ಶಂಕರ್‌ ನಾಗ್‌ ಅವರ ಒಂದು ಕರೆಗೆ ಓಗೊಟ್ಟು ತಮ್ಮ ಉದ್ಯೋಗವನ್ನು ಬಿಟ್ಟು ಮುಂಬೈನಿಂದ ಗಾಂಧಿನಗರಕ್ಕೆ ಬಂದವರು ಮನ್‌ದೀಪ್‌ರಾಯ್‌. ಈಗ ಹಲವು ಕನ್ನಡ ಸಿನಿಮಾಗಳಿಂದ ಹಾಸ್ಯನಟರಾಗಿ ಜನಪ್ರಿಯತೆ ಪಡೆದು ನಮ್ಮೊಳಗೆ ಒಂದಾಗಿರುವ ಅವರು ತಮ್ಮ ಈ ಚಿತ್ರರಂಗದ ಪಯಣವನ್ನು ಇಲ್ಲಿ ಹಂಚಿಕೊಂಡಿದ್ದಾರೆ

-ಮನ್ದೀಪ್ ರಾಯ್‌
ಕನ್ನಡವೇ ಬರದ, ಮುಂಬೈ ಮೂಲದ ಕಲಾವಿದನೊಬ್ಬ ಕರ್ನಾಟಕದಲ್ಲಿ ಪ್ರಮುಖ ಪೋಷಕ ನಟನಾಗಿ ಮಿಂಚಿನ ಓಟ ನಡೆಸುತ್ತಿದ್ದೇನೆ ಎಂದರೆ ಇದು ನಾಡಿನ ಶಕ್ತಿಯೇ. ನನ್ನ ಬಾಳಿನ ದೊಡ್ಡ ತಿರುವಾದವರು ಬಾಲ್ಯದ ಆತ್ಮೀಯ ಸ್ನೇಹಿತರು ಮತ್ತು ಕರ್ನಾಟಕದ ಇಬ್ಬರು ಮೇರು ನಟ ಸಹೋದರರಾದ ಶಂಕರ್‌ನಾಗ್‌ ಹಾಗೂ ಅನಂತನಾಗ್‌. ನಾನು ಮೂಲತಃ ಮುಂಬೈನವನು. ಅಲ್ಲಿನ ತಾರದೇವ ರಸ್ತೆಯಲ್ಲಿ ನಮ್ಮ ಮನೆಯಿತ್ತು, ಅಜ್ಜಿ, ತಾತ, ಅಪ್ಪ, ಅಮ್ಮ, ಚಿಕ್ಕಮ್ಮ ಎಲ್ಲರೂ ಒಟ್ಟಾಗಿ ಬೆಳೆದ ಕೂಡು ಕುಟುಂಬ ನಮ್ಮದು. ಬಾಲ್ಯದಲ್ಲೇ ಕರಾಟೆ, ಕುಂಗ್‌ಫä ವಿದ್ಯೆಗಳನ್ನು ಬಹಳ ಇಷ್ಟಪಟ್ಟು ಅಭ್ಯಾಸ ಮಾಡುತ್ತಿದ್ದೆ. ಒಂಬತ್ತನೇ ವಯಸ್ಸಿಗೇ ನನಗೆ ರಂಗಭೂಮಿಯ ಮೇಲೆ ಒಲವು ಮೂಡಿತು. ಬಾಲ್ಯದಿಂದಲೇ ಮಿಮಿಕ್ರಿಗಳನ್ನು ಮಾಡುತ್ತಿದ್ದೆ, ಸಾಕಷ್ಟುರಂಗತಂಡಗಳಲ್ಲಿ ಪಾತ್ರಗಳನ್ನೂ ನಿರ್ವಹಿಸಲು ಆರಂಭಿಸಿದೆ.

