ಬೆಂಗಳೂರು :  ಈಗಿನ ಕಾಲದಲ್ಲಿ ಸಮಾಜದ ಸ್ವಾಸ್ತ್ಯ ಕಾಪಾಡುವ, ಜನರ ಬದುಕು ಹಸನುಗೊಳಿಸಲು ಪೂರಕವಾದ ಪುಸ್ತಕಗಳು ಹೆಚ್ಚು ಹೊರಬರಬೇಕು ಎಂದು ನಿತ್ಯೋತ್ಸವ ಕವಿ ನಾಡೋಜ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಹೇಳಿದ್ದಾರೆ.

ಸಾವಣ್ಣ ಪ್ರಕಾಶನ ಸಂಸ್ಥೆ ಭಾನುವಾರ ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಾವಣ್ಣ ಶತಕ ಸಂಭ್ರಮ ಮತ್ತು ಪುಸ್ತಕ ಬಿಡುಗಡೆ’ ಸಮಾರಂಭದಲ್ಲಿ ಪ್ರಕಾಶನದಿಂದ ಹೊರತಂದಿರುವ 100ನೇ ಕೃತಿ ಕನ್ನಡಪ್ರಭ ಪುರವಣಿ ಸಂಪಾದಕ, ಸಾಹಿತಿ ಗಿರೀಶ್‌ ರಾವ್‌ (ಜೋಗಿ) ಅವರ ‘ಎಲ್‌’ ಕಾದಂಬರಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಲೇಖಕರಾದವರಿಗೆ ನಿರಂತರ ಅಧ್ಯಯನಶೀಲ ಗುಣ ಬಹಳ ಮುಖ್ಯ. ಸಮಾಜದ ಸ್ವಾಸ್ತ್ಯ ಕಾಪಾಡುವ, ಜನರ ಬದುಕು ಹಸನುಗೊಳಿಸಲು ಪೂರಕವಾದ ಕೃತಿಗಳನ್ನು ಲೇಖಕರು ಹೆಚ್ಚು ಹೆಚ್ಚು ಹೊರತರಬೇಕಾಗಿದೆ. ಹಿಂದಿನ ಸಾಂಪ್ರದಾಯಿಕ ಬರಹಗಳು ಈಗಿನ ವಿಭಿನ್ನ ಸದಭಿರುಚಿಯ ಓದುಗನಿಗೆ ರುಚಿಸುತ್ತಿಲ್ಲ. ಈಗಿನ ಓದುಗನಿಗೆ ಬೇಕಾದ ಬರವಣಿಗೆಗಳನ್ನು ನೀಡಿ ಅವರನ್ನು ಹಿಡಿದಿಡುವ ಶಕ್ತಿ ಈಗ ನಮ್ಮಂತಹ ಸಾಹಿತಿಗಳಿಗೂ ಸಾಧ್ಯವಿಲ್ಲ. ಹೊಸ ತಲೆಮಾರಿನ ಬರಹಗಾರರು ಈಗಿನ ಓದುಗನ ಸದಭಿರುಚಿಗೆ ತಕ್ಕಂತೆ ಸಾಹಿತ್ಯ ರಚಿಸಬೇಕು. ಅದನ್ನು ಜೋಗಿ ಅವರು ಮಾಡುತ್ತಿದ್ದಾರೆ. ಅವರ ಪುಸ್ತಕದ ಶೀರ್ಷಿಕೆ ‘ಎಲ್‌’ ಒಬ್ಬ ಲೇಖಕನ ಹೆಸರಾದರೂ, ಓದುತ್ತಾ ಹೋದಂತೆ ಎಲ್‌ ಎಂದರೆ ಲವ್‌ (ಪ್ರೀತಿ), ಲೈಫ್‌ (ಜೀವನ) ಎಂಬುದು ಕಾದಂಬರಿಯ ಗಾಢವಸ್ತುಗಳಾಗಿ ಕಾಣುತ್ತದೆ ಎಂದರು.

‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಮಾತನಾಡಿ, ಓದುಗ ಹೆಚ್ಚೆಚ್ಚು ಪುಸ್ತಕಗಳನ್ನು ಓದಿದಾಗ ಮುಂದೆ ಏನು ಓದಿದರೂ ಈಗಾಗಲೇ ಇದನ್ನು ಓದಿದ್ದೇನೆ ಎಂಬ ಕ್ಲೀಷೆಯ ಜಗತ್ತಿನಲ್ಲಿ ಸಿಕ್ಕಿಕೊಂಡು ಹೊಸತೇನನ್ನೋ ಬಯಸುತ್ತಾನೆ. ತನಗೇ ಗೊತ್ತಿಲ್ಲದೆ ಹೊಸ ಕಾದಂಬರಿ, ಕಥೆಗಳನ್ನು ಮನಸ್ಸಲ್ಲೇ ಕಟ್ಟಿಕೊಂಡು ಭ್ರಾಮಕ ಪ್ರಪಂಚ ಸೇರುತ್ತಾನೆ. ಅಂತಹ ಮಿತ್ಯ ಭ್ರಾಮಕ ಪ್ರಪಂಚದ ಅನುಭೂತಿಗೆ ಓದುಗನನ್ನು ಕರೆದೊಯ್ಯುವ ಕಾದಂಬರಿಯನ್ನು ಜೋಗಿ ಅವರು ನೀಡಿದ್ದಾರೆ. ‘ಎಲ್‌’ ದೀರ್ಘ ಕಾಲ ಕಾಡುವ ಹೊಸ ಶೈಲಿಯ ಕಥೆ, ಕವನ, ಕಾದಂಬರಿ, ಸಣ್ಣ ಕಥೆ ಮತ್ತು ನೈಜ ಘಟನೆಯ ಮಿಶ್ರಣವಾಗಿ ಎಂದು ವರ್ಣಿಹಿಸಿದರು.

ಕನ್ನಡದ ಪುಸ್ತಕಗಳ ಬರವಣಿಗೆ, ಮುದ್ರಣದಲ್ಲಿನ ಹಳೆಯ ಶೈಲಿಯ ಕ್ಲೀಷೆಯಲ್ಲಿ ಜೋಗಿ ಮತ್ತು ಸಾವಣ್ಣ ಪ್ರಕಾಶನದ ಜಮೀಲ್‌ ಅವರ ಜೋಡಿ ಹೊಸದಾಗಿ ಕಾಣಿಸುತ್ತಿದೆ. 100 ಪುಸ್ತಕ ಮುದ್ರಿಸಿರುವ ಪ್ರಕಾಶನದ ಕಾರ್ಯ ನಿರಂತರವಾಗಿ ಸಾಗಲಿ ಎಂದು ಆಶಿಸಿದರು.

‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಮಾತನಾಡಿ, ಕನ್ನಡದಲ್ಲಿ ಪುಸ್ತಕ ಬರೆದರೆ ಒಂದು ಸಾವಿರ ಪ್ರತಿಗಳೂ ರಾಟವಾಗುವುದಿಲ್ಲ ಎಂಬ ಪರಿಸ್ಥಿತಿ ಈಗಲೂ ಇದೆ. ಆದರೆ, ನನ್ನ ಪ್ರಕಾರ ಅದು ಪರಿಸ್ಥಿತಿಯಲ್ಲ, ಮನಸ್ಥಿತಿ. ಕನ್ನಡದಲ್ಲಿ ಓದುವ ಮನಸ್ಥಿತಿ ದೊಡ್ಡದಾಗಿಯೇ ಇದೆ. ಆದರೆ, ಓದುಗರಿಗೆ ಪುಸ್ತಕ ತಲುಪಿಸುವ ಕೆಲಸಗಳಾಗುತ್ತಿಲ್ಲ. ರಾಜ್ಯದಲ್ಲಿ 18 ಸಾವಿರ ವೈನ್‌ಶಾಪ್‌ಗಳಿದ್ದರೆ, ಕೇವಲ 52 ಪುಸ್ತಕ ಮಳಿಗೆಗಳಿವೆ. ಓದುಗರಿಗೆ ಪುಸ್ತಕ ಸಿಗದಿದ್ದರೆ ಅದು ಪ್ರಕಾಶಕರಿಗೇ ಅವಮಾನ. ಇತ್ತೀಚೆಗೆ ಆನ್‌ಲೈನ್‌ನಲ್ಲಿ ಪುಸ್ತಕಗಳ ಮಾರಾಟ ಆರಂಭವಾಗಿರುವುದು ಒಳ್ಳೆಯ ಬೆಳವಣಿ. ಇದರಿಂದ ಓದುಗರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ಇದಕ್ಕೂ ಮುನ್ನ ಸಾವಣ್ಣ ಪ್ರಕಾಶನ ಹೊರತಂದಿದ್ದ ಮೊದಲ ಪುಸ್ತಕ ಲೇಖಕ ಸುರೇಶ್‌ ಪದ್ಮನಾಭನ್‌ ಅವರ ‘ಐ ಲವ್‌ ಮನಿ’ ಪುಸ್ತಕದ ಮರು ಮುದ್ರಣವನ್ನು ಇದೇ ವೇಳೆ ಬಿಡಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪತ್ರಕರ್ತ ಶ್ರೀವತ್ಸ ನಾಡಿಗ್‌, ಜೋಗಿ, ಸಾವಣ್ಣ ಪ್ರಕಾಶನದ ಮುಖ್ಯಸ್ಥ ಜಮೀಲ್‌, ಸುರೇಶ್‌ ಪದ್ಮನಾಭನ್‌ ಉಪಸ್ಥಿತರಿದ್ದರು.