ಶ್ರೀಗಳ ಕನ್ನಡ ಜಾಗೃತಿ ಕಾರ್ಯವಂತೂ ಶ್ಲಾಘನೀಯ. ನಾಡಿನ ಖ್ಯಾತ ಚಿಂತಕರನ್ನು, ಸಾಹಿತಿ, ಮಠಾಧೀಶರನ್ನು ಮತ್ತು ಕಲಾವಿದರನ್ನು ಗಡಿನಾಡಿಗೆ ಕರೆತಂದು ಕನ್ನಡ ಭಾಷಾ ಪ್ರಭಾವ ಹೆಚ್ಚುವಂತೆ ಮಾಡಿದ್ದಾರೆ. ಇದರ ಪರಿಣಾಮವಾಗಿ ಮರಾಠಿ ಪ್ರಭಾವಿತ ಗ್ರಾಮಗಳಲ್ಲಿ ಕನ್ನಡ ಮೆರೆಯುತ್ತಿದೆ.
ಗದಗಿನ ತೋಂಟದಾರ್ಯ ಸ್ವಾಮೀಜಿಯವರು ನಮ್ಮ ಗುರುಗಳು. ಅವರು ಗೋಕಾಕ್ ಚಳವಳಿಯಲ್ಲಿ ಚೂಣಿಯಲ್ಲಿದ್ದವರು. ಅವರು ನಮ್ಮನ್ನು ಚಿಂಚಣಿ ಮಠಕ್ಕೆ ಕಳುಹಿಸುವ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದರು. ‘ಲಿಂಗಾಯತರಿಗೆ ಬಸವಣ್ಣನೇ ಧರ್ಮಗುರು. ಅವರು ವಚನಗಳನ್ನು ರಚಿಸಿ ಕನ್ನಡವನ್ನು ದೇವಭಾಷೆಯನ್ನಾಗಿ ಮಾಡಿದರು. ಕನ್ನಡದ ಕೆಲಸವೆಂದರೆ ಬಸವಣ್ಣನ ಕೆಲಸ. ನೀವು ಚಿಂಚಣಿ ಮಠಕ್ಕೆ ಹೋಗುತ್ತಿದ್ದೀರಿ. ಆದರೆ ಅಲ್ಲಿ ಕನ್ನಡದ ಪರಿಸ್ಥಿತಿ ಸರಿ ಇಲ್ಲ. ಕನ್ನಡ ಕಂಪನ್ನು ಅಲ್ಲಿ ಪಸರಿಸಬೇಕಾಗಿದೆ’ ಎಂದಿದ್ದರು.
ನಮ್ಮ ಗುರುಗಳು ನಮಗೆ ಗುರು ದೀಕ್ಷೆಗೆ ಬದಲಾಗಿ ಕನ್ನಡ ದೀಕ್ಷೆ ಕೊಟ್ಟರು. ಅವರ ಮಾತಿಗೆ ಬದ್ಧನಾಗಿ 1997 ರಿಂದ ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಬಿತ್ತುವ ಕೆಲಸ ಮಾಡಿದ್ದೇವೆ. ಮರಾಠಿ ಹಳ್ಳಿಗಳಲ್ಲೂ ರಾಜ್ಯೋತ್ಸವ ಆಚರಿಸುವಂತೆ ಮಾಡಿದ್ದೇವೆ. ಮಠದಲ್ಲಿ ಕನ್ನಡ ಭವನವನ್ನು ಕಟ್ಟಿದ್ದೇವೆ. ಪುಸ್ತಕ ಪ್ರಕಾಶನ ಸ್ಥಾಪಿಸಿದ್ದೇವೆ. ಕನ್ನಡದ ಬೆಳವಣಿಗೆ ಶ್ರಮಿಸುತ್ತಿದ್ದೇವೆ.
- ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದಲ್ಲಿರುವ ಅಲ್ಲಮಪ್ರಭು ಸಿದ್ಧ ಸಂಸ್ಥಾನಮಠದ ಅಲ್ಲಮಪ್ರಭು ಮಹಾಸ್ವಾಮಿಗಳು ಹೀಗೆ ಮಾತನಾಡುತ್ತಿದ್ದರೆ ಯಾರೇ ಆದರೂ ಬೆರಗಾಗಬೇಕು. ಯಾಕೆಂದರೆ ಅವರು ಮಾಡಿರುವ ಕೆಲಸ ಅಷ್ಟು ಮಹತ್ವಪೂರ್ಣವಾದುದು. ಗಡಿ ಭಾಗದ ಜಿಲ್ಲೆಗಳಲ್ಲಿ ಕನ್ನಡ ಭಾಷಾ ಪ್ರೇಮವನ್ನು ಬೆಳೆಸುವುದು ಸುಲಭದ ಕೆಲಸವಲ್ಲ. ಅದರಲ್ಲೂ ಬೆಳಗಾವಿ ಭಾಗದಲ್ಲಿ ಮರಾಠಿ ಭಾಷಾ ಪ್ರಾಬಲ್ಯವಿರುವ ಹಳ್ಳಿಗಳಲ್ಲಿ ಕನ್ನಡದ ಕಂಪನ್ನು ಪಸರಿಸುವುದು ಅಸಾಧ್ಯವೇ ಸರಿ. ಆದರೆ ಅಲ್ಲಮಪ್ರಭು ಸ್ವಾಮೀಜಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ಮರಾಠಿ ಹಳ್ಳಿಗಳಲ್ಲಿ ಕನ್ನಡ ಪ್ರೇಮ ಬೆಳೆಸಿದ್ದಾರೆ.
ಮಠದೊಳಗೆ ಕನ್ನಡವೇ ಕಂಪು ಅವರ ಕನ್ನಡ ಪ್ರೇಮ ಜನರನ್ನು ಎಷ್ಟು ಸೆಳೆದಿದೆ ಎಂದರೆ ಸಿದ್ಧ ಸಂಸ್ಥಾನ ಮಠವನ್ನು ಜನ ಕನ್ನಡ ಮಠ ಎಂದೇ ಕರೆಯುತ್ತಾರೆ. ಯಾರೇ ಆಗಲಿ ಒಂದ್ಸಲ ಶ್ರೀಮಠವನ್ನು ಪ್ರವೇಶಿಸಿದರೆ ಸಾಕು ಕನ್ನಡ ಕಂಪು ಸೂಸುತ್ತದೆ. ಶ್ರೀಗಳು ಕನ್ನಡಪರವಾದ ಪುರಾತನ ದಾಖಲೆಗಳನ್ನು ಸಂಗ್ರಹಿಸುವಲ್ಲಿ ವಿಶೇಷ ಆಸಕ್ತಿವುಳ್ಳವರಾಗಿದ್ದು, ಕನ್ನಡದ ಇತಿಹಾಸವನ್ನು ತಿಳಿಸುವ ಅಪರೂಪದ ದಾಖಲೆಗಳು ಅವರ ಬಳಿ ಇವೆ. ಮಠದಲ್ಲಿ ಅವರು ಬಾಳಿನ ಬುತ್ತಿ ಕಲಿಕಾ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಅದರ ಮೂಲಕ ಪುಟಾಣಿಗಳಿಗೆ ಅಕ್ಷರಾಭ್ಯಾಸದ ಜೊತೆಗೆ ಧಾರ್ಮಿಕ ಸಂಸ್ಕಾರವನ್ನೂ ನೀಡುತ್ತಿದ್ದಾರೆ.
ಶ್ರೀಗಳ ಕನ್ನಡ ಜಾಗೃತಿ ಕಾರ್ಯವಂತೂ ಶ್ಲಾಘನೀಯ. ನಾಡಿನ ಖ್ಯಾತ ಚಿಂತಕರನ್ನು, ಸಾಹಿತಿ, ಮಠಾಧೀಶರನ್ನು ಮತ್ತು ಕಲಾವಿದರನ್ನು ಗಡಿನಾಡಿಗೆ ಕರೆತಂದು ಕನ್ನಡ ಭಾಷಾ ಪ್ರಭಾವ ಹೆಚ್ಚುವಂತೆ ಮಾಡಿದ್ದಾರೆ. ಇದರ ಪರಿಣಾಮವಾಗಿ ಮರಾಠಿ ಪ್ರಭಾವಿತ ಗ್ರಾಮಗಳಲ್ಲಿ ಕನ್ನಡ ಮೆರೆಯುತ್ತಿದೆ. 36 ಮೌಲಿಕ ಗ್ರಂಥಗಳು ಸಮರ್ಪಣೆ ಕನ್ನಡಪರ ಚಿಂತನೆಯ ಸಮಾನ ಮನಸ್ಕರನ್ನು ಒಳಗೊಂಡ ಗಡಿ ಕನ್ನಡಿಗರ ಬಳಗ ಸ್ಥಾಪಿಸಿಕೊಂಡು, ಕನ್ನಡ ಭಾಷೆ, ಸಂಸ್ಕೃತಿ ಶಿಕ್ಷಣ ಪ್ರಸಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲಮಪ್ರಭು ಜನ ಕಲ್ಯಾಣ ಸಂಸ್ಥೆಯ ಕನ್ನಡ ಜಾಗೃತಿ ಪುಸ್ತಕ ಮಾಲೆಯ ಮೂಲಕ ಇದುವರೆಗೆ ಆಧುನಿಕ ಕರ್ನಾಟಕದ ಆತಂಕಗಳು, ಕನ್ನಡತನ ಮತ್ತು ಭಾರತೀಯತೆ, ಮಹಾಜನ ವರದಿ ಒಂದು ಅವಲೋಕನ, ಕನ್ನಡ ಕೋಟೆ ಕೆಎಲ್‌ಇ, ನಾಥ ಸಂಪ್ರದಾಯದ ಇತಿಹಾಸ, ರಂಗ ಭೂಮಿ-ಕನ್ನಡ ಸಂವೇದನೆ, ನಮ್ಮ ನಾಡು, ನುಡಿ ಮತ್ತು ಗಡಿ, ಕನ್ನಡ ಕಟ್ಟೋಣ, ಕರ್ನಾಟಕ ಏಕೀಕರಣ ಚಳುವಳಿ, ಕನ್ನಡ ಕನ್ನಡಿಗ, ಕರ್ನಾಟಕ, ಕರ್ನಾಟಕ ಏಕೀಕರಣ ಚಳವಳಿ ಮತ್ತು ಮಹಿಳೆ, ಮಹದಾಯಿ, ನೀರಿಗಾಗಿ ಹೋರಾಟ ಮತ್ತು ಕನ್ನಡಕ್ಕೆ ಕೈ ಎತ್ತು, ಮೊದಲಾದ ನಾಡಿನ ಸ್ಥಿತಿಗತಿ ಮೇಲೆ ಬೆಳಕು ಚೆಲ್ಲುವ 36 ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ.
ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಂದು ಕನ್ನಡ ಕುರಿತಾದ ಸಾಹಿತ್ಯಿಕ ಪುಸ್ತಕಗಳನ್ನು ಶ್ರೀ ಮಠವು ಬಿಡುಗಡೆ ಮಾಡುತ್ತಾ ಬಂದಿದೆ. ಅದರಂತೆ ಈ ಬಾರಿ ಸಾಹಿತಿ ಗೋಪಾಳ ಅಬಾಜಿ ಜೋಗಳೆಕರ ಮರಾಠಿಯಲ್ಲಿ ರಚಿಸಿದ ಕರ್ನಾಟಕ ಚಾ ಗೋಷ್ಠಿ ರೂಪ ಇತಿಹಾಸ(ಮರಾಠಿ) ಹಾಗೂ ನಾಡೋಜ ಎಂ.ಚಿದಾನಂದಮೂರ್ತಿ ಬರೆದಿರುವ ಕನ್ನಡ ಸಂಸ್ಕೃತಿಯ ಹಿರಿಮೆ ಗರಿಮೆ ಪುಸ್ತಕವು ಪ್ರಕಟಗೊಂಡಿದೆ.
ಮರಾಠಿಯಲ್ಲಿಯೇ ಇರುವ ಕರ್ನಾಟಕ ಚಾ ಗೋಷ್ಠಿ ರೂಪ ಇತಿಹಾಸ ಪುಸ್ತಕವನ್ನು ಗೋಪಾಳ ಅಬಾಜಿ ಜೋಗಳೆಕರ ಅವರು 1940ರಲ್ಲಿಯೇ ರಚನೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ಕನ್ನಡನಾಡು, ಕನ್ನಡ ಸಾಹಿತ್ಯ, ಕನ್ನಡದ ಇತಿಹಾಸದ ಕುರಿತು ಮಾಹಿತಿ ಇದೆ. ಇದನ್ನು ಅಂದಿನ ಮಹಾರಾಷ್ಟ್ರ ಸರ್ಕಾರ ಶಾಲಾ ಪಠ್ಯಪುಸ್ತಕದಲ್ಲಿಯೂ ಅಳವಡಿಸಿತ್ತು. ಈಗ ಈ ಪುಸ್ತಕವನ್ನು ಶ್ರೀಗಳೇ ಮರುಮುದ್ರಣ ಮಾಡಿಸಿ ಬಿಡುಗಡೆ ಮಾಡುತ್ತಿದ್ದಾರೆ. ಅಲ್ಲದೇ ಆ ಭಾಗದ ಜನರಿಗೆ ಉಚಿತ ಪುಸ್ತಕಗಳನ್ನು ನೀಡಿ ಓದಿಸುತ್ತಾರೆ. ಶ್ರೀಗಳ ಈ ಕನ್ನಡ ಸೇವೆ ನಿಜಕ್ಕೂ ಶ್ಲಾಘನೀಯ. ದೂ- 9741266454
-ರಮೇಶ ಕವಟಗಿ ಚಿಕ್ಕೋಡಿ, ಕನ್ನಡಪ್ರಭ
