ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕರ್ನಾಟಕ ಸಾರಿಗೆ ಬಸ್‌ಗಳ ಮೇಲೆ ಮರಾಠಿ ಭಾಷೆಯಲ್ಲಿ ಜೈ ಮಹಾರಾಷ್ಟ್ರ ಎಂದು ಬರೆದ ಬೆನ್ನಲ್ಲೇ ಅದೇ ಮಾದರಿಯಲ್ಲಿ ವಿಜಯಪುರದಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮಹಾ ಸಾರಿಗೆ ಬಸ್‌ಗಳ ಮೇಲೆ ಕನ್ನಡದಲ್ಲಿ ಬರೆದು ಖಂಡಿಸಿದ್ದಾರೆ. ಅಷ್ಟೇ ಅಲ್ಲದೆ ಜತೆಗೆ ವಾಹನ ಚಾಲಕ ನಿರ್ವಾಹಕರನ್ನು ಕೆಳಗಿಳಿಸಿ ಅವರ ಶರ್ಟ್ ಮೇಲೆ ಜೈ ಕನ್ನಡ ಎಂದು ಬರೆದು ಅವರ ಬಾಯಿಂದಲೂ ಜೈ ಕರ್ನಾಟಕ ಮಾತೆ ಎಂಬ ಘೋಷಣೆ ಕೂಗಿಸಿದ್ದಾರೆ. 

ವಿಜಯಪುರ/ಬೆಳಗಾವಿ/ಬಾಗಲಕೋಟೆ (ಮೇ.24): ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕರ್ನಾಟಕ ಸಾರಿಗೆ ಬಸ್‌ಗಳ ಮೇಲೆ ಮರಾಠಿ ಭಾಷೆಯಲ್ಲಿ ಜೈ ಮಹಾರಾಷ್ಟ್ರ ಎಂದು ಬರೆದ ಬೆನ್ನಲ್ಲೇ ಅದೇ ಮಾದರಿಯಲ್ಲಿ ವಿಜಯಪುರದಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮಹಾ ಸಾರಿಗೆ ಬಸ್‌ಗಳ ಮೇಲೆ ಕನ್ನಡದಲ್ಲಿ ಬರೆದು ಖಂಡಿಸಿದ್ದಾರೆ. ಅಷ್ಟೇ ಅಲ್ಲದೆ ಜತೆಗೆ ವಾಹನ ಚಾಲಕ ನಿರ್ವಾಹಕರನ್ನು ಕೆಳಗಿಳಿಸಿ ಅವರ ಶರ್ಟ್ ಮೇಲೆ ಜೈ ಕನ್ನಡ ಎಂದು ಬರೆದು ಅವರ ಬಾಯಿಂದಲೂ ಜೈ ಕರ್ನಾಟಕ ಮಾತೆ ಎಂಬ ಘೋಷಣೆ ಕೂಗಿಸಿದ್ದಾರೆ. 
ಇದೇ ವೇಳೆ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಅವರು ಶಿವಸೇನೆಯ ಈ ಕೃತ್ಯವನ್ನು ಖಂಡಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಜೊತೆಗೆ ಜಿಲ್ಲೆಯ ಮಹಾಲಿಂಗಪುರದಲ್ಲಿಯೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಬೆಳಗಾವಿಯಲ್ಲಿಯೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಎಂಇಎಸ್ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಕೊಲ್ಹಾಪುರದಲ್ಲಿ ಕರ್ನಾಟಕ ಸಾರಿಗೆ ಬಸ್‌ಗಳ ಮೇಲೆ ನಡೆದಿರುವ ಘಟನೆಯನ್ನೂ ಖಂಡಿಸಿದ್ದಾರೆ. ಇದೇ ವೇಳೆ ಎರಡು ದಿನಗಳ ಅವಕಾಶ ನಮಗೆ ಕೊಟ್ಟರೆ ಎಂಇಎಸ್ ಅನ್ನು ಬುಡಸಹಿತ ಕಿತ್ತು ಹಾಕುತ್ತೇವೆ ಎಂದು ಕನ್ನಡ ನವನಿರ್ಮಾಣ ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಯನ್ನು ಕೋರಿದ್ದಾರೆ. ಘಟಪ್ರಭಾದಲ್ಲಿ ಕರ್ನಾಟಕ ಯುವ ಸೇನೆ ಸಂಘಟನೆಯವರು ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಿದ್ದಾರೆ.
ಬೆಳಗಾವಿ
'ಮಹಾರಾಷ್ಟ್ರ ಪರ ನಿರ್ಣಯ ಕೈಗೊಳ್ಳುವ ಪಾಲಿಕೆ ಸದಸ್ಯರ ಸದಸ್ಯತ್ವ ರದ್ದುಗೊಳಿಸಲಾಗುವುದು’ ಎಂದ ಸಚಿವ ರೋಷನ್ ಬೇಗ್ ಹೇಳಿಕೆ ವಿರೋಧಿಸಿ ಎಂಇಎಸ್, ಶಿವಸೇನೆ ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ರ‌್ಯಾಲಿಯಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರ ಸರ್ಕಾರದ ಸಾರಿಗೆ ಸಚಿವ ದಿವಾಕರ ರಾವತೆ ಮತ್ತು ಆರೋಗ್ಯ ಸಚಿವ ದೀಪಕ ಸಾವಂತೆ ಆಗಮಿಸಲಿದ್ದಾರೆ.
ಗುರುವಾರ ಬೆಳಗ್ಗೆ 10.30 ಕ್ಕೆ ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ನಡೆಯಲಿರುವ ಪ್ರತಿಭಟನಾ ರ‌್ಯಾಲಿಯಲ್ಲಿ ಇಬ್ಬರು ಸಚಿವರು ಪಾಲ್ಗೊಂಡು ಪ್ರಚೋದನಾತ್ಮಕ ಭಾಷಣ ಮಾಡುವ ನಿರೀಕ್ಷೆ ಇದೆ.
ಮರಾಠಿ ದಾಖಲೆ ಬೇಕಂತೆ:
ಈ ನಡುವೆ, ಬೆಳಗಾವಿ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮತ್ತೆ ಝಾಪಾ(ಮರಾಠಿ ಕಟ್ಟಾಳು)ಗಳು ಮರಾಠಿಯಲ್ಲಿ ಸರ್ಕಾರಿ ದಾಖಲೆಗಳನ್ನು ನೀಡುವಂತೆ ಆಗ್ರಹಿಸಿದರು. ಸಭೆ ಆರಂಭಕ್ಕೂ ಮುನ್ನವೇ ತಮಗೆ ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಾರದು. ಕಾರಣ ನಮಗೆ ಮರಾಠಿ ಭಾಷೆಯಲ್ಲೇ ದಾಖಲೆ ಕೊಡಿ. ಸಭೆಯ ಕಡತ, ನಡಾವಳಿ, ಸೂಚನಾ ಪತ್ರಗಳನ್ನು ನೀಡುವಂತೆ ಆಗ್ರಹಿಸಿದರು. ಅಲ್ಲದೆ, ಯಾವುದೇ ಸಮಸ್ಯೆಗಳಿಗೂ ತಾಪಂ ಅಧಿಕಾರಿ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಇನ್ನು ಅಭಿವೃದ್ಧಿ ಕಾರ್ಯಕ್ಕೆ ಸ್ಪಂದಿಸದಿದ್ದಲ್ಲಿ ‘ಜೈ ಮಹಾರಾಷ್ಟ್ರ’ ಘೋಷಣೆ ಅನಿವಾರ್ಯವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.