Asianet Suvarna News Asianet Suvarna News

ಇಂದಿನಿಂದ 3 ದಿನ ಪೇಡಾ ನಗರಿಯಲ್ಲಿ ಸಾಹಿತ್ಯ ಸಮ್ಮೇಳನ

ಇಂದಿನಿಂದ 3 ದಿನ ಧಾರ​ವಾ​ಡ​ದಲ್ಲಿ ಅಕ್ಷರ ಜಾತ್ರೆ | ಜ್ಞಾನಪೀಠ ಪುರಸ್ಕೃತ ಡಾ. ಚಂದ್ರ​ಶೇಖರ ಕಂಬಾರ ಸರ್ವಾ​ಧ್ಯ​ಕ್ಷತೆ |  6 ದಶಕಗಳ ಬಳಿಕ ಪೇಡಾನಗರಿಯಲ್ಲಿ ಸಾಹಿತ್ಯ ಸಮ್ಮೇಳನ
 

Kannada Sahitya Sammelana begins in Dharwad from jan 4
Author
Bengaluru, First Published Jan 4, 2019, 9:18 AM IST
  • Facebook
  • Twitter
  • Whatsapp

ಧಾರವಾಡ (ಜ. 04): ಕರ್ನಾ​ಟಕ ಏಕೀಕರಣ ಹೋರಾಟದ ಕೇಂದ್ರ ಬಿಂದುವಾಗಿದ್ದ ಧಾರ​ವಾ​ಡ​ದ ನೆಲವೀಗ ಆರು ದಶ​ಕ​ಗಳ ಬಳಿಕ ಮತ್ತೊಂದು ‘ಅಕ್ಷರ ತೇರು’ ಎಳೆಯಲು ಸಜ್ಜಾಗಿ ನಿಂತಿದೆ. ನಾಡಿನ ಕಲೆ,​ ಸಂಸ್ಕೃತಿ, ಪರಂಪರೆಯ ಪ್ರಜ್ಞೆ​ಯನ್ನು ಜಾಗೃತಗೊಳಿಸುವ, ಮೂರು ದಿನ ಕಾಲ ನಡೆಯುವ 84ನೇ ಸಾಹಿತ್ಯ ಸಮ್ಮೇಳನಕ್ಕೆ ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಶುಕ್ರವಾರ ಅದ್ಧೂರಿಯ ಚಾಲನೆ ಸಿಗಲಿದೆ.

ಈಗಾಗಲೇ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳಾ​ಗಿದ್ದು, ಕನ್ನಡ ತೇರೆಳೆಯಲು ಪೇಢಾನಗರಿಗೆ ಸಾಹಿ​ತ್ಯಾ​ಸ​ಕ್ತರು ತಂಡೋ​ಪ​ತಂಡ​ವಾಗಿ ಬರು​ತ್ತಿ​ದ್ದಾ​ರೆ. 1957ರಲ್ಲಿ ರಾಷ್ಟ್ರಕವಿ ಕುವೆಂಪು ಸರ್ವಾಧ್ಯಕ್ಷತೆಯಲ್ಲಿ ಇಲ್ಲಿನ ಆರ್‌​ಎ​ಲ್‌​ಎಸ್‌ ಕಾಲೇಜು ಮೈದಾ​ನ​ದಲ್ಲಿ ಸಮ್ಮೇಳನ ನಡೆದಿತ್ತು. ಅದಾದ ಬಳಿಕ ಇದೀಗ ಇಲ್ಲಿನ ಕೃಷಿ ವಿವಿ ಆವರಣದಲ್ಲಿ ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯುತ್ತಿದೆ.