ಒಮ್ಮೆ ರಂಗತಂಡದಲ್ಲಿ ತಾಲೀಮು ನಡೆಸುವ ವೇಳೆ ಪರಿಚಯ­ವಾದ ಅದ್ಭುತ ವ್ಯಕ್ತಿತ್ವವೇ ಶಂಕರ್‌ನಾಗ್‌. ನಮ್ಮ ಸ್ನೇಹ ಚಿಗುರಲು ರಂಗಭೂಮಿ ಸೇತುವೆಯಾಯಿತು. ಒಮ್ಮೆ ನನ್ನ ನಿರ್ದೇಶನದಲ್ಲಿ ನಾಟಕದ ತಾಲೀಮು ನಡೆಯುತ್ತಿತ್ತು. ಆ ನಾಟಕದಲ್ಲಿ ಹಾಸ್ಯ ನಟ ಮತ್ತೊಂದು ಗಂಭೀರ ಪಾತ್ರವಿತ್ತು. ನಾನು ಹಾಸ್ಯನಟನ ಪಾತ್ರ ಮಾಡುವುದು ನಿಶ್ಚಿತವಾಗಿತ್ತು, ಗಂಭೀರ ನಟನ ಪಾತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದೆ. ಶಂಕರ್‌ನಾಗ್‌ ಸಿಕ್ಕಾಗ, ‘‘ನೀನೆ ಈ ಪಾತ್ರ ಮಾಡು, ಪಾತ್ರಕ್ಕೆ ತಕ್ಕ ಮೈಕಟ್ಟಿನ ಯುವಕ ನೀನೆ'' ಎಂದು ಬೇಡಿಕೆ ಇಟ್ಟೆ. ಆರಂಭದಲ್ಲಿ ಯೋಚಿಸಿದ ಶಂಕರ್‌ ನಂತರ ಒಪ್ಪಿದರು. 

ವರ್ಷಾನಂತರ ಶಂಕರ್‌ನಾಗ್‌ ಕುಟುಂಬದವರು ಬೆಂಗಳೂರಿಗೆ ಬಂದರು. ನಾನು ಕಂಪ್ಯೂಟರ್‌ ಸೈನ್ಸ್‌, ಆಟೋಮೊಬೈಲ್ಸ್‌ ಎಂಜಿನಿಯರಿಂಗ್‌ ಪದವಿ ಪಡೆದೆ. ನಂತರ ಐಬಿಎಂ ಹಾಗೂ ಟಿಸಿಎಸ್‌ ಕಂಪನಿಗಳಲ್ಲಿ ಕೆಲಸ ಮಾಡಿದೆ. ಕಂಪನಿ ಮುಖ್ಯಸ್ಥರ ಸಹಾಯದಿಂದ ನಿತ್ಯ ರಾತ್ರಿ ಪಾಳಿ ಹಾಕಿಸಿಕೊಂಡು ಮಧ್ಯಾಹ್ನ ರಂಗ ತಾಲೀಮು, ಸಂಜೆ ನಾಟಕ ಪ್ರದರ್ಶನ ಮುಗಿದ ನಂತರ ಕಚೇರಿ. ಆ ವೇಳೆÜಗಾಗಲೇ ಶಂಕರ್‌ ಬೆಂಗಳೂರಿನಲ್ಲಿ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ನನಗೂ ಬೆಂಗಳೂರಿಗೆ ಬರಲು ಆಹ್ವಾನವಿತ್ತರು. ಒಂದು ಕ್ಷಣವೂ ಯೋಚಿಸದೇ ಹ್ಞುಂ ಎಂದೆ. ಬೆಂಗಳೂರಿಗೆ ಹೆಜ್ಜೆ ಇಡುತ್ತಿದ್ದಂತೆ ಶಂಕರ್‌ ನಿರ್ದೇಶನದ ಮೊದಲ ಚಿತ್ರ ‘ಮಿಂಚಿನ ಓಟ' ಸೆಟ್ಟೇರಿತ್ತು. ನನಗೂ ಪಾತ್ರ ನೀಡಿದರು. ಕನ್ನಡ ಬರುವುದಿಲ್ಲ ಎಂಬ ಬಗ್ಗೆ ಕೊಂಚವೂ ಬೇಸರಿಸದೇ ಅವಕಾಶ ನೀಡಿದ್ದು ನನ್ನ ಅದೃಷ್ಟವೇ. ‘ಮಿಂಚಿನ ಓಟ' ಚಿತ್ರಕ್ಕೆ ಒಟ್ಟು ಎಂಟು ಪ್ರಶಸ್ತಿಗಳು ಸಂದವು. ನಾನು ಪೋಷಕ ಪಾತ್ರದಲ್ಲಿ ಅಭಿನಯಿಸಿದ ಮೊದಲ ಚಿತ್ರಕ್ಕೆ ಪ್ರಶಸ್ತಿ ಬಂದದ್ದು ನನಗೇ ಸಿಕ್ಕಿದಷ್ಟುಸಂತೋಷ­ವಾಯಿತು. ನಾನು ಕನ್ನಡ ಚಿತ್ರರಂಗದಲ್ಲಿ ನೆಲೆಸಬಲ್ಲೆ ಎಂಬ ಧೈರ್ಯ ಮೂಡಿದ್ದು ಸಹ ಈ ಸಮಯದಲ್ಲೇ. ನಂತರ ಹಲವು ಕನ್ನಡ ಚಿತ್ರಗಳಲ್ಲಿ ಅವಕಾಶಗಳು ಒದಗಿಬಂದವು.

ಆರಂಭದಲ್ಲಿ ಕನ್ನಡ ಭಾಷೆಯ ಕಿಂಚಿತ್‌ ಜ್ಞಾನವೂ ನನಗಿರಲಿಲ್ಲ. ಒಮ್ಮೆ ನಾನು ಪೋಷಕ ನಟನ ಪಾತ್ರ ನಿರ್ವಹಿಸುತ್ತಿದ್ದ ಸಿನಿಮಾದ ಚಿತ್ರೀಕರಣ ಸಾಗಿತ್ತು. ಸಹ ನಿರ್ದೇಶಕರೊಬ್ಬರು ಕನ್ನಡದಲ್ಲಿರುವ ಡೈಲಾಗ್‌ ಸ್ಕಿ್ರಪ್ಟನ್ನು ಕೊಟ್ಟರು. ಅದನ್ನು ನೋಡಿ, ‘ನನಗೆ ಕನ್ನಡ ಬರಲ್ಲಪ್ಪ, ಹಿಂದಿಯಲ್ಲಿರುವ ಸ್ಕಿ್ರಪ್ಟ್‌ ಕೊಡು' ಎಂದೆ. ‘‘ಕನ್ನಡ ಬರೋ ಜನರಿಗೇ ಅವಕಾಶ ಇಲ್ಲದೇ ಖಾಲಿ ಕೂತವ್ರೆ, ಕನ್ನಡ ಬರದಿರೋ ನಿಮಗೆ ಅವಕಾಶ ಸಿಗುತ್ತಾ,'' ಎಂದು ಟೀಕಿಸಿದ್ದ. ಈ ಮಾತುಗಳಿಂದ ಅಂದು ಸಾಕಷ್ಟುನೋವಾಗಿತ್ತು, ನಂತರ ಅದನ್ನೇ ಸವಾಲಾಗಿ ಸ್ವೀಕರಿಸಿದೆ. ಇಂತಹ ಸನ್ನಿವೇಶಗಳೆಲ್ಲಾ ನನ್ನ ಕನ್ನಡ ಕಲಿಕೆಗೆ ಇನ್ನಷ್ಟುಪ್ರೇರಣೆ ನೀಡಿವೆ.

ಎಂ ಎಸ್‌ ಸತ್ಯು ನಿರ್ದೇಶನದ ಸಿನಿಮಾ ವೇಳೆ ಹಿರಿಯ ನಟ ಶಿವರಾಂ ಅವರು ಕನ್ನಡ ಕಲಿಯುವಂತೆ ಸಲಹೆ ನೀಡಿದರು. ಒಂದೇ ವರ್ಷದ ನಂತರ ‘ಗೀತಾ' ಸಿನಿಮಾ ಚಿತ್ರೀಕರಣಕ್ಕಾಗಿ ಸೆಟ್‌ನಲ್ಲಿ ಮತ್ತೆ ಭೇಟಿಯಾದೆವು. ಈ ವೇಳೆ ನನ್ನ ಕನ್ನಡವನ್ನು ಕೇಳಿ ಶಿವರಾಂ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂದಿಗೂ ಅವರು ನನ್ನ ಜೀವನದ ದ್ರೋಣಾಚಾರ್ಯರು. ಇದರ ನಡುವೆ ಶಂಕರ್‌ ತಾಯಿ ಸಹ ಕನ್ನಡ ಕಲಿಯಲು ಮೊದಲ ಶಿಕ್ಷಕಿ ಹಾಗೂ ಪ್ರೇರೇಪಕಿ. ಅವರು ಕನ್ನಡದ ಪುಸ್ತಕಗಳನ್ನು ತಂದುಕೊಡುತ್ತಿದ್ದರು. ನನ್ನ ಕಲಿಕೆಯ ಹಂತ ಪರಿಶೀಲಿಸುತ್ತಿದ್ದರು. ಅವರ ಕುಟುಂಬದಲ್ಲಿ ನಾನು ಒಬ್ಬನಾಗಿದ್ದೆ.

ಸಿನಿಮಾ ನಂಟಿನ ನಡುವೆ ನನ್ನದೂ ಕುಟುಂಬದ ಆಸೆ ಚಿಗುರಿದ್ದು 1986ರಲ್ಲಿ. ಇದು ಮಹತ್ವದ ಬಾಳತಿರುವು. ನಮ್ಮದು ಪ್ರೇಮ ವಿವಾಹ. ಪತ್ನಿ ಶಾಲಾ ಶಿಕ್ಷಕಿ. 1985ರಲ್ಲಿ ಪರಿಚಯವಾಗಿ, 1986 ಅಕ್ಟೋಬರ್‌ 2ರಂದು ವಿವಾಹವಾದೆವು. ಅವರು ಜೀವನದ ಎಲ್ಲಾ ಏಳು ಬೀಳಿನಲ್ಲೂ ಕೈಜೋಡಿಸಿ ಜೊತೆಗಿದ್ದಾಳೆ, ಮಾನಸಿಕ ಬೆಂಬಲ ನೀಡಿದ್ದಾಳೆ. ಮನ್‌ದೀಪ್‌ ರಾಯ್‌ ಎಂದು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಲ್ಲಿ ಮಗಳು ಹಾಗೂ ಪತ್ನಿ ಸಹಕಾರ ಹೆಚ್ಚಿದೆ. 
ನನಗೆ ಪ್ರತಿ ಹೊಸ ಸಿನಿಮಾಗಳಲ್ಲಿ ನಟನೆಗೆ ಸಿಕ್ಕ ಅವಕಾಶಗಳು ಒಂದಿಲ್ಲೊಂದು ಬಾಳ ತಿರುವು. ಕಲಾವಿದರಿಗೆ ನಮ್ಮ ನಟನೆಯ ಕೌಶಲ್ಯದಿಂದಲೇ ಮುಂದಿನ ಚಿತ್ರಗಳ ಅವಕಾಶಗಳು ಲಭಿಸುವುದು. ಹಲವು ಚಿತ್ರೀಕರಣಗಳ ವೇಳೆ ಹಾಸ್ಯ ಪಾತ್ರಗಳನ್ನು ನಿರ್ದೇಶಕರು ಸೂಚಿಸಿದ್ದಕ್ಕಿಂತಲೂ ಅದಕ್ಕೆ ಮತ್ತಷ್ಟುಹಾಸ್ಯಲೇಪಿಸಿ ನಟಿಸಿರುತ್ತೇನೆ, ಅದು ನಿರ್ದೇಶಕರು, ನಟರ ಮೆಚ್ಚುಗೆಗೆ ಪಾತ್ರವಾಗಿರುತ್ತದೆ. ಕನ್ನಡದ ಸಿನಿಮಾಗಳಲ್ಲಿ ನಟನೆ ಗುರುತಿಸಿ ತಮಿಳು, ತೆಲುಗು, ಹಿಂದಿ, ಮಲಯಾಳಿ ಚಿತ್ರಗಳಲ್ಲಿ ನಟಿಸುವ ಅವಕಾಶಗಳೂ ಬಂದವು. ಕೆಲವು ಸಭೆ ಸಮಾರಂಭಗಳಲ್ಲಿ ಅಭಿಮಾನಿಗಳು ನನ್ನನ್ನು ಚಿತ್ರದ ಪಾತ್ರವೊಂದರಿಂದ ಗುರುತಿಸಿದರೆ ಬಹಳ ಸಂತೋಷ­ವಾಗುತ್ತದೆ. ಇಂತಹ ಅಭಿಮಾನಿಗಳ ಅಭಿಮಾನದ ಮಾತುಗಳ ಮುಂದೆ ದುಡ್ಡು ಮುಖ್ಯವೇ ಅಲ್ಲ ಎಂದು ಎನಿಸಿಬಿಡುತ್ತದೆ. 

ಜೀವನದಲ್ಲಿ ಕಮಲಹಾಸನ್‌, ಅಮೋಲ್‌ ಪಾಲೇಕರ್‌, ನಾನಾ ಪಾಟೇಕರ್‌ರಂತಹ ಅದ್ಭುತ ಹಿರಿಯ ನಟರ ಜತೆ ಸಿನಿಮಾಗಳಲ್ಲಿ ನಟಿಸಿದ್ದೇನೆ. ‘ಆಕಸ್ಮಿಕ' ಚಿತ್ರದಲ್ಲಿ ವರನಟ ರಾಜ್‌ಕುಮಾರ್‌ ಹಾಗೂ ‘ಪುಷ್ಪಕವಿಮಾನ'ದಲ್ಲಿ ಕಮಲ್‌ಹಾಸನ್‌ ಜತೆ ನಟಿಸುವ ಅವಕಾಶ ಲಭಿಸಿದ್ದು ಅದೃಷ್ಟಹಾಗೂ ಜೀವನದ ಮತ್ತೊಂದು ಸಾರ್ಥಕ ಕ್ಷಣವಾಗಿತ್ತು.

ಶಂಕರ್‌ ಎಲ್ಲ ನಟರಿಗೂ ‘‘ನಟನೆಗೆ ನ್ಯಾಯ ಕೊಡು'' ಎನ್ನುತ್ತಿ­ದ್ದರೆ, ಅನಂತ್‌ನಾಗ್‌ ‘‘ಪಾತ್ರವನ್ನು ಅನುಭವಿಸಬೇಕು. ನೀನೆ ಪಾತ್ರವಾಗು'' ಎನ್ನುತ್ತಿದ್ದರು. ರಾಜ್‌ಕುಮಾರ್‌ ನಟನೆಯನ್ನು ಪೂಜನೀಯವಾಗಿ ಕಾಣುತ್ತಿದ್ದ ಬಗೆ, ಶಿವರಾಂ ನನ್ನ ಕನ್ನಡ ಕಲಿಕೆಗೆ ನೀಡುತ್ತಿದ್ದ ಪರೋಕ್ಷ ಪ್ರೋತ್ಸಾಹ... ಹೀಗೆ ಒಬ್ಬೊಬ್ಬ ಕಲಾವಿದರಿಂದಲೂ ಒಂದೊಂದು ಗುಣಗಳನ್ನು, ನಟನಾ ಕೌಶಲ್ಯ ರೂಢಿಸಿಕೊಂಡೆ. ಯಾವ ಪ್ರಕಾರದ ಸಿನಿಮಾವಾದರೂ ನನಗೆ ಸೈ. ನಾವು ಮಾಡಬೇಕಿರುವುದು ನಟನೆ. ನಾನು ಇಂದಿಗೂ ಚಿತ್ರೀ­ಕರಣದ ಮುನ್ನ ಮೂವರನ್ನು ನೆನೆಯುತ್ತೇನೆ. ಮೊದಲು ನನ್ನ ತಾಯಿ, ನಂತರ ಶಂಕರ್‌ ತಾಯಿ, ಕೊನೆಯದಾಗಿ ತಾಯಿ ಸರಸ್ವತಿ ದೇವಿ. ಈ ಮೂವರು ದೇವತೆಗಳ ಆಶೀರ್ವಾದ ನನ್ನ ಮೇಲಿದೆ. ನನ್ನ ಜೀವನದ ಬಹು ದೊಡ್ಡ ಆಸೆ, ಕನ್ನಡ ಹಾಗೂ ಮರಾಠಿ ಭಾಷೆಗಳಲ್ಲಿ ನನ್ನ ನಿರ್ದೇಶನದಲ್ಲಿ ಸಿನಿಮಾ ಮಾಡುವುದು. ಶೀಘ್ರ­ದಲ್ಲೇ ಕನ್ನಡ ಚಿತ್ರ ಸೆಟ್ಟೇರಲಿದ್ದು, ತಯಾರಿ ನಡೆಸ­ಲಾಗುತ್ತಿದೆ. ಚಿತ್ರದಲ್ಲಿ ಅನಂತನಾಗ್‌ ಪ್ರಮುಖ ಪಾತ್ರ­ನಿರ್ವಹಿಸಲಿದ್ದಾರೆ.

ಕನ್ನಡವೇ ಬಾರದ ನಟನೊಬ್ಬ ಕರ್ನಾಟಕಕ್ಕೆ ಬಂದು ನೆಲೆಸಿ, ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡು, ಕೋಟ್ಯಂ­ತರ ಅಭಿಮಾನಿಗಳ ಮನಗೆಲ್ಲುವ ಅವಕಾಶ ಲಭಿಸಿದೆ. 38 ವರ್ಷ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸಿದ್ದೇನೆ. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಸಿನಿಮಾ ನನಗೆ ಆತ್ಮತೃಪ್ತಿ, ಹಣ, ನೆಮ್ಮದಿ ಹಾಗೂ ಪ್ರಸಿದ್ಧಿ ಎಲ್ಲವನ್ನೂ ನೀಡಿದೆ. ನನ್ನ ಆರೋಗ್ಯ ನಾನು ನಟಿಸಲು ಅವಕಾಶ ನೀಡುವವರೆಗೂ ಅಭಿನಯಿಸುತ್ತೇನೆ. ಜೀವನದಲ್ಲಿ ತಿರುವುಗಳು ಕೆಲವು ಘಟಿಸುತ್ತವೆ, ಕೆಲವನ್ನು ನಾವು ಕಂಡುಕೊಳ್ಳಬೇಕು.

(ನಿರೂಪಣೆ: ಮೇಘಶ್ರೀ ದೇವರಾಜ್)