ಹಳೆ ನಿಯಮಗಳ ಪ್ರಕಾರ ರಾಜ್ಯ ಸರ್ಕಾರ ಕನ್ನಡ ಸಿನಿಮಾಗಳಿಗೆ ಮನರಂಜನಾ ತೆರಿಗೆ ವಿನಾಯಿತಿ ನೀಡಿ ಪರಭಾಷಾ ಸಿನಿಮಾಗಳಿಗೆ ಶೇ.30ರಷ್ಟುತೆರಿಗೆ ವಿಧಿಸುತ್ತಿತ್ತು. ಕನ್ನಡ ಪ್ರೇಕ್ಷಕರು ಕೇಂದ್ರ ಸರ್ಕಾರದ ಸೇವಾ ತೆರಿಗೆ ಶೇ.15 ಮತ್ತು ಅದಕ್ಕೆ ಸೆಸ್‌ಗಳು ಸೇರಿ ಶೇ.17ರಷ್ಟುಮಾತ್ರ ಪಾವತಿಸುತ್ತಿದ್ದರು. ಜಿಎಸ್‌ಟಿ ಜಾರಿಯಿಂದ ಎಲ್ಲಾ ಭಾಷಾ ಸಿನಿಮಾಗಳಿಗೂ ಏಕರೂಪದ ತೆರಿಗೆ ಅನ್ವಯಿಸಲಿದೆ. ಆದ್ದರಿಂದ ಸಹಜವಾಗಿಯೇ ಕನ್ನಡ ಸಿನಿಮಾಗಳ ಟಿಕೆಟ್‌ ದರ ಹೆಚ್ಚಳವಾಗಲಿದೆ ಮತ್ತು ಪರಭಾಷಾ ಸಿನಿಮಾಗಳ ಟಿಕೆಟ್‌ ದರ ಕಡಿಮೆಯಾಗಲಿದೆ.

ಬೆಂಗಳೂರು(ಮೇ 20): ಜು.1ರಿಂದ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾಗುತ್ತಿರುವ ಪರಿಣಾಮ ಪರಭಾಷಾ ಸಿನಿಮಾಗಳಿಗಿಂತ ಕನ್ನಡ ಸಿನಿಮಾಗಳಿಗೆ ಹೆಚ್ಚು ಪರಿಣಾಮ ಬೀರಲಿದೆ. ಕನ್ನಡ ಸಿನಿಮಾಗಳ ಟಿಕೆಟ್‌ ದರ ಈಗಿರುವುದಕ್ಕಿಂತ ದುಬಾರಿಯಾಗಲಿದೆ. ದೇಶದ ಎಲ್ಲಾ ಪ್ರಾದೇಶಿಕ ಸಿನಿಮಾಗಳ ಮೇಲೆ ಶೇ.28ರಷ್ಟುತೆರಿಗೆ ವಿಧಿಸುತ್ತಿರುವುದರಿಂದ ಕನ್ನಡ ಸಿನಿಮಾಗಳ ದರ ಕೂಡ ಜಾಸ್ತಿಯಾಗಲಿದೆ.

ಒಟ್ಟಾರೆ ಸಿನಿಮಾ ಟಿಕೆಟ್‌ ದರದ ಮೇಲೆ ಏಕರೂಪದ ಶೇ.28ರಷ್ಟುತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ, ಈಗಿರುವ ದರಕ್ಕಿಂತ ಕನ್ನಡ ಸಿನಿಮಾಗಳಿಗೆ ಶೇ.10ರಿಂದ 11ರಷ್ಟುತೆರಿಗೆ ಹೆಚ್ಚಳವಾಗಲಿದೆ. ಅದೇ ಕನ್ನಡೇತರ ಸಿನಿಮಾಗಳಿಗೆ ಕನ್ನಡ ಸಿನಿಮಾಗಳಿಗಿಂತ ಶೇ.3ರಿಂದ 5ರಷ್ಟುಟಿಕೆಟ್‌ ದರ ಕಡಿತವಾಗಲಿದೆ.

ಹೇಗೆ ಹೆಚ್ಚಳವಾಗಲಿದೆ?: ಹಳೆ ನಿಯಮಗಳ ಪ್ರಕಾರ ರಾಜ್ಯ ಸರ್ಕಾರ ಕನ್ನಡ ಸಿನಿಮಾಗಳಿಗೆ ಮನರಂಜನಾ ತೆರಿಗೆ ವಿನಾಯಿತಿ ನೀಡಿ ಪರಭಾಷಾ ಸಿನಿಮಾಗಳಿಗೆ ಶೇ.30ರಷ್ಟುತೆರಿಗೆ ವಿಧಿಸುತ್ತಿತ್ತು. ಕನ್ನಡ ಪ್ರೇಕ್ಷಕರು ಕೇಂದ್ರ ಸರ್ಕಾರದ ಸೇವಾ ತೆರಿಗೆ ಶೇ.15 ಮತ್ತು ಅದಕ್ಕೆ ಸೆಸ್‌ಗಳು ಸೇರಿ ಶೇ.17ರಷ್ಟುಮಾತ್ರ ಪಾವತಿಸುತ್ತಿದ್ದರು. ಜಿಎಸ್‌ಟಿ ಜಾರಿಯಿಂದ ಎಲ್ಲಾ ಭಾಷಾ ಸಿನಿಮಾಗಳಿಗೂ ಏಕರೂಪದ ತೆರಿಗೆ ಅನ್ವಯಿಸಲಿದೆ. ಆದ್ದರಿಂದ ಸಹಜವಾಗಿಯೇ ಕನ್ನಡ ಸಿನಿಮಾಗಳ ಟಿಕೆಟ್‌ ದರ ಹೆಚ್ಚಳವಾಗಲಿದೆ ಮತ್ತು ಪರಭಾಷಾ ಸಿನಿಮಾಗಳ ಟಿಕೆಟ್‌ ದರ ಕಡಿಮೆಯಾಗಲಿದೆ.

ಪರಿಹಾರವೇನು?: ರಾಜ್ಯ ಸರ್ಕಾರ ಅಥವಾ ಚಲನಚಿತ್ರ ವಾಣಿಜ್ಯ ಮಂಡಳಿಯು ಜಿಎಸ್‌ಟಿ ಕೌನ್ಸಿಲ್‌ಗೆ ಈ ಬಗ್ಗೆ ಮರು ಮನವಿ ಸಲ್ಲಿಸಬೇಕು ಅಥವಾ ರಾಜ್ಯ ಸರ್ಕಾರಗಳು ಸಬ್ಸಿಡಿ ರೂಪದಲ್ಲಿ ಟಿಕೆಟ್‌ ದರದ ಮೇಲೆ ವಿನಾಯಿತಿ ನೀಡಿದರೆ ಮಾತ್ರ ಕನ್ನಡ ಸಿನಿಮಾಗಳ ಟಿಕೆಟ್‌ ದರ ಕಡಿಮೆಯಾಗಲಿದೆ.

ಕನ್ನಡಪ್ರಭ ವಾರ್ತೆ
epaper.kannadaprabha.in