ಆರು ದಶಕಗಳ ಬಳಿಕ ನಡೆಯುತ್ತಿರುವ ಈ ಅಕ್ಷರ ಸಮ್ಮೇಳನಕ್ಕೆ ಇಡೀ ಧಾರ​ವಾಡ ಮದು​ವ​ಣ​ಗಿ​ತ್ತಿ​ಯಂತೆ ಸಜ್ಜಾ​ಗಿ ನಿಂತಿದೆ. ಕನ್ನಡ ಸಾಹಿತ್ಯ ಪರಿಷತ್‌, ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಸಮ್ಮೇಳನದ ಸಕಲ ಸಿದ್ಧತೆ ಸಂಪನ್ನವಾಗಿದೆ. ಹುಬ್ಬಳ್ಳಿ ಕೂಡ ಸರ್ವಾಲಂಕೃತಗೊಂಡಿದ್ದು, ಮಹಾನಗರದ ಎಲ್ಲೆಡೆ ಕನ್ನಡ ಬಾವುಟ ರಾರಾಜಿಸುತ್ತಿವೆ. ಮೆರ​ವ​ಣಿ​ಗೆ ಸಾಗುವ ರಸ್ತೆಯ ಎರಡೂ ಬದಿ ತಳಿ​ರು-ತೋರಣ, ತೆಂಗಿನ ಗರಿ ಕಟ್ಟಿದ್ದು ಹಬ್ಬದ ವಾತಾ​ವ​ರಣ ಸೃಷ್ಟಿ​ಯಾ​ಗಿದೆ.

ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಪತ್ನಿ ಸತ್ಯಭಾಮಾ, ಮಗಳು ಜಯಶ್ರೀ ಮತ್ತು ಮೊಮ್ಮಗಳು ಪ್ರೀತಿ ಅವರ ಜೊತೆ ಕುಟುಂಬ ಸಮೇತರಾಗಿ ಗುರುವಾರ ಸಂಜೆ ಧಾರವಾಡಕ್ಕೆ ಬಂದಿಳಿದ್ದು, ಅದ್ಧೂರಿ ಸ್ವಾಗತ ನೀಡಲಾಗಿದೆ. ಹುಬ್ಬಳ್ಳಿಗೆ ವಿಮಾನದ ಮುಖಾಂತರ ಆಗಮಿಸಿದ ಅವರನ್ನು ಧಾರವಾಡದಲ್ಲಿ ಸಾಹಿತಿಗಳು, ಕಲಾವಿದರು, ಜಿಲ್ಲಾಧಿಕಾರಿ ಸೇರಿ ಹಲವರು ಆತ್ಮೀಯ ಸ್ವಾಗತ ನೀಡಿದ್ದಾರೆ.

ಅಂಬಿಕಾತನಯದತ್ತ ಮುಖ್ಯ ವೇದಿಕೆ

84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕಾಗಿ ಧಾರವಾಡದ ಕಲೆ, ಸಂಸ್ಕೃತಿ, ಇತಿಹಾಸವನ್ನು ಬಿಂಬಿಸುವ ರೀತಿಯಲ್ಲಿ ವಿಶಿಷ್ಟವಾಗಿ ಸಿದ್ಧಗೊಂಡಿರುವ ಮುಖ್ಯವೇದಿಕೆಗೆ ಅಂಬಿಕಾತನಯದತ್ತ ಎಂದು ನಾಮಕರಣ ಮಾಡಲಾಗಿದೆ. ಮುಖ್ಯವೇದಿಕೆ ಪ್ರಾಂಗಣಕ್ಕೆ ಮಹಾಕವಿ ಪಂಪ ಮಹಾಮಂಟಪ, ಮಹಾದ್ವಾರಕ್ಕೆ ಡೆ.ಚನ್ನಬಸಪ್ಪ ಹೆಸರಿಡಲಾಗಿದೆ. ಇದಲ್ಲದೆ ಆಲೂರು ವೆಂಕಟರಾವ್‌, ಡಾ.ವಿ.ಕೃ.ಗೋಕಾಕ್‌, ಡಾ.ಎಂ.ಎಂ. ಕಲಬುರ್ಗಿ, ಡಾ.ಬೆಟಗೇರಿ ಕೃಷ್ಣಶರ್ಮ ಅವರ ಹೆಸರನ್ನು ಉಳಿದ ದ್ವಾರಗಳಿಗೆ ಇಡಲಾಗಿದೆ. ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಿರ್ಮಾಣವಾದ 1ನೇ ಸಮಾನಾಂತರ ವೇದಿಕೆಗೆ ಡಾ.ಶಂ.ಬಾ.ಜೋಶಿ, 2ನೇ ಸಮಾನಾಂತರ ವೇದಿಕೆಗೆ ಡಾ.ಡಿ.ಸಿ.ಪಾವಟೆ ಹೆಸರಿಡಲಾಗಿದ್ದು, ಡಾ.ಎಸ್‌.ಎಸ್‌.ಭೂಸನೂರಮಠ ಮಹಾಮಂಟಪ ಎಂದು ಪ್ರಾಂಗಣಕ್ಕೆ ನಾಮಕರಣ ಮಾಡಲಾಗಿದೆ. ಒಟ್ಟಾರೆ ಪ್ರಾಂಗಣಕ್ಕೆ ಡಾ.ಸರೋಜಿನಿ ಮಹಿಷಿ ಮಂಟಪ ಎಂದು ಹೆಸರಿಡಲಾಗಿದೆ. ಇಲ್ಲಿಯ ದ್ವಾರಕ್ಕೆ ಡಾ. ಗಿರಡ್ಡಿ ಗೋವಿಂದರಾಜ ಹೆಸರಿಟ್ಟಿರುವುದು ವಿಶೇಷ.

ಕುಮಾ​ರ​ಸ್ವಾಮಿ ಉದ್ಘಾಟನೆ

ಸಾಹಿತ್ಯ ಸಮ್ಮೇಳನವನ್ನು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಉಸ್ತು​ವಾರಿ ಸಚಿವ ಆರ್‌.ವಿ. ದೇಶ​ಪಾಂಡೆ, ಉಪ ಮುಖ್ಯ​ಮಂತ್ರಿ ಡಾ.ಜಿ. ಪರ​ಮೇ​ಶ್ವ​ರ, ಸಚಿ​ವ​ರಾದ ಜಯ​ಮಾಲಾ ಸೇರಿ​ ಹಿರಿಯ ಸಾಹಿ​ತಿ​ಗಳು ಭಾಗ​ವ​ಹಿ​ಸ​ಲಿ​ದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ 8.30ಕ್ಕೆ ಕರ್ನಾಟಕ ಕಾಲೇಜು ಮೈದಾನದಿಂದ ಕೃಷಿ ವಿಶ್ವವಿಶ್ವವಿದ್ಯಾಲಯ ಆವರಣದ ಪ್ರಧಾನ ವೇದಿಕೆವರೆಗೆ ಸರ್ವಾಧ್ಯಕ್ಷರ ಮೆರವಣಿಗೆ ಸಾರೋಟದಲ್ಲಿ ಅದ್ಧೂ​ರಿ​ಯಾಗಿ ನಡೆಯಲಿದೆ. ಎಲ್ಲ ಜಿಲ್ಲೆಗಳ 55 ಜನಪದ ಕಲಾತಂಡಗಳು, 750 ಕಲಾವಿದರು ಹಾಗೂ 1001 ಮಹಿಳೆಯರ ಕುಂಭಮೇಳದ ಸಾಥ್‌ ಇರಲಿದೆ.

120 ಕೌಂಟ​ರ್‌​ಗ​ಳಲ್ಲಿ ಊಟ

ಇನ್ನು ಊಟಕ್ಕಾಗಿ 106 ಕೌಂಟರ್‌ಗಳಿದ್ದು, ಉತ್ತರ ಕರ್ನಾಟಕದ ಶೈಲಿಯ ಭೋಜನಕ್ಕೆ ವ್ಯವಸ್ಥೆ ಇರಲಿದೆ. 500ಕ್ಕೂ ಹೆಚ್ಚು ಪುಸ್ತ​ಕ ಮಳಿಗೆ, 300 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳನ್ನು ಹಾಕ​ಲಾ​ಗಿದೆ.

ವ್ಯವಸ್ಥೆ 

ಸಮ್ಮೇಳನಕ್ಕೆ ಈಗಾಗಲೇ ವಿವಿಧ ಜಿಲ್ಲೆಗಳಿಂದ 17 ಸಾವಿರಕ್ಕಿಂತ ಹೆಚ್ಚಿನ ಸಾಹಿತ್ಯಾಸಕ್ತರು ನೋಂದಣಿ ಮಾಡಿಕೊಂಡಿದ್ದು ಹು-ಧಾ ಮಹಾನಗರದ ವಸತಿಗೃಹ, ಹೋಟೆಲ್‌, ಕಲ್ಯಾಣ ಮಂಪ​ಟ​ಗ​ಳಲ್ಲಿ ವಸತಿ ವ್ಯವಸ್ಥೆ ಮಾಡ​ಲಾ​ಗಿದೆ. ಇವ​ರನ್ನು ವೇದಿಕೆಯತ್ತ ಕರೆತರಲು ಸಾರಿಗೆ ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದೆ. ಅಲ್ಲದೆ 50 ಉಚಿತ ಬಸ್‌ ಸೇರಿ 250 ಬಸ್‌, ಮಿನಿಬಸ್‌ಗಳು ಸಮ್ಮೇಳನಕ್ಕಾಗಿ ಸಂಚಾರ ನಡೆಸಲಿವೆ. ವೇದಿಕೆ, ಮೆರವಣಿಗೆ, ಆಹಾರ, ವಸತಿ, ಸಾರಿಗೆ ಹಾಗೂ ಸ್ವಚ್ಛತೆ ಸೇರಿ ಎಲ್ಲ ವಿಭಾಗಗಳಲ್ಲಿ ಸೇವೆ ಸಲ್ಲಿಸಲು 3 ಸಾವಿರಕ್ಕಿಂತ ಸ್ವಯಂ ಸೇವಕರು ಅಣಿಗೊಂಡಿದ್ದಾರೆ.

ಕೃಷಿ ವಿವಿ ಆವರಣದಲ್ಲಿ 300*600 ಉದ್ದಗಲದ ಬೃಹತ್‌ ಮುಖ್ಯವೇದಿಕೆ ನಿರ್ಮಿಸಲಾಗಿದ್ದು, ಇಲ್ಲಿ 50 ಸಾವಿರ ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ 6 ಎಲ್‌ಇಡಿ ಸ್ಕ್ರೀನ್‌ ಅಳವಡಿಸಿ ವೀಕ್ಷಣೆಗೆ ಅನುಕೂಲ ಕಲ್ಪಿಸಲಾಗಿದೆ. ಮುಖ್ಯವೇದಿಕೆ ಸೇರಿ ಎರಡು ಸಮಾನಾಂತರ ವೇದಿಕೆಗಳಲ್ಲಿ ಗೋಷ್ಠಿ, ಸಂವಾದವನ್ನು ಏರ್ಪಡಿಸಲಾಗಿದೆ. ಸಂಜೆ ವೇಳೆಗೆ ಮೂರು ವೇದಿಕೆ ಹಾಗೂ ರಂಗಾಯಣ, ವಿದ್ಯಾವರ್ಧಕ ಸಂಘದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

2 ಸಾವಿರ ಪೊಲೀಸ್‌ ಭದ್ರತೆ

ಸಾಹಿತ್ಯ ಸಮ್ಮೇಳನದ ಭದ್ರತೆಗೆ 2 ಸಾವಿರ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಮೆರವಣಿಗೆ, ವೇದಿಕೆ ಕಾರ್ಯಕ್ರಮಮಳಿಗೆ ಹಾಗೂ ಊಟದ ವ್ಯವಸ್ಥೆ ಭದ್ರತೆಗೆ ವಿಶೇಷ ಒತ್ತು ನೀಡಲಾಗಿದೆ. ಅಗ್ನಿಶಾಮಕ ದಳದ 70 ಸಿಬ್ಬಂದಿ ನಿಯೋಜನೆಗೊಂಡಿದ್ದು 7 ಅಗ್ನಿಶಾಮಕ ದಳ ವಾಹನ, ಅಗ್ನಿ ಬೈಕ್‌ ವ್ಯವಸ್ಥೆ ಕೂಡ ಮಾಡಿಕೊಳ್ಳಲಾಗಿದೆ.
 

Follow Us:
Download App:
  • android
  • ios