ಆತ್ಮಹತ್ಯೆ ತಡೆಗೆ ಕ್ರಮ ಕೈಗೊಳ್ಳಲು ಚೌಡರೆಡ್ಡಿ  ಆಗ್ರಹ

ವಿಧಾನಪರಿಷತ್: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಸಾಲ ಮನ್ನಾ ಬಳಿಕವೂ 200 ರೈತರ ಸಾವು ಉಂಟಾಗಿದೆ. ಇದು ಸರ್ಕಾರ ಅನ್ನದಾತನ ನೆರವಿಗೆ ಬಂದಿದೆಯೇ ಎಂಬುದನ್ನು ಸ್ಪಷ್ಟಪಡಿಸುತ್ತಿದೆ ಎಂದು ಜೆಡಿಎಸ್‌ನ ಚೌಡರೆಡ್ಡಿ ಆಪಾದಿಸಿದ್ದಾರೆ.

ಮಂಗಳವಾರ ಶೂನ್ಯವೇಳೆಯಲ್ಲಿ ‘ಕನ್ನಡಪ್ರಭ’ ಇತ್ತೀಚೆಗೆ ಪ್ರಕಟಿಸಿದ ಸಾಲ ಮನ್ನಾ ನಂತರವೂ 200 ರೈತರ ಸಾವು ವಿಶೇಷ ವರದಿಯನ್ನು ಉಲ್ಲೇಖಿಸಿದ ಅವರು, ಒಂದು ವರ್ಷದಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಮನ್ನಾ ನಂತರ 200 ಸಾವು ಸಂಭವಿಸಿದೆ ಎಂದು ‘ಕನ್ನಡಪ್ರಭ’ ವರದಿ ಮಾಡಿದೆ.

ಉತ್ತರ ಕರ್ನಾಟಕದಲ್ಲೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಆತ್ಮಹತ್ಯೆ ತಡೆಯಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಸೂಕ್ತ ಪರಿಹಾರ ನೀಡುವಂತಾಗಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾ ನಾಯಕ ಎಂ. ಆರ್. ಸೀತಾರಾಂ ಅವರು, ಸಂಬಂಧಿಸಿದ ಸಚಿವರಿಂದ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದರು.