ಮತ್ತೆ ಡಬ್ಬಿಂಗ್ ಸದ್ದು ಮೊಳಗಿದೆ. ತಮಿಳಿನ ‘ಸತ್ಯದೇವ್ ಐಪಿಎಸ್’ ಚಿತ್ರದ ಬಳಿಕ ಈಗ ಹಾಲಿವುಡ್ ಸಿನೆಮಾ ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್ 8’ ಕನ್ನಡಕ್ಕೆ ಡಬ್ ಆಗಿ ಸೆ. 1 ರಂದು ಬಿಡುಗಡೆ ಆಗುತ್ತಿದೆ ಎನ್ನುವ ಸುದ್ದಿಯಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರದ ಟ್ರೇಲರ್ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಬೆಂಗಳೂರು: ಮತ್ತೆ ಡಬ್ಬಿಂಗ್ ಸದ್ದು ಮೊಳಗಿದೆ. ತಮಿಳಿನ ‘ಸತ್ಯದೇವ್ ಐಪಿಎಸ್’ ಚಿತ್ರದ ಬಳಿಕ ಈಗ ಹಾಲಿವುಡ್ ಸಿನೆಮಾ ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್ 8’ ಕನ್ನಡಕ್ಕೆ ಡಬ್ ಆಗಿ ಸೆ. 1 ರಂದು ಬಿಡುಗಡೆ ಆಗುತ್ತಿದೆ ಎನ್ನುವ ಸುದ್ದಿಯಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರದ ಟ್ರೇಲರ್ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಚಿತ್ರೋದ್ಯಮದ ತೀವ್ರ ವಿರೋಧದ ನಡುವೆಯೂ ಪರಭಾಷೆ ಚಿತ್ರಗಳನ್ನು ಡಬ್ ಮಾಡಿ ಕನ್ನಡಕ್ಕೆ ತರುವ ಪ್ರಕ್ರಿಯೆ ತೆರೆಮರೆಯಲ್ಲಿ ನಡೆಯುತ್ತಲೇ ಇದೆ. ದಕ್ಷಿಣ ಭಾರತದ ಹೆಸರಾಂತ ನಟ ಅಜಿತ್ ಕುಮಾರ್ ಅಭಿನಯದ ತಮಿಳು ಸಿನಿಮಾ ‘ಸತ್ಯದೇವ್ ಐಪಿಎಸ್’ ಇತ್ತೀಚೆಗಷ್ಟೇ ಕನ್ನಡಕ್ಕೆ ಡಬ್ ಆಗಿ ಅಧಿಕೃತವಾಗಿಯೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಅದಕ್ಕೆ ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ಸಿಗಲಿಲ್ಲ. ಮತ್ತೊಂದೆಡೆ ಕನ್ನಡ ಸಂಘಟನೆಗಳಿಂದ ತೀವ್ರ ವಿರೋಧವೂ ವ್ಯಕ್ತವಾಗಿತ್ತು.
ಈಗ ಹಾಲಿವುಡ್ ಸಿನಿಮಾ ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್ 8’ ಕನ್ನಡದಲ್ಲಿ ಡಬ್ ಆಗಿ ‘ವೇಗ ಮತ್ತು ಉದ್ವೇಗ 8’ ಹೆಸರಲ್ಲಿ ತೆರೆ ಕಾಣಲು ಸಿದ್ಧವಾಗಿದೆ ಎನ್ನುವ ಸುದ್ದಿ ಇದೆ. ಆನ್’ಲೈನ್ ತಾಣ ಯೂಟ್ಯೂಬ್’ನಲ್ಲಿ ಈಗಾಗಲೇ ಅದರ ಟ್ರೇಲರ್ ಲಾಂಚ್ ಆಗಿದೆ. ಇದನ್ನು ವೀಕ್ಷಿಸಿದವರಿಂದ ಅಚ್ಚರಿಯ ಜತೆಗೆ ವಿರೋಧವೂ ವ್ಯಕ್ತವಾಗಿದೆ.
ನಾವು ಡಬ್ಬಿಂಗ್ ಬೇಕು ಎನ್ನುತ್ತಿದ್ದೇವೆ ನಿಜ. ಆದರೆ ಕೆಟ್ಟ ಭಾಷೆಯಲ್ಲಿ ಡಬ್ಬಿಂಗ್ ಮಾಡುವುದಕ್ಕೆ ನಮ್ಮ ವಿರೋಧವಿದೆ. ಭಾಷೆಯೇ ಗೊತ್ತಿಲ್ಲದ ಪರಭಾಷೆ ಡಬ್ಬಿಂಗ್ ಕಲಾವಿದರು ತಮ್ಮದ್ದಲ್ಲಲದ ಭಾಷೆಗೆ ದ್ವನಿ ನೀಡಿದರೆ ಎಷ್ಟು ಕೆಟ್ಟದಾಗಿರುತ್ತದೆ ಎನ್ನುವುದಕ್ಕೆ ಸಿನಿಮಾ ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್ 8’ ಡಬ್ ಅವತರಣಿಕೆಯೇ ಸಾಕ್ಷಿ. ಇದರ ವಿರುದ್ಧ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎಲ್ಲ ಭಾಷೆಯ ಪ್ರಾದೇಶಿಕ ಸೆನ್ಸಾರ್ ಮಂಡಳಿಗೆಳಿಗೆ ಪತ್ರ ಬರೆಯಲಿದೆ.
ಕೃಷ್ಣೇಗೌಡ, ನಿರ್ಮಾಪಕ
ಅಂದಹಾಗೆ ಕನ್ನಡಕ್ಕೆ ಡಬ್ ಆಗುತ್ತಿರುವ ಹಾಲಿವುಡ್ ಸಿನಿಮಾ ಇದೇ ಮೊದಲ್ಲ. ‘ಸ್ಪೈಡರ್ ಮ್ಯಾನ್’ ಚಿತ್ರ ತೆರೆಮರೆಯಲ್ಲಿ ಕನ್ನಡಕ್ಕೆ ಡಬ್ ಆಗಿ, ಅದರ ಟ್ರೇಲರ್ ಯೂಟ್ಯೂಬ್’ನಲ್ಲಿ ಕಾಣಿಸಿಕೊಂಡಿತ್ತು. ಆದರೆ ಅದು ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಇದೀಗ, ಹಾಲಿವುಡ್ ನಟರಾದ ವಿನ್ ಡಿಸೇಲ್, ಡ್ವೆನ್ ಜಾನ್ಸನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಸಿನೆಮಾ ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್ 8’ ಸರದಿ. ಈ ಚಿತ್ರ ಮುಂಬೈಯಲ್ಲಿ ಕನ್ನಡಕ್ಕೆ ಡಬ್ ಆಗಿದೆ. ಬರಹಗಾರರು ಮತ್ತು ಕಂಠದಾನ ಕಲಾವಿದರಾದ ಜಯಶೀಲ ಸುವರ್ಣ ಮತ್ತು ಅರುಷಾ ಎನ್ ಶೆಟ್ಟಿ ಡಬ್ಬಿಂಗ್ ನಿರ್ದೇಶನ ಮಾಡಿದಲ್ಲದೇ, ಅವರೇ ಧ್ವನಿ ನೀಡಿದ್ದಾರೆನ್ನಲಾಗಿದೆ. ಟ್ರೇಲರ್’ನಲ್ಲಿ ಹೇಳಿರುವಂತೆ ಸೆ.1ರಂದು ಈ ಚಿತ್ರ ಕನ್ನಡದಲ್ಲಿ ರಿಲೀಸ್ ಆಗಲಿದೆ ಈ ನಡುವೆಯೇ ತಮಿಳು ನಟ ಅಜಿತ್ ಅಭಿನಯದ ಚಿತ್ರ ಕನ್ನಡಕ್ಕೆ ಡಬ್ ಆಗಿ ಬರಲು ರೆಡಿ ಆಗಿದೆ. ಈ ಹಿಂದೆ ‘ಸತ್ಯದೇವ್ ಐಪಿಎಸ್’ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿದ್ದ ನಿರ್ಮಾಪಕ ಕೃಷ್ಣಮೂರ್ತಿ ಅವರೇ ತಮಿಳಿನ ಆರಂಭಂ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರಂತೆ.
