ಹುಬ್ಬಳ್ಳಿ (ಜ. 04): ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಯಾದ ಮಹದಾಯಿ ಯೋಜನೆ ಅನುಷ್ಠಾನದ ಕುರಿತು ಚರ್ಚಿಸಲು ಸಾಹಿತ್ಯ ಸಮ್ಮೇಳನ ಮಹತ್ವದ ವೇದಿಕೆಯಾಗಲಿದೆ ಎಂದು 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸಾಹಿತ್ಯ ಸಮ್ಮೇಳನ ಬರೀ ಭಾಷಣಕ್ಕೆ ಸೀಮಿತವಾಗದೆ ನಾಡಿನ ಸಂಸ್ಕೃತಿ ಮತ್ತು ಭಾಷೆಗೆ ಸಂಬಂಧಪಟ್ಟ ಎಲ್ಲ ವಿಷಯಗಳು ಇಲ್ಲಿ ಚರ್ಚೆಯಾಗಬೇಕು. ಉತ್ತರ ಕರ್ನಾಟಕ, ಗಡಿನಾಡು, ಒಳನಾಡಿನವರ ಅನುಭವಗಳೇ ವಿಭಿನ್ನ. ಹೀಗಾಗಿ ಇವೆಲ್ಲವುಗಳ ಕುರಿತು ಚರ್ಚೆಯಾಗಬೇಕಾದ ಅಗತ್ಯವಿದೆ ಎಂದರು.

ಸಂತಸ, ಖೇದ ಎರಡೂ ಇದೆ: ಧಾರವಾಡದಲ್ಲಿ ನಡೆಯಲಿರುವ ಸಮ್ಮೇಳನದ ಅಧ್ಯಕ್ಷತೆ ವಹಿಸಿರುವುದಕ್ಕೆ ನನಗೆ ಸಂತಸ ಮತ್ತು ಖೇದ ಎರಡೂ ಇದೆ ಎಂದು ಡಾ. ಚಂದ್ರಶೇಖರ ಕಂಬಾರ ಹೇಳಿದರು. ನಮ್ಮೂರಿಗೆ ನಾನು ಬರುತ್ತಿರುವುದು ಸಂತೋಷದ ವಿಷಯ. ಆದರೆ, ಖ್ಯಾತ ಸಾಹಿತಿಗಳು, ಸಹಪಾಠಿಗಳಾದ ಎಂ.ಎಂ.ಕಲಬುರ್ಗಿ ಹಾಗೂ ಗಿರಡ್ಡಿ ಗೋವಿಂದರಾಜ ಅವರಂಥ ಸ್ನೇಹಿತರನ್ನು ಕಳೆದುಕೊಂಡಿರುವುದು ಖೇದದ ವಿಷಯ. ಇದರೊಂದಿಗೆ ನನಗೆ ಕಲಿಸಿದಂಥ ಒಬ್ಬ ಗುರುಗಳೂ  ಈಗಿಲ್ಲ. ಹೀಗಾಗಿ ಅದೊಂದು ಬೇಸರದ ವಿಷಯ ಎಂದರು.