ಹಿಂದಿ ದಿವಸ ಆಚರಿಸಿರುವ ಮೋದಿ ಅವರೇ ಕನ್ನಡ, ತಮಿಳು ದಿನ ಯಾವಾಗ ಆಚರಿಸುತ್ತೀರಿ ಎಂದ ಕುಮಾರಸ್ವಾಮಿ| ಎಚ್‌ಡಿಕೆಗೆ ಕೆಲಸವಿಲ್ಲ, ಹೀಗಾಗಿ ಮೋದಿ ಟೀಕಿಸ್ತಾರೆ: ಸಚಿವ ರವಿ|
ಬೆಂಗಳೂರು[ಸೆ.15]: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೆಲಸ ಇಲ್ಲದ ಸ್ಥಿತಿಗೆ ಬಂದು ನಿಂತಿದ್ದಾರೆ. ಹಾಗಾಗಿ ಪ್ರಧಾನಿ ಮೋದಿ ಅವರನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ.
ಅತ್ತ ದೇಶಕ್ಕೊಂದೇ ಭಾಷೆ ಎಂದ ಶಾ: ಇತ್ತ ಹಿಂದಿ ದಿನ ಆಚರಣೆಗೆ ಸಿದ್ದು ವಿರೋಧ!
‘ಹಿಂದಿ ದಿವಸ ಆಚರಿಸಿರುವ ಮೋದಿ ಅವರೇ ಕನ್ನಡ, ತಮಿಳು ದಿನ ಯಾವಾಗ ಆಚರಿಸುತ್ತೀರಿ’ ಎಂದು ಕುಮಾರಸ್ವಾಮಿ ಅವರು ಮಾಡಿರುವ ಟ್ವೀಟ್‌ಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರತಿಕ್ರಿಯಿಸಿದ ಅವರು, ಮೋದಿ ಅವರು ಕನ್ನಡ ರಾಜ್ಯೋತ್ಸವದ ದಿನ ಕನ್ನಡಿಗರಿಗೆ, ಪೊಂಗಲ್ ಹಬ್ಬದ ದಿನ ತಮಿಳರಿಗೆ, ಓಣಂ ದಿನ ಮಲೆಯಾಳಿಗಳಿಗೂ ಶುಭಾಶಯ ಕೋರುತ್ತಾ ಬಂದಿದ್ದಾರೆ. ದೇಶದ ವಿಭಿನ್ನ ಭಾಷೆ ಮತ್ತು ಸಂಸ್ಕೃತಿಗಳ ವಿಚಾರದಲ್ಲಿ ಕುಮಾರಸ್ವಾಮಿ ಅವರಿಗಿಂತ ಹೆಚ್ಚು ಗೌರವ ಮೋದಿ ಅವರಿಗಿದೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿದಾಗಲೇ ಕುಮಾರಸ್ವಾಮಿ ಅವರ ಕನ್ನಡ ಕಾಳಜಿ ಎಷ್ಟಿದೆ ಎಂಬುದು ಗೊತ್ತಾಗಿದೆ. ಕುಮಾರಸ್ವಾಮಿ ಅವರು ಕೆಲಸ ಇಲ್ಲದ ಪರಿಸ್ಥಿತಿಗೆ ಬಂದಿದ್ದಾರೆ. ಈ ಹೇಳಿಕೆ ನೀಡಿದರೆ ಅವರ ಬಡಗಿಗಳು ಜಗಳಕ್ಕೆ ಬರಬಹುದು ಎಂದರು.
ಶಾ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಿಂದಿ ದಿನದ ಕಾರ್ಯಕ್ರಮದಲ್ಲಿ ‘ದೇಶದ ಒಗ್ಗಟ್ಟಿಗೆ ಇಡೀ ದೇಶವನ್ನು ಒಂದು ಭಾಷೆ ಮಾತ್ರ ಪ್ರತಿನಿಧಿಸುವ ಅಗತ್ಯವಿದೆ’ ಎಂದು ಯಾವ ಸಂದರ್ಭದಲ್ಲಿ, ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಬಿಜೆಪಿ ಯಾವುದೇ ಭಾಷೆಗೆ ಅಡ್ಡಿಯಾಗುವ ನಿಲುವು ತಳೆಯುವುದಿಲ್ಲ ಎಂದು ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದರು.
ಒಂದು ದೇಶ, ಒಂದೇ ಭಾಷೆ: ಹಿಂದಿ ರಾಷ್ಟ್ರೀಯ ಭಾಷೆಯಾಗಿಸಲು ಶಾ ಮನವಿ
ಬಿಜೆಪಿ ಎಲ್ಲ ಭಾಷೆಗಳಿಗೂ ಒತ್ತುಕೊಡುತ್ತದೆ. ಯಾವುದೇ ಭಾಷೆಗೆ ಅಡ್ಡಿಯಾಗುವ ನಿಲುವು ತಳೆಯುವುದಿಲ್ಲ. ದೇಶದ ಬಹು ಸಂಸ್ಕೃತಿ, ಭಾಷೆಯ ಬಗ್ಗೆ ಹಿಂದೆಯೂ ಚರ್ಚೆಗಳಾಗಿವೆ. ಆರ್‌ಎಸ್‌ಎಸ್ ಕೂಡ ಮಾತೃಭಾಷಾ ಶಿಕ್ಷಣಕ್ಕೆ ಒತ್ತು ಕೊಟ್ಟಿದೆ ಎಂದರು.
ಕನ್ನಡದಲ್ಲಿ ಬ್ಯಾಂಕ್ ಪರೀಕ್ಷೆಗೆ ಸ್ವಾಗತ:
ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿರುವುದು ಸ್ವಾಗತಾರ್ಹ.ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡಲ್ಲೂ ಬರೆಯಲು ಅವಕಾಶ ನೀಡುವಂತೆ ಮಾಡಿದ್ದ ಮನವಿಗೆ ಈ ಹಿಂದೆಯೂ ಸ್ಪಂದಿಸಿದ್ದರು, ಈಗ ಮತ್ತೆ ಪೂರಕವಾಗಿ ಸ್ಪಂದಿಸಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಸಚಿವ ರವಿ ಹೇಳಿದರು.
