Asianet Suvarna News Asianet Suvarna News

ಹರಟೆ ಹೊಡೆಯುತ್ತಿದ್ದಾಗ ಪಕ್ಕದಲ್ಲೇ ಢಂ ಅಂತು : ಕನ್ನಡಿಗರ ನೇರ ಅನುಭವ

ಶ್ರೀಲಂಕಾದ ಕೊಲಂಬೋದ ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆದ ಬಾಂಬ್‌ ಸ್ಫೋಟದ ವೇಳೆ ಅಲ್ದ್ದಲಿಯೇ ಇದ್ದ ಕನ್ನಡಿಗರ ಭಯಾನಕ ಘಟನೆಯ ಅನುಭವವಿದು.

Kannadiga People Experience Of Sri Lanka Bomb Blast
Author
Bengaluru, First Published Apr 23, 2019, 7:18 AM IST

ಬೆಂಗಳೂರು :  ‘ಭಾನುವಾರ ಕೊಲಂಬೋ ನಗರದ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಪ್ಲಾನ್‌ ಮಾಡಿದ್ದೆವು. ಹೀಗಾಗಿ ಬೆಳಗ್ಗೆ 8.45ರ ವೇಳೆಗೆ ತಿಂಡಿ ಮುಗಿಸಿದೆವು. ನಮ್ಮ ಜತೆ ಬಂದಿದ್ದ ಕೆಲವರು ಇನ್ನೂ ತಿಂಡಿ ತಿನ್ನುತ್ತಿದ್ದುದರಿಂದ ಅವರಿಗಾಗಿ ಹಿಲ್ಟನ್‌ ಹೋಟೆಲ್‌ನ ಆವರಣದಲ್ಲಿ ಕಾಯುತ್ತಿದ್ದೆವು. ಅಷ್ಟರಲ್ಲೇ ಕೂಗಳತೆ ದೂರದಲ್ಲಿದ್ದ ಶಾಂಗ್ರಿಲಾ ಹೋಟೆಲ್‌ ಕಡೆಯಿಂದ ಭಾರಿ ಶಬ್ದ ಕೇಳಿಸಿತು. ಏನದು ಎಂದು ನೋಡಲು ನಾವು ಅತ್ತ ಧಾವಿಸಲು ಮುಂದಾಗುತ್ತಿದ್ದಂತೆಯೇ ಹಿಲ್ಟನ್‌ ಹೋಟೆಲ್‌ನ ಭದ್ರತಾ ಸಿಬ್ಬಂದಿ ನಮ್ಮನ್ನು ತಡೆದು ತರಾತುರಿಯಲ್ಲಿ ಹೋಟೆಲ್‌ ಒಳಗೆ ಕರೆದೊಯ್ದರು...’

ಶ್ರೀಲಂಕಾದ ಕೊಲಂಬೋದ ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆದ ಬಾಂಬ್‌ ಸ್ಫೋಟದ ವೇಳೆ ಈ ಹೋಟೆಲ್‌ನ ಸಮೀಪವೇ ಇದ್ದ ಶಿವಮೊಗ್ಗದ ಅರುಣ್‌ ಅವರು ಆ ಭಯಾನಕ ಘಟನೆಯನ್ನು ವಿವರಿಸಿದ್ದು ಹೀಗೆ.

ಸದ್ಯ ಶ್ರೀಲಂಕಾದ ಬೆಂಟೊಟಾ ನಗರದಲ್ಲಿರುವ ಶಿವಮೊಗ್ಗದ ಅರುಣ್‌ ಅಲ್ಲಿಂದಲೇ ದೂರವಾಣಿ ಮೂಲಕ ಕನ್ನಡಪ್ರಭದೊಂದಿಗೆ ಮಾತನಾಡಿದರು. ಘಟನೆ ನಡೆದ ಸ್ಥಳದಿಂದ ಕೂಗಳತೆ ದೂರದ ಮತ್ತೊಂದು ಹೋಟೆಲ್‌ ಹಿಲ್ಟನ್‌ನಲ್ಲಿ ಇದ್ದ ತಮ್ಮನ್ನು ಹೇಗೆ ಆ ಹೋಟೆಲ್‌ನ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು ಎಂಬುದನ್ನು ವಿವರಿಸಿದ ಅವರು, ಈಗಲೂ ನಮಗೆ ಆತಂಕ ಕಾಡುತ್ತಿದೆ. ಪ್ರತಿಕ್ಷಣವನ್ನು ಆತಂಕದಲ್ಲೇ ಕಳೆಯುತ್ತಿದ್ದೇವೆ. ಭಾರತಕ್ಕೆ ಮರಳಿದರೆ ಸಾಕು ಎಂದು ಕಾಯುತ್ತಿದ್ದೇವೆ ಎಂದು ಹೇಳುತ್ತಾರೆ.

ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವ 20 ಮಂದಿ ಸ್ನೇಹಿತರು ಗ್ಲೋಬಲ್‌ ಟ್ರಾವೆಲ್‌ ಏಜೆನ್ಸಿಯ ಮೂಲಕ ಏ.18ರಂದು ಶ್ರೀಲಂಕಾಗೆ ಪ್ಯಾಕೇಜ್‌ ಟೂರ್‌ ಬಂದೆವು. ಭಾನುವಾರ (ಏ.21) ಶ್ರೀಲಂಕಾದ ರಾಜಧಾನಿ ಕೊಲಂಬೋ ನಗರದಲ್ಲಿರುವ ಹಿಲ್ಟನ್‌ ಹೋಟೆಲ್‌ನಲ್ಲಿ ತಂಗಿದ್ದೆವು. ಬೆಳಗ್ಗೆ 8.45ರ ಸಮಾರಿಗೆ ತಿಂಡಿ ಮುಗಿಸಿ ಹೋಟೆಲ್‌ ಮುಂದೆ ಹರಟುತ್ತಾ ನಿಂತಿದ್ದಾಗ ಅನತಿ ದೂರದಲ್ಲಿರುವ ಶಾಂಗ್ರಿಲಾ ಹೋಟೆಲ್‌ನಲ್ಲಿ ಢಂ ಎಂಬ ಭಾರಿ ಶಬ್ದದೊಂದಿಗೆ ಬಾಂಬ್‌ ಸ್ಫೋಟವಾಯಿತು. ನಾವು ಸ್ಫೋಟ ಸಂಭವಿಸಿದ ಸ್ಥಳಕ್ಕೆ ತೆರಳಲು ಮುಂದಾದಾಗ ಹೋಟೆಲ್‌ ಅಧಿಕಾರಿಗಳು ತಡೆದು ಎಲ್ಲರನ್ನೂ ಹೋಟೆಲ್‌ ಒಳಗೆ ಕರೆದೊಯ್ದರು ಎಂದು ಅರುಣ್‌ ವಿವರಿಸಿದರು.

ಪ್ರತಿ ಕ್ಷಣವೂ ಆತಂಕ:

ಸ್ಫೋಟದ ನಂತರ ಕೆಲವೇ ನಿಮಿಷಗಳಲ್ಲಿ ಕೊಲಂಬೋ ಪೊಲೀಸರು, ಬಾಂಬ್‌ ನಿಷ್ಕಿ್ರಯ ದಳದವರು ನಮ್ಮ ಹೋಟೆಲ್‌ ತಪಾಸಣೆ ನಡೆಸಿ, ಬಾಂಬ್‌ ಇಲ್ಲದಿರುವ ಬಗ್ಗೆ ಖಚಿತಪಡಿಸಿದರು. ಅಷ್ಟರಲ್ಲಿ ನಮ್ಮ ಟೂರ್‌ ಆಪರೇಟರ್‌ ಹಿಲ್ಟನ್‌ ಹೋಟೆಲ್‌ನಿಂದ ನಮ್ಮನ್ನೆಲ್ಲ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ನಿರ್ಧರಿಸಿದರು. ಕೊಲಂಬೋ ನಗರದಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಬೆಂಟೊಟಾ ಎಂಬ ನಗರದಲ್ಲಿರುವ ಹೋಟೆಲ್‌ವೊಂದಕ್ಕೆ ಕರೆದೊಯ್ದರು. ಸದ್ಯ ನಾವೆಲ್ಲ ಬೆಂಟೊಟಾದಲ್ಲೇ ಬೀಡುಬಿಟ್ಟಿದ್ದೇವೆ. ಊಟ-ತಿಂಡಿಗೆ ಯಾವುದೇ ಸಮಸ್ಯೆಯಿಲ್ಲ. ಆದರೂ ಯಾವ ಕ್ಷಣದಲ್ಲಿ ಏನಾಗುತ್ತದೋ ಎಂಬ ಭಯದಲ್ಲೇ ಇದ್ದೇವೆ. ರಸ್ತೆಯಲ್ಲಿ ಆ್ಯಂಬುಲೆನ್ಸ್‌ಗಳು ಓಡಾಡಿದರೂ ಬೆಚ್ಚುವಂತಾಗಿದೆ ಎಂದು ಹೇಳಿದರು.

ಹೋಟೆಲ್‌ನವರು ನಿನ್ನೆಯಿಂದಲೂ ಹೊರಕ್ಕೆ ಬಿಡುತ್ತಿಲ್ಲ. ಎಲ್ಲರ ಪಾಸ್‌ಪೋರ್ಟ್‌ ಸಂಗ್ರಹಿಸಿ ಇರಿಸಿಕೊಂಡಿದ್ದಾರೆ. ಏ.23ರಂದು ಸಂಜೆ ಭಾರತಕ್ಕೆ ರಿಟರ್ನ್‌ ಟಿಕೆಟ್‌ ಬುಕಿಂಗ್‌ ಆಗಿದೆ. ನಿಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಇರುವುದರಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೂ ಮನಸಿಗೆ ನೆಮ್ಮದಿ ಇಲ್ಲ. ಕುಟುಂಬದ ಸದಸ್ಯರು, ಸ್ನೇಹಿತರು, ಸಂಬಂಧಿಕರು ನಿರಂತರ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದಾರೆ. ಬಾಂಬ್‌ ಸ್ಫೋಟದ ಬಳಿಕ ಇಂಟರ್‌ನೆಟ್‌ ಸೇವೆಯಲ್ಲಿ ವ್ಯತ್ಯಯವಾಗಿದೆ. ಮೊಬೈಲ್‌ ನೆಟ್‌ವರ್ಕ್ ಕೂಡ ಸರಿಯಾಗಿ ಸಿಗುತ್ತಿಲ್ಲ. ಇನ್ನು ಕೊಲಂಬೋದಲ್ಲಿ ಕಫä್ರ್ಯ ಜಾರಿಯಲ್ಲಿರುವುದರಿಂದ ರಸ್ತೆಗಳಲ್ಲಿ ಜನಸಂಚಾರ ಸ್ಥಗಿತವಾಗಿದೆ. ಕೇವಲ ಪೊಲೀಸ್‌, ಮಿಲಿಟರಿ ವಾಹನಗಳು ಮಾತ್ರ ಸಂಚರಿಸುತ್ತಿವೆ ಎಂದು ಶ್ರೀಲಂಕಾ ಮಾಧ್ಯಮಗಳು ವರದಿ ಮಾಡುತ್ತಿವೆ. ಬೆಂಟೊಟಾ ನಗರದಲ್ಲಿಯೂ ಕರ್ಫ್ಯೂ ರೀತಿಯ ವಾತಾವರಣವಿದೆ ಎಂದು ಅಲ್ಲಿನ ಪರಿಸ್ಥಿತಿ ವಿವರಿಸಿದರು.

ಚರ್ಚ್, ಹೋಟೆಲ್‌ ಗುರಿ:

ಉಗ್ರರು ಬಾಂಬ್‌ ಸ್ಫೋಟಕ್ಕೆ ಚಚ್‌ರ್‍ ಹಾಗೂ ಹೋಟೆಲ್‌ಗಳನ್ನೇ ಆಯ್ಕೆ ಮಾಡಿದ್ದಾರೆ. ಭಾನುವಾರ ಈಸ್ಟರ್‌ ಇದ್ದಿದ್ದರಿಂದ ಹೆಚ್ಚಿನ ಸಂಖ್ಯೆಯ ಜನ ಚಚ್‌ರ್‍ಗಳಿಗೆ ಬರುವುದನ್ನು ಅರಿತು ಸ್ಫೋಟಕ್ಕೆ ಚಚ್‌ರ್‍ಗಳನ್ನು ಆಯ್ಕೆ ಮಾಡಿದ್ದಾರೆ. ಇನ್ನು ಹೋಟೆಲ್‌ಗಳಲ್ಲಿ ಬೆಳಗ್ಗೆ ತಿಂಡಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಬೆಳಗಿನ ಸಮಯದಲ್ಲೇ ಬಾಂಬ್‌ ಸ್ಫೋಟಿಸಿದ್ದಾರೆ. ಈ ದುರ್ಘಟನೆಯಲ್ಲಿ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮರುಕ ವ್ಯಕ್ತಪಡಿಸಿದರು.

ಬಾಂಬ್‌ ಸ್ಫೋಟದಿಂದ ನಾವೆಲ್ಲ ದಿಗ್ಭ್ರಮೆಗೊಂಡಿದ್ದೇವೆ. ಕೂಗಳತೆ ದೂರದಲ್ಲಿ ದುರ್ಘಟನೆ ನಡೆದರೂ ಅದೃಷ್ಟವಶಾತ್‌ ಅನಾಹುತದಿಂದ ಪಾರಾಗಿದ್ದೇವೆ. ಆದರೂ ತಾಯಿನಾಡಿಗೆ ವಾಪಸಾಗುವವರೆಗೂ ನೆಮ್ಮದಿಯಿಲ್ಲ. ದೇವರನ್ನು ಪ್ರಾರ್ಥಿಸುತ್ತಾ ಸಮಯ ದೂಡುತ್ತಿದ್ದೇವೆ. ಯಾವ ಕ್ಷಣದಲ್ಲಿ ಏನಾಗುತ್ತದೋ ಗೊತ್ತಿಲ್ಲ ಎಂದು ಅರುಣ್‌ ಭಾವುಕರಾಗಿ ಹೇಳಿದರು.

ಬೆಂಗಳೂರಿನಿಂದ ಶ್ರೀಲಂಕಾಗೆ ತೆರಳಿರುವ 20 ಮಂದಿಯ ಪ್ರವಾಸಿಗರ ತಂಡದ ಸದಸ್ಯರು ಬಳ್ಳಾರಿ, ಹೊಸಪೇಟೆ, ಹೊಸದುರ್ಗ, ಶಿವಮೊಗ್ಗ, ಕೋಲಾರ ಮೂಲದವರು.

ಸುರಕ್ಷಿತವಾಗಿ ಮರಳಿದ ಡಾ.ಜ್ಯೋತಿ

ಬಾಂಬ್‌ ಸ್ಫೋಟದ ದಿನ ಶ್ರೀಲಂಕಾದಲ್ಲಿ ಪ್ರವಾಸದಲ್ಲಿದ್ದ ಬೆಂಗಳೂರು ಮೂಲದ ಡಾ.ಜ್ಯೋತಿ ಅವರು ಸೋಮವಾರ ಸುರಕ್ಷಿತವಾಗಿ ತವರಿಗೆ ವಾಪಸಾದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜ್ಯೋತಿ ಅವರು ಮಾಧ್ಯಮಗಳೊಂದಿಗೆ ಬಾಂಬ್‌ ಸ್ಫೋಟದ ಬಗ್ಗೆ ಮಾತನಾಡಿದರು.

ಶ್ರೀಲಂಕಾ ರಾಜಧಾನಿ ಕೋಲಂಬೋ ನಗರದಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಬೆಂಟೊಟಾ ನಗರದಲ್ಲಿ ಪ್ರವಾಸದಲ್ಲಿದ್ದೆವು. ಭಾನುವಾರ ಬೆಳಗ್ಗೆ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೋಗುವಾಗ ನಮ್ಮ ವಾಹನದ ಚಾಲಕ ಬಾಂಬ್‌ ಸ್ಫೋಟದ ಬಗ್ಗೆ ಮಾಹಿತಿ ನೀಡಿದರು. ಬಳಿಕ ಪ್ರವಾಸ ಮೊಟಕುಗೊಳಿಸಿ ಉಳಿದುಕೊಂಡಿದ್ದ ರೆಸಾರ್ಟ್‌ಗೆ ತೆರಳಿದೆವು. ಬಾಂಬ್‌ ಸ್ಫೋಟದಿಂದ ನಮಗೇನೂ ತೊಂದರೆಯಾಗಲಿಲ್ಲ ಎಂದರು.

ಕೊಲಂಬೋ ನಗರದಲ್ಲಿ ಕಫä್ರ್ಯ ಘೋಷಿಸಿದ್ದು, ಶಾಲಾ-ಕಾಲೇಜು, ಕಚೇರಿಗಳಿಗೆ ರಜೆ ನೀಡಲಾಗಿದೆ. ಏರ್‌ಪೋರ್ಟ್‌ಗಳಲ್ಲಿ ಸೆಕ್ಯೂರಿಟಿ ಹೆಚ್ಚಿಸಲಾಗಿದೆ. ನಾವು ಬರುವಾಗ ಸ್ಥಳೀಯ ಪೊಲೀಸರ ಅನುಮತಿ ಪಡೆದು ಏರ್‌ಪೋರ್ಟ್‌ಗೆ ಬಂದೆವು. ಸುಮಾರು ಒಂದೂವರೆ ತಾಸು ತಪಾಸಣಾ ಪ್ರಕ್ರಿಯೆ ನಡೆಯಿತು. ಇದೀಗ ಸುರಕ್ಷಿತವಾಗಿ ತವರಿಗೆ ಮರಳಿದ್ದೇವೆ ಎಂದರು.

ವರದಿ : ಮೋಹನ್‌ ಹಂಡ್ರಂಗಿ

Follow Us:
Download App:
  • android
  • ios