ರಾಹುಲ್ ಗಾಂಧಿ ಯುವ ಟೀಂನಲ್ಲಿ ಏಕೈಕ ಕನ್ನಡಿಗ ಈ ಕ್ರಿಕೆಟ್ ಪಟು
- ರಾಹುಲ್ ಯುವ ಟೀಂನಲ್ಲಿ ಶ್ರೀನಿವಾಸ್ ಏಕೈಕ ಕನ್ನಡಿಗ
- ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಮುಂದುವರಿಕೆ
ನವದೆಹಲಿ: ಭಾರತೀಯ ಯುವ ಕಾಂಗ್ರೆಸ್ ಪುನರ್ ರಚನೆಯಾಗಿದ್ದು, ರಾಜ್ಯದ ಶ್ರೀನಿವಾಸ್ ಬಿ.ವಿ. ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಮುಂದುವರಿದಿದ್ದಾರೆ.
2016ರಲ್ಲಿ ಸೋನಿಯಾ ಅಧ್ಯಕ್ಷರಾಗಿದ್ದಾಗ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಅವರು ಇದೀಗ ರಾಹುಲ್ ಟೀಂನಲ್ಲಿಯೂ ಸ್ಥಾನ ಪಡೆದು ಕೊಂಡಿದ್ದಾರೆ.
ರಾಹುಲ್ ಅವರು 44 ಜನರನ್ನು ಒಳಗೊಂಡ ಯುವ ಕಾಂಗ್ರೆಸ್‌ನ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು ಇದರಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗ ಶ್ರೀನಿವಾಸ್ ಆಗಿದ್ದಾರೆ.
ಯುವ ಕಾಂಗ್ರೆಸ್’ನ ಉತ್ತರ ಪ್ರದೇಶದ ಘಟಕದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶ್ರೀನಿವಾಸ್ ಆ ಬಳಿಕ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಆ ರಾಜ್ಯದಲ್ಲಿಯೂ ಯುವ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿದ್ದರು.
ಇದೀಗ ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ತೆಲಂಗಾಣದ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ. 2014ರಲ್ಲಿ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಶ್ರೀನಿವಾಸ್ ನೇಮಕಗೊಂಡಿದ್ದರು.
ಇದಕ್ಕೂ ಮೊದಲು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮೂಲತಃ ಶಿವಮೊಗ್ಗದ ಭದ್ರಾವತಿಯವರಾಗಿರುವ ಶ್ರೀನಿವಾಸ್ ಇದೀಗ ಬೆಂಗಳೂರಿನ ರಾಜಾಜಿನಗರದಲ್ಲಿ ನೆಲೆಸಿದ್ದಾರೆ. ಉತ್ತಮ ಕ್ರಿಕೆಟ್ ಪಟುವಾಗಿದ್ದು, ಅಂಡರ್ 19 ವಿಭಾಗದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು.