ಗುಜರಾತ್‌ (ನ. 02):  ಕೆವಾಡಿಯಾದಲ್ಲಿ ನಿರ್ಮಾಣವಾಗಿರುವ, ವಿಶ್ವದ ಎತ್ತರದ ಪ್ರತಿಮೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಸರ್ದಾರ್ ವಲ್ಲಭ ಭಾಯಿ ಅವರ ಪ್ರತಿಮೆ ಸಾಕಷ್ಟು ಸುಳ್ಳುಸುದ್ದಿಗಳಿಗೆ ಆಹಾರವಾಗುತ್ತಿದೆ. ಈ ಹಿಂದೆ ಸರ್ದಾರ್ ಪ್ರತಿಮೆ ಬಳಿ ಆದಿವಾಸಿ ಕುಟುಂಬ ಬಯಲಲ್ಲೇ ಆಹಾರ ಬೇಯಿಸುತ್ತಿರುವ ಫೋಟೋ ಶಾಪ್ ಮೂಲಕ ಎಡಿಟ್ ಮಾಡಿರುವ ಚಿತ್ರ ವೈರಲ್ ಆಗಿತ್ತು.

ಸದ್ಯ ಈ ಪ್ರತಿಮೆ ಬಳಿ ಹಾಕಲಾಗಿದ್ದ 10 ಭಾಷೆಯಲ್ಲಿ ‘ Statue of Unity' ಎಂದು ಬರೆದ ನಾಮಫಲಕದಲ್ಲಿ ಕನ್ನಡವೇ ಇರಲಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೂ ಮೊದಲು ‘Statue of Unity' ಎಂದು ತಮಿಳು ಲಿಪಿಯಲ್ಲಿ ತಪ್ಪಾಗಿ ಬರೆಯಲಾಗಿದೆ ಎಂಬ ವರದಿ ವೈರಲ್ ಆಗಿತ್ತು. ಇದು ಕನ್ನಡಿಗರ ಮತ್ತು ತಮಿಳಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

ಆದರೆ ನಿಜಕ್ಕೂ ನಾಮಫಲಕದಿಂದ ಕನ್ನಡವನ್ನು ಕೈಬಿಟ್ಟು ಕನ್ನಡಕ್ಕೆ ಅವಮಾನ ಮಾಡಲಾಗಿದೆಯೇ ಎಂದು ಪರಿಶೀಲಿಸಿದಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫಲಕದ ಚಿತ್ರ ನಕಲಿ, ಪ್ರತಿಮೆ ಉದ್ಘಾಟನೆ ಸಂದರ್ಭದಲ್ಲಿ ನಾಮಫಲಕವೇ ಇರಲಿಲ್ಲ ಎಂಬುದು ಪತ್ತೆಯಾಗಿದೆ.

ಈ ಬಗ್ಗೆ ಈ ಸರ್ದಾರ್ ಸರೋವರ ನಿಗಮದ ಹಿರಿಯ ಕಾರಿಯೊಬ್ಬರು ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿ, ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫಲಕ ನಕಲಿ. ವಾಸ್ತವವಾಗಿ ಉದ್ಘಾಟನೆಗೂ ಮುನ್ನ ಫಲಕವನ್ನೇ ಹಾಕಿರಲಿಲ್ಲ.  ಯಾರೋ ದುರುದ್ದೇಶದಿಂದ ನಕಲಿ ಚಿತ್ರವನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ’ ಎಂದಿದ್ದಾರೆ.