ಬೀಚ್‌ನಲ್ಲಿ ಕನ್ನಡಿಗರ ಮನೆಗಳನ್ನು ಧ್ವಂಸ ಮಾಡಿದ ಗೋವಾ ಸರ್ಕಾರ ಈಗ ಮತ್ತೆ ನೆರೆ ರಾಜ್ಯದ ಜನರ ಮೇಲೆ ಇಂಥದ್ದೇ ಮತ್ತೊಂದು ಪ್ರಹಾರಕ್ಕೆ ಮುಂದಾಗಿದೆ. ಗೋವಾದಲ್ಲಿರುವ ಕರ್ನಾಟಕ ಮೂಲದ ಲಮಾಣಿ (ಲಂಬಾಣಿ) ಸಮುದಾಯದವರಿಗೆ ಚಿಲ್ಲರೆ ಮೀನು ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ರಾಜ್ಯದ ಕೃಷಿ ಸಚಿವ ವಿಜಯ ಸರದೇಸಾಯಿ ಹೇಳಿದ್ದಾರೆ.

ಪಣಜಿ: ಬೀಚ್‌ನಲ್ಲಿ ಕನ್ನಡಿಗರ ಮನೆಗಳನ್ನು ಧ್ವಂಸ ಮಾಡಿದ ಗೋವಾ ಸರ್ಕಾರ ಈಗ ಮತ್ತೆ ನೆರೆ ರಾಜ್ಯದ ಜನರ ಮೇಲೆ ಇಂಥದ್ದೇ ಮತ್ತೊಂದು ಪ್ರಹಾರಕ್ಕೆ ಮುಂದಾಗಿದೆ.

ಗೋವಾದಲ್ಲಿರುವ ಕರ್ನಾಟಕ ಮೂಲದ ಲಮಾಣಿ (ಲಂಬಾಣಿ) ಸಮುದಾಯದವರಿಗೆ ಚಿಲ್ಲರೆ ಮೀನು ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ರಾಜ್ಯದ ಕೃಷಿ ಸಚಿವ ವಿಜಯ ಸರದೇಸಾಯಿ ಹೇಳಿದ್ದಾರೆ.

‘ಗೋವಾ ಸಗಟು ಮೀನು ಮಾರುಕಟ್ಟೆಯಲ್ಲಿ ಅಕ್ರಮವಾಗಿ ಚಿಲ್ಲರೆ ಮೀನು ವ್ಯಾಪಾರ ನಡೆಯುತ್ತಿದೆ. ಇದನ್ನು ನಿಲ್ಲಿಸಲು ಸಾಧ್ಯವಿದೆಯೇ’ ಎಂಬ ಮಾಧ್ಯಮ ವರದಿಯೊಂದಕ್ಕೆ ಟ್ವೀಟರ್‌ನಲ್ಲಿ ಉತ್ತರಿಸಿರುವ ಸರದೇಸಾಯಿ, ‘ಸವಾಲು ಸ್ವೀಕರಿಸಿದ್ದೇನೆ. ಲಮಾಣಿಗಳು ಚಿಲ್ಲರೆ ದರದಲ್ಲಿ ಮೀನು ಮಾರುವುದನ್ನು ನಿಷೇಧಿಸಲಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಗೋವಾ ಮೀನುಗಾರಿಗೆ ಸಚಿವ ವಿನೋದ್ ಪಾಳ್ಯೇಕರ್ ಕೂಡ ಈ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ‘ಸಗಟು ಮಾರುಕಟ್ಟೆಯಲ್ಲಿ ಚಿಲ್ಲರೆ ಮೀನು ಮಾರಾಟಕ್ಕೆ ಅವಕಾಶವಿಲ್ಲ. ವಿಜಯ ಸರದೇಸಾಯಿ ಹೇಳಿಕೆ ಸರಿಯಾಗಿದೆ’ ಎಂದು ಹೇಳಿದ್ದಾರೆ.

ಮಡಗಾಂವ್‌ನಲ್ಲಿರುವ ಸಗಟು ಮೀನು ಮಾರುಕಟ್ಟೆಯಲ್ಲಿ ಲಮಾಣಿಗಳು ಚಿಲ್ಲರೆ ಮೀನು ವ್ಯಾಪಾರ ಮಾಡುತ್ತಿದ್ದು, ಇದರಿಂದ ತಮ್ಮ ವ್ಯಾಪಾರಕ್ಕೆ ಹೊಡೆತವಾಗುತ್ತಿದೆ ಎಂದು ಸಗಟು ಮತ್ಸ್ಯ ವ್ಯಾಪಾರಿಗಳು ದೂರು ನೀಡಿದ್ದರು. ಅಲ್ಲದೆ, ಲಮಾಣಿಗಳು ಎಲ್ಲೆಂದರೆಲ್ಲಿ ಮೀನು ಮಾರುವುದರಿಂದ ಮಾರುಕಟ್ಟೆಯಲ್ಲಿ ಗಜಿಬಿಜಿ ವಾತಾವ ರಣ ನಿರ್ಮಾಣವಾಗುತ್ತಿದೆ ಎಂದೂ ದೂರಲಾಗಿತ್ತು. ಇದರ ಬೆನ್ನಲ್ಲೇ ವಿಜಯ್ ಹಾಗೂ ಪಾಳ್ಯೇಕರ್ ಈ ಹೇಳಿಕೆ ನೀಡಿದ್ದಾರೆ.

ಈ ಹಿಂದೆಯೂ ವಿವಾದ ಆಗಿತ್ತು: ಈ ಹಿಂದೆ ಗೋವಾ ಪ್ರವಾಸೋದ್ದಿಮೆ ಸಚಿವ ಮನೋಹರ ಅಜಗಾಂವಕರ್ ಅವರು ಲಂಬಾಣಿಗಳನ್ನು ಗೋವೆಯ ಕಡಲತೀರದಲ್ಲಿ ವ್ಯಾಪಾರ ಮಾಡುವುದರಿಂದಲೇ ನಿಷೇಧ ಮಾಡಿಬಿಡುತ್ತೇವೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು.

ಲಮಾಣಿ ಸಮುದಾಯದವರು ಗೋವಾ ಕಡಲ ತೀರ ದಲ್ಲಿ ಕಪ್ಪೆಚಿಪ್ಪು, ಟೋಪಿ, ಸರ, ಬರ್ಮುಡಾ ಚಡ್ಡಿಗಳು, ತಂಪು ಕನ್ನಡಕ, ಮಹಿಳೆಯರ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುತ್ತ ಹೊಟ್ಟೆ ಹೊರೆದುಕೊಳ್ಳುತ್ತಾರೆ.

ಆದರೆ ಇವರಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡಿ, ಕಡಲತೀರದಲ್ಲಿ ಲಂಬಾಣಿಗರು ವ್ಯಾಪಾರ ನಡೆಸುವುದನ್ನು ನಿಷೇಧಿಸುತ್ತೇವೆ ಎಂದು ಸಚಿವ ಅಜಗಾಂವಕರ್ ಹೇಳಿದ್ದರು. ಆದರೆ ಈ ಹೇಳಿಕೆಗೆ ಪ್ರತಿರೋಧ ಸೃಷ್ಟಿಯಾಗಿದ್ದರಿಂದ ತಮ್ಮ ಹೇಳಿಕೆ ಹಿಂಪಡೆದಿದ್ದರು.