ಕೊಚ್ಚಿ[ಜ.23]: ಸಂಪ್ರದಾಯಕ್ಕೆ ವಿರುದ್ಧವಾಗಿ ಶಬರಿಮಲೆ ದೇವಸ್ಥಾನ ಪ್ರವೇಶಿಸಿ ಅತ್ತೆಯಿಂದಲೇ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಕೇರಳ ಮೂಲದ ಕನಕದುರ್ಗಾ ಅವರಿಗೆ ಇದೀಗ ಮನೆಯೊಳಗೆ ಸೇರಿಸಿಕೊಳ್ಳಲು ಅವರ ಕುಟುಂಬಸ್ಥರೇ ನಿರಾಕರಿಸಿದ್ದಾರೆ. ಶಬರಿಮಲೆ ಪ್ರವೇಶಿಸಿದ್ದಕ್ಕೆ ಅತ್ತೆಯಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಬಿಡುಗಡೆ ಹೊಂದಿದ ಕನಕದುರ್ಗಾ ಅವರು ಸರ್ಕಾರ ವಸತಿ ಗೃಹದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಕಳೆದ ವರ್ಷದ ಡಿಸೆಂಬರ್‌ 22ರಂದು ತಾನು ರಾಜ್ಯ ರಾಜಧಾನಿಯಲ್ಲಿ ನಡೆಯುತ್ತಿರುವ ಸಮಾರಂಭವೊಂದಕ್ಕೆ ತೆರಳುತ್ತಿರುವುದಾಗಿ ಮನೆಯಲ್ಲಿ ಸುಳ್ಳು ಹೇಳಿದ ಕನಕದುರ್ಗಾ ಅವರು ಶಬರಿಮಲೆಗೆ ಹೋಗಿದ್ದಾರೆ. ಡಿ.24ರಂದು ಭಕ್ತಾದಿಗಳ ವಿರೋಧದಿಂದಾಗಿ ಕನಕದುರ್ಗಾ(39) ಮತ್ತು ಬಿಂದು(40) ದೇವಸ್ಥಾನ ಪ್ರವೇಶ ಸಾಧ್ಯವಾಗಿರಲಿಲ್ಲ. ಇದರ ಹೊರತಾಗಿಯೂ, ಸ್ಥಳದಿಂದ ಕಾಲ್ಕಿತ್ತದ ಈ ಇಬ್ಬರು ಕೊನೆಗೆ ಪೊಲೀಸರ ಭದ್ರತೆಯಲ್ಲಿ ಜ.2ರಂದು ಅಯ್ಯಪ್ಪನ ದರ್ಶನ ಪಡೆದಿದ್ದರು.

ಇದರಿಂದ ಕೋಪಗೊಂಡ ಕನಕದುರ್ಗಾ ಅವರ ಅತ್ತೆ-ಮಾವಂದಿರು ಆಕೆಯನ್ನು ಮನೆಯಿಂದ ಹೊರದಬ್ಬಿದ್ದಾರೆ. ಅಲ್ಲದೆ, ಆಕೆ ದೇವಸ್ಥಾನ ಪ್ರವೇಶಕ್ಕೆ ಪ್ರತಿಯಾಗಿ ಸಾರ್ವಜನಿಕವಾಗಿ ಹಿಂದೂ ಸಮುದಾಯದ ಕ್ಷಮೆ ಕೇಳುವವರೆಗೂ ಕನಕದುರ್ಗಾ ಅವರನ್ನು ಮನೆಯೊಳಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಆಕೆಯ ಕುಟುಂಬಸ್ಥರು ಹೇಳುತ್ತಿದ್ದಾರೆ.