪಿಸಲಾಗಿತ್ತು. ಕರ್ನಾಟಕದ ಪ್ರಸಿದ್ಧ ಯಕ್ಷಗಾನ ಕಲೆಯನ್ನು ಪ್ರದರ್ಶಿಸುವ ಪೇಂಟಿಂಗ್‌ಗಳನ್ನು ವಿಮಾನ ನಿಲ್ದಾಣದಲ್ಲಿ ಪ್ರದರ್ಶಿಸಲಾಗಿದೆ.

ಅಭಿವೃದ್ಧಿ: ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಈ ವಿಮಾನ ನಿಲ್ದಾಣ ಗಲ್ಪ್‌ ದೇಶಗಳಿಂದ ತವರಿಗೆ ಆಗಮಿಸುವ ಕೇರಳಿಗರಿಗೆ ನೆರವಾಗುವ ಜೊತೆಗೆ, ಕೇರಳದ ಪ್ರವಾಸೋದ್ಯಕ್ಕೆ ಕೊಡುಗೆ ನೀಡುವ ವಿಶ್ವಾಸ ವ್ಯಕ್ತವಾಗಿದೆ.

1935ರಲ್ಲೇ ಸಂಚಾರ: ಕಣ್ಣೂರಿನಲ್ಲಿ 1935ರಲ್ಲೇ ವಿಮಾನ ಸೇವೆ ಇತ್ತು. ಸಣ್ಣ ಏರ್‌ಸ್ಟ್ರಿಪ್‌ ಮೂಲಕ ಟಾಟಾ ಏರ್‌ಲೈನ್ಸ್‌ ಇಲ್ಲಿಂದ ಸೇವೆ ಒದಗಿಸುತ್ತಿತ್ತು. 1997ರಲ್ಲಿ ಮೊದಲ ಬಾರಿ ದೊಡ್ಡ ವಿಮಾನ ನಿಲ್ದಾಣಕ್ಕೆ ಬೇಡಿಕೆ ವ್ಯಕ್ತವಾಗಿತ್ತು. ಆಗ ಕೇಂದ್ರ ವಿಮಾನಯಾನ ಸಚಿವರಾಗಿದ್ದ, ಕನ್ನಡಿಗ ಸಿ.ಎಂ.ಇಬ್ರಾಹಿಂ ಈ ಪ್ರಸ್ತಾವನೆ ಬೆಂಬಲಿಸುವ ಮೂಲಕ ಯೋಜನೆ ಆರಂಭಕ್ಕೆ ಕಾರಣಕರ್ತರಾಗಿದ್ದರು